ಉಡುಪಿ: ವಿಶ್ವ ಅಲ್ಝಿಮರ್ಸ್ ದಿನದ ಮಾಹಿತಿ ಕಾರ್ಯಾಗಾರ
ಉಡುಪಿ, ಸೆ.22: ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಮತ್ತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮರೆಗುಳಿ ದಿನದ (ಅಲ್ಝೀಮರ್ಸ್ ಡೇ) ಅಂಗವಾಗಿ ಮರೆಗುಳಿ ರೋಗವಿರುವ ರೋಗಿಗಳಿಗೆ ನೀಡುವ ವೈದ್ಯಕೀಯ ಸೇವೆ ವಿಷಯದ ಕುರಿತ ಮಾಹಿತಿ ಕಾರ್ಯಗಾರ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗ ಸ್ಮಾರಕ ಹಾಲ್‌ನಲ್ಲಿ ನಡೆಯಿತು.
ಮುಂಬಯಿಯ ಡಾ.ಎ.ವಿ.ಬಾಳಿಗ ಸ್ಮಾರಕ ಚಾರಿಟೀಸ್ ಮತ್ತು ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಡಾ.ಆರ್.ವಿ. ಬಾಳಿಗ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಾಹೆಯ ಫೈಮರ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಡಾ.ಎಲ್ಸ ಸನಟೊಂಬಿ ದೇವಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎ.ವಿ. ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ ಪಿ ವಿ ಭಂಡಾರಿ ವಹಿಸಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಇವರು ಸ್ವಾಗತಿಸಿದರು. ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಪಿಹೆಚ್‌ಡಿ ಸ್ಕಾಲರ್ ಕ್ಲಾರಿಟ ಶೈನಲ್ ಮಾರ್ಟಿಸ್ ವಂದಿಸಿದರು. ಆಪ್ತಸಮಾಲೋಚಕಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ನಂತರ ಮಾಹಿತಿ ಕಾರ್ಯಗಾರ ನಡೆಯಿತು. ಮರೆಗುಳಿ ಕಾಯಿಲೆಯ ಬಗ್ಗೆ ಡಾ.ಪಿ.ವಿ. ಭಂಡಾರಿ ಸಮಗ್ರ ಮಾಹಿತಿ ನೀಡಿದರು. ಮರೆಗುಳಿ ರೋಗದಿಂದ ಬಳಲುವ ಹಿರಿಯ ನಾಗರಿಕರಿಗೆ ನೀಡಬೇಕಾದ ವೈದ್ಯಕೀಯ ಸೇವೆಯ ಕುರಿತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರತಿಭಾ ಲೀಡಿಯ ಬ್ರಾಗ್ಸ್, ಕ್ಲಾರಿಟ ಶ್ಯೆನಲ್, ಸೀಲಿಯ ಪೀಟರ್, ಶ್ರೀನಿಧಿ ಜೋಗಿ ಇವರು ಮಾತಾಡಿದರು.