ಉಡುಪಿ: ಭಕ್ತ ಜನ ಸಾಗರದ ಮಧ್ಯೆ ವೈಭವದ ‘ಶ್ರೀಕೃಷ್ಣ ಲೀಲೋತ್ಸವ’

Update: 2023-09-07 15:20 GMT

ಉಡುಪಿ, ಸೆ.7: ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಳೆದ ಕೆಲವು ವರ್ಷ ಕೋವಿಡ್‌ನಿಂದಾಗಿ ಸೀಮಿತ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀಕೃಷ್ಣನ ಜನ್ಮ ಹಾಗೂ ಬಾಲಲೀಲೆಗಳನ್ನು ನೆನಪಿಸುವ ಶ್ರೀಕೃಷ್ಣಲೀಲೋತ್ಸವ, ವಿಟ್ಲಪಿಂಡಿ, ಮೊಸರುಕುಡಿಕೆ ಈ ಬಾರಿ ಭೋರ್ಗೆರೆವ ಭಕ್ತ ಜನಸಾಗರದ ಮಧ್ಯೆ ವೈಭವದಿಂದ ಸಂಪನ್ನಗೊಂಡಿತು.

ಅಪರಾಹ್ಣ 3 ಗಂಟೆಗೆ ಪ್ರಾರಂಭಗೊಂಡ ವಿಟ್ಲಪಿಂಡಿ ಉತ್ಸವ, ಶ್ರೀಕೃಷ್ಣ ಲೀಲೋತ್ಸವದ ವೈಭವದ ಶೋಭಾಯಾತ್ರೆಯಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಶಿರೂರು ಮಠಾಧೀಶ ಶ್ರೀವೇದವರ್ಧನತೀರ್ಥರು ಪಾಲ್ಗೊಂಡರು.

ಈ ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯ(ಮಣ್ಣಿನಲ್ಲಿ ತಯಾರಿಸಿದ ನೀಲಿ ಬಣ್ಣದ ಶ್ರೀಕೃಷ್ಣನ ಮೂರ್ತಿ) ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಇನ್ನೊಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಉತ್ಸವ ಮೂರ್ತಿನ್ನಿರಿಸಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಸಲುವಾಗಿ ಮಣ್ಣಿನ ಮಡಕೆಯಲ್ಲಿ ಮೊಸರು, ಹಾಲು, ಓಕುಳಿಗಳನ್ನು ತುಂಬಿ ರಥಬೀದಿಯ ಸುತ್ತಲೂ ವಿಶೇಷವಾಗಿ ನಿರ್ಮಿಸಿದ 13 ಗುರ್ಜಿಗಳಿಗೆ ಅವುಗಳನ್ನು ಕಟ್ಟಿ ಯಾದವ ವೇಷಧಾರಿಗಳಾದ ಉಡುಪಿಯ ಗೊಲ್ಲರು ಉದ್ದನೆಯ ಕೋಲುಗಳಿಂದ ಮಡಕೆಗಳನ್ನು ಒಡೆಯುವ ಆಟವನ್ನು ಆಡಿದರು.

ರಥಬೀದಿಯ ಅದಮಾರು ಮತ್ತು ಪುತ್ತಿಗೆ ಮಠದ ಮಧ್ಯಭಾಗದಲ್ಲಿ ಹಾಕ ಲಾದ ವೇದಿಕೆಯಲ್ಲಿ ಹುಲಿವೇಷ ಪ್ರದರ್ಶನವನ್ನು ಪರ್ಯಾಯ ಸ್ವಾಮೀಜಿ ಹಾಗೂ ಕಾಣಿಯೂರು, ಶಿರೂರು ಸ್ವಾಮೀಜಿ ವೀಕ್ಷಿಸಿದರು. ಬಳಿಕ ಸ್ವಾಮೀಜಿಗಳು ಉಂಡೆ, ಚಕ್ಕುಲಿ ಹಾಗೂ ಹಣ್ಣು ಹಂಪಲುಗಳನ್ನು ಭಕ್ತ ಸಮೂಹದ ಮಧ್ಯೆ ಎಸೆದರು. ಸ್ವಾಮೀಜಿ ಎಸೆದ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಮುಗಿ ಬಿದ್ದರು.

ಮೆರವಣಿಗೆಯ ಕೊನೆಯಲ್ಲಿ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವು ದರೊಂದಿಗೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ವಿಧಿಗಳು ಸಂಪನ್ನಗೊಂಡವು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶೃದ್ಧೆ, ಭಕ್ತಿಗಳಿಂದ ವೈವಿಧ್ಯಮಯ ಧಾರ್ಮಿಕ, ಸಾಸ್ಂಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಮೆರವಣಿಗೆಯಲ್ಲಿ ಹುಲಿವೇಷ, ಚಂಡೆ, ತಟ್ಟಿರಾಯ, ವಾದ್ಯ, ಕೃಷ್ಣ ವೇಷ, ರಕ್ಕಸ ವೇಷ, ಗಾಂಧೀಜಿ ಸೇರಿದಂತೆ ವಿವಿಧ ವೇಷಗಳು ಕಂಡುಬಂದವು. ಶಿರೂರು ಮಠದ ಬಳಿ ದಿ.ಶ್ರೀಲಕ್ಷ್ಮೀವರತೀರ್ಥರು ಪ್ರಾರಂಭಿಸಿದ ಹುಲಿವೇಷ ಹಾಗೂ ಜಾನಪದ ವೇಷಗಳ ಪ್ರದರ್ಶನವನ್ನು ಮೂರ್ನಾಲ್ಕು ವರ್ಷಗಳ ಬಳಿಕ ಈಗಿನ ಶಿರೂರು ಯತಿಗಳು ಪುನರಾರಂಭಿಸಿದರು.

ರಾಜಾಂಗಣದಲ್ಲಿ ಸಂಜೆ ಹುಲಿವೇಷ, ಜಾನಪದ ಕುಣಿತ ಸ್ಪರ್ಧೆಗಳು ನಡೆದವು. ಮಠದ ಅನ್ನಬ್ರಹ್ಮ ಹಾಗೂ ಭೋಜನ ಶಾಲೆಯಲ್ಲಿ ಬೆಳಗಿನಿಂದಲೇ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಪ್ರಸಾದ ಸ್ವೀಕರಿಸಿದರು.

ಶ್ರೀಕೃಷ್ಣ ಜಯಂತಿಯ ಪ್ರಯುಕ್ತ, ಕಳೆದ ನಡುರಾತ್ರಿ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥರು ಕೃಷ್ಣದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥರು ಹಾಗೂ ಶಿರೂರು ಮಠಾಧೀಶ ಶ್ರೀವೇದವರ್ಧನತೀರ್ಥರೊಂದಿಗೆ ತುಳಸಿ ಸನ್ನಿಧಿಯಲ್ಲಿ ಅರ್ಘ್ಯಪ್ರಧಾನ ಮಾಡಿದ್ದರು.

ಬಿಗಿ ಬಂದೋಬಸ್ತ್: ವಿಟ್ಲಪಿಂಡಿಯಲ್ಲಿ ನಾಡಿನಾದ್ಯಂತದಿಂದ ಬಂದ ಸಹಸ್ರಾರು ಸಂಖ್ಯೆಯ ಭಕ್ತರು ಭಾಗಿಯಾಗಲಿದ್ದ ಹಿನ್ನೆಲೆಯಲ್ಲಿ ರಥಬೀದಿ, ರಾಜಾಂಗಣ ಪಾರ್ಕಿಂಗ್ ಪ್ರದೇಶ ಹಾಗೂ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಗರದ ಹಲವು ರಸ್ತೆಗಳಲ್ಲಿ ಸುಧೀರ್ಘ ಟ್ರಾಫಿಕ್ ಜಾಮ್ ಕಂಡುಬಂದಿದ್ದು, ಪಾದಚಾರಿಗಳು ಪರದಾಡುವಂತಾಯಿತು.








 




 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News