ಉಡುಪಿ: 67ನೇ ವಿಮಾ ಸಪ್ತಾಹ ಉದ್ಘಾಟನೆ
ಉಡುಪಿ, ಸೆ.1: ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಭಾಗದ ವತಿಯಿಂದ 67ನೇ ವಿಮಾ ಸಪ್ತಾಹದ ಉದ್ಘಾಟನೆ ಇಂದು ಅಜ್ಜರಕಾಡಿನಲ್ಲಿ ರುವ ಉಡುಪಿ ವಿಭಾಗೀಯ ಕಚೇರಿಯಲ್ಲಿ ನಡೆಯಿತು.
ಉಡುಪಿಯ ಹಿರಿಯ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ವಿ.ಮುಧೋಳ್ ಇವರು ಧ್ವಜಾರೋಹಣ ನೆರವೇರಿಸಿದರೆ, ರಾಜೇಶ್ ಮುಧೋಳ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಬಿಜು ಜೋಸೆಫ್ ಅವರು ದೀಪ ಬೆಳಗಿಸುವ ಮೂಲಕ ವಿಮಾ ಸಪ್ತಾಹಕ್ಕೆ ಚಾಲನೆ ನೀಡಿದರು.
ರಾಜೇಶ್ ಮುಧೋಳ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ 2022-23ನೇ ಸಾಲಿನಲ್ಲಿ ಎಲ್‌ಐಸಿ ಉಡುಪಿ ವಿಭಾಗ ಸಾಧನೆಯ ವಿವರಗಳನ್ನು ನೀಡಿದರು. ಮುಖ್ಯ ಅತಿಥಿಯಾಗಿ ಉಡುಪಿ ಆಕ್ಸಿಸ್ ಬ್ಯಾಂಕಿನ ಕ್ಲಸ್ಟರ್ ಹೆಡ್ ಬಿ.ಸುರೇಶ್ ಅವರು ಪಾಲ್ಗೊಂಡಿದ್ದರು.
ಬಿಜು ಜೋಸೆಫ್ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಮ್ಯಾನೇಜರ್ ಎಚ್.ಪ್ರಭಾಕರ್ ವಂದಿಸಿದರು. ಸೇಲ್ಸ್ ಮ್ಯಾನೇಜರ್ ಪುರಂದರ ಅವರು ಕಾರ್ಯಕ್ರಮ ನಿರೂಪಿಸಿದರು.
ವಿಭಾಗದ ಸಾಧನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾರುಕಟ್ಟೆ ವ್ಯವಸ್ಥಾಪಕ ಬಿಜು ಜೋಸೆಫ್, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡ ಉಡುಪಿ ವಿಭಾಗದಲ್ಲಿ 17 ಶಾಖಾ ಕಚೇರಿಗಳು, ಎಂಟು ಉಪಗ್ರಹ ಶಾಖೆಗಳು, 5 ಮಿನಿ ಕಚೇರಿಗಳು ಕಾರ್ಯಾಚರಿಸುತ್ತಿವೆ ಎಂದರು.
ವಿಭಾಗದ ಒಟ್ಟು 1.92ಲಕ್ಷ ಪಾಲಿಸಿ ಗುರಿಯಲ್ಲಿ 1.65ನ್ನು ಸಾಧಿಸಿದ್ದು ಶೇ.86.23 ಸಾಧನೆ ಮಾಡಲಾಗಿದೆ. ಅದೇ ರೀತಿ 520 ಕೋಟಿ ರೂ. ಪ್ರಥಮ ಪ್ರೀಮಿಯಂನಲ್ಲಿ 428.23ನ್ನು ಸಂಗ್ರಹಿಸುವ ಮೂಲಕ ಶೇ.85.15ನ್ನು ಸಾಧಿಸಲಾಗಿದೆ ಎಂದರು.
2023-24ನೇ ಸಾಲಿನಲ್ಲಿ 43,620 ಪಾಲಿಸಿಗಳು ಮಾರಾಟವಾಗಿದ್ದು, ಪ್ರಥಮ ಪ್ರೀಮಿಯಂ ಆದಾಯವಾಗಿ 129.85 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಈ ಬಾರಿ ಹೊಸದಾಗಿ ಧನವೃದ್ಧಿ ಸಿಂಗಲ್ ಪ್ರೀಮಿಯಂ ಪಾಲಿಸಿ ಹಾಗೂ ಜೀವನ್ ಕಿರಣ್ ಎಂಬ ಪಾಲಿಸಿಗಳನ್ನು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಬಿಜು ಜೋಸೆಫ್ ತಿಳಿಸಿದರು.