ನಿರ್ವಹಣೆ, ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ಉಡುಪಿ, ಸೆ.12: ಆರು ಮಹಡಿಯ ಬೃಹತ್ ಕಟ್ಟಡದಲ್ಲಿರುವ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆ ಇದೀಗ ಸರಕಾರಕ್ಕೆ ಬಹಳ ದೊಡ್ಡ ಹೊರೆಯಾಗುತ್ತಿದೆ. ನಿರ್ವಹಣಾ ವೆಚ್ಚ, ಸಂಬಳ ಬಿಡುಗಡೆಯಾಗದೆ ನರ್ಸ್, ಶುಚಿತ್ವ ಹಾಗೂ ನಿರ್ವಹಣಾ ಸಿಬ್ಬಂದಿಗಳು ಕೆಲಸ ತೊರೆಯುತ್ತಿದ್ದಾರೆ. ಇದರಿಂದ ಇಡೀ ಆಸ್ಪತ್ರೆ ಕೊರತೆಗಳಿಂದ ಅವ್ಯವಸ್ಥೆಯ ಆಗರವಾಗುತ್ತಿದೆ.
ಉದ್ಯಮಿ ಬಿ.ಆರ್.ಶೆಟ್ಟಿ ಅವರ ಬಿಆರ್‌ಎಸ್ ಸಂಸ್ಥೆಯು ಆರ್ಥಿಕ ಮುಗ್ಗಟ್ಟಿ ನಿಂದ ಆಸ್ಪತ್ರೆಯ ನಿರ್ವಹಣೆಯನ್ನು ಸಮರ್ಪಕ ವಾಗಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸರಕಾರ ಆಸ್ಪತ್ರೆಯನ್ನು 2022ರ ಜೂನ್ ತಿಂಗಳಲ್ಲಿ ತನ್ನ ಸುಪರ್ದಿಗೆ ಪಡೆ ದಿತ್ತು. ಆದರೆ ವರ್ಷಕ್ಕೆ ಕೋಟ್ಯಂತರ ರೂ. ನಿರ್ವಹಣಾ ವೆಚ್ಚ ಬರುವ ಈ ಬೃಹತ್ ಕಟ್ಟಡವನ್ನು ನಿರ್ವಹಿಸಲು ಸರಕಾರಕ್ಕೆ ಕಷ್ಟಸಾಧ್ಯವಾಗುತ್ತಿದೆ.
ಸಿಬ್ಬಂದಿಗಳ ಕೊರತೆ: 200 ಬೆಡ್‌ಗಳ ಈ ಆಸ್ಪತ್ರೆಗೆ 3 ತಜ್ಞ ವೈದ್ಯರು, 2 ವೈದ್ಯರು, 4 ಹಿರಿಯ ಸ್ಟಾಪ್‌ನರ್ಸ್, 1 ಗ್ರೇಡ್ 2 ಸ್ಟಾಪ್ ನರ್ಸ್, 5 ಪ್ಯಾರಮಿಸ್ಟ್, 40 ಸ್ಟಾಪ್ ನರ್ಸ್, 4 ಲ್ಯಾಬ್ ಟೆಕ್ನಿನಿಶಿಯನ್, 2 ಓಟಿ ಟೆಕ್ನಿನಿಷಿಯನ್, 14 ಹೌಸ್ ಕೀಪಿಂಗ್, 12 ಗಾರ್ಡ್ ಸೇರಿದಂತೆ ಒಟ್ಟು 100 ಹುದ್ದೆಗಳು ಮಂಜೂರಾಗಿವೆ.
ಆದರೆ ಈಗ ಈ ಆಸ್ಪತ್ರೆಯನ್ನು ಕೇವಲ 70 ಬೆಡ್‌ಗೆ ಸೀಮಿತಗೊಳಿಸಲಾಗಿದೆ. ಈ 70 ಬೆಡ್‌ಗಳಿಗೆ 58 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಒಟ್ಟು 31 ಡಿ ಗ್ರೂಪ್ ಹುದ್ದೆಗಳಲ್ಲಿ ಒಂದೇ ಒಂದು ಭರ್ತಿ ಆಗಿಲ್ಲ. 21 ಸಿ ಗ್ರೂಪ್ ಹುದ್ದೆಯಲ್ಲಿ 14 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸದ್ಯ 70 ಬೆಡ್‌ಗಳಿಗೆ 9 ಸ್ಟಾಪ್ ನರ್ಸ್, ಎನ್‌ಆರ್‌ಎಚ್‌ಎಂನ 8 ನರ್ಸ್, 9 ಹೊರಗುತ್ತಿಗೆ ನರ್ಸ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇಲ್ಲಿ ನರ್ಸ್‌ಗಳ ಕೊರತೆಯೇ ಬಹಳ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ತಿಂಗಳಿಗೆ ಸರಾಸರಿ 100 ಹೆರಿಗೆ ಆಗುತ್ತಿದ್ದು, ಜುಲೈ ತಿಂಗಳಲ್ಲಿ 113 ಹೆರಿಗೆ ಆಗಿದೆ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ.ವೀಣಾ ಶೆಟ್ಟಿ.
ನಿರ್ವಹಣೆಗೆ ಹಣ ಇಲ್ಲ: ಬಿಆರ್‌ಎಸ್ ಸಂಸ್ಥೆಯ ಅಧೀನದಲ್ಲಿದ್ದ ಸಂದರ್ಭ ದಲ್ಲಿ ಈ ಆಸ್ಪತ್ರೆಯ ವಿದ್ಯುತ್ ಬಿಲ್ ತಿಂಗಳಿಗೆ 15ಲಕ್ಷ ರೂ.ವರೆಗೆ ಬರುತ್ತಿತ್ತು. ಸರಕಾರಕ್ಕೆ ಹಸ್ತಾಂತರಿಸಿದ ಬಳಿಕ ಕೆಲವೊಂದು ಮಾರ್ಪಡು ಮಾಡಿ ವಿದ್ಯುತ್ ಉಳಿತಾಯದ ವ್ಯವಸ್ಥೆ ಮಾಡಲಾಗಿದ್ದು, ಆ ಬಳಿಕ ತಿಂಗಳಿಗೆ 8ಲಕ್ಷ ರೂ.ವರೆಗೆ ವಿದ್ಯುತ್ ಬಿಲ್ ಬರುತ್ತಿದೆ. ಆದರೂ ಈ ಆಸ್ಪತ್ರೆಯ 1.8ಕೋಟಿ ರೂ. ವಿದ್ಯುತ್ ಬಿಲ್ ಮೆಸ್ಕಾಂಗೆ ಪಾವತಿಸದೆ ಬಾಕಿ ಇರಿಸಲಾಗಿದೆ.
ಅದೇ ರೀತಿ ಬಿಆರ್‌ಎಸ್ ಸಂಸ್ಥೆಯ ಅಧೀನದಲ್ಲಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ಆರು ಮಹಡಿಗೆ ಇರುವ ಸೆಂಟ್ರಲ್ ಎಸಿ, ಲಿಫ್ಟ್ ಸೇರಿದಂತೆ ಇಡೀ ಕಟ್ಟಡ ನಿರ್ವಹಣೆಗೆ ವರ್ಷಕ್ಕೆ 3-4ಕೋಟಿ ರೂ. ಬೇಕಾಗುತ್ತಿತ್ತು. ಆದರೂ ಈಗಲೂ ಇದರ ನಿರ್ವಹಣೆಗೆ ವರ್ಷಕ್ಕೆ ಕೋಟ್ಯಂತರ ರೂ. ಬೇಕಾಗುತ್ತದೆ. ಆದರೆ ಕಳೆದ ಫೆಬ್ರವರಿಯಿಂದ ನಿರ್ವಹಣೆಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಇಲ್ಲಿನ ವೈದ್ಯರು ದೂರಿದರು.
ವೈದ್ಯರ ಸಂಬಳ ಬಾಕಿ: ಇಲ್ಲಿನ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಸಂಬಳ ಬಾಕಿ ಇದ್ದು, ಇದೇ ಕಾರಣವೊಡ್ಡಿ ಅನೇಕ ಹೊರಗುತ್ತಿಗೆ ಸಿಬ್ಬಂದಿಗಳು ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಆಸ್ಪತ್ರೆಯನ್ನು ನಿರ್ವಹಿಸುವುದು ಬಹಳ ಕಷ್ಟವಾಗುತ್ತಿದೆ.
ಮೊದಲು ನಿರ್ವಹಣೆಗೆ 12 ಮಂದಿ ಇದ್ದವರಲ್ಲಿ ಆರು ಮಂದಿ ಸಂಬಳ ಸಿಗದ ಕಾರಣಕ್ಕೆ ಬಿಟ್ಟು ಹೋದರು. ನಂತರ ಆರು ಮಂದಿಯಲ್ಲಿ ಮೂವರು ಬಿಟ್ಟು ಹೋಗಿ ಈಗ ಕೇವಲ ಮೂವರು ಮಾತ್ರ ಇದ್ದಾರೆ. ಇಡೀ ಕಟ್ಟಡವೇ ಹವಾನಿಯಂತ್ರಣದಿಂದ ಕೂಡಿದ್ದರೂ ಇಲ್ಲಿ ಒಬ್ಬನೇ ಒಬ್ಬ ಎಸಿ ಟೆಕ್ನಿನಿಶಿಯನ್ ಇಲ್ಲ ಎಂದು ವೈದ್ಯ ಡಾ.ವೇಣು ಗೋಪಾಲ್ ದೂರಿದರು.
ನಿರ್ವಹಣೆ ಹಾಗೂ ಕ್ಲಿನಿಂಗ್ ಸಿಬ್ಬಂದಿ ಸಂಬಳ ಸಿಗದ ಕಾರಣಕ್ಕೆ ಕೆಲಸ ಬಿಟ್ಟು ಹೋಗುತ್ತಿದ್ದಾರೆ. ನಾಲ್ಕು ಮಂದಿ ವೈದ್ಯರಿಗೆ ಆರು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಇಲ್ಲಿ ನಳ್ಳಿ ಆನ್ ಮಾಡಲು ಕೂಡ ವಿದ್ಯುತ್ ಸಂಪರ್ಕ ಅಗತ್ಯವಾಗಿದೆ. ವಿದ್ಯುತ್ ಕೈಕೊಟ್ಟಾಗ ಒಮ್ಮೆಗೆ ಇಡೀ ಕಟ್ಟಡ ಕತ್ತಲಿನಲ್ಲಿ ಇರುವ ಪರಿಸ್ಥಿತಿ ಇರುತ್ತದೆ. ಇಲ್ಲಿ ಜನರೇಟರ್‌ಗೆ ಒಂದು ಗಂಟೆಗೆ 50ಲೀಟರ್ ಡಿಸೇಲ್ ಬೇಕಾಗುತ್ತದೆ ಎಂದು ಸಿಬ್ಬಂದಿಗಳು ಮಾಹಿತಿ ನೀಡಿದರು.
ಹೊರಗುತ್ತಿಗೆ ಆಧಾರದಲ್ಲಿ ಕ್ಲಿನಿಂಗ್‌ಗೆ ಒಟ್ಟು ಆರು ಮಂದಿ ಇದ್ದಾರೆ. ಇದರಲ್ಲಿ ಮೂವರು ರಾತ್ರಿ ಪಾಳಿ ಕೆಲಸ ಮಾಡುತ್ತಾರೆ. ಉಳಿದ ಮೂವರು ಹಗಲಿನಲ್ಲಿ ಕೆಲಸ ಮಾಡುವವರಲ್ಲಿ ಇಬ್ಬರು ರಜೆಯಲ್ಲಿ ಇದ್ದಾರೆ. ಹಗಲಿನಲ್ಲಿ ಒಬ್ಬರೇ ಇಡೀ ಆರು ಮಹಡಿ ಕಟ್ಟಡ ವನ್ನು ಕ್ಲೀನ್ ಮಾಡುವ ಸ್ಥಿತಿ ಎದುರಾಗಿದೆ ಎಂದು ನರ್ಸ್‌ಗಳು ದೂರಿದರು.
‘ಈ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವುದು ನರ್ಸ್ ಹಾಗೂ ಶುಚಿತ್ವ ಸಿಬ್ಬಂದಿ ಗಳು. ಸದ್ಯ 70 ಬೆಡ್‌ನ ಆಸ್ಪತ್ರೆ ಇದಾಗಿದ್ದು, ಸಿಬ್ಬಂದಿ ಕೊರತೆ ಕಾರಣಕ್ಕಾಗಿ ಹೆರಿಗೆಗೆ ಬರುವರನ್ನು ವಾಪಾಸ್ಸು ಕಳುಹಿಸಲು ಕೂಡ ಆಗುತ್ತಿಲ್ಲ. ನಿರ್ವಹಣೆಗೆ ಹಣ ಬೇಕಾಗಿದ್ದು, ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ’
-ಡಾ.ವೀಣಾ ಶೆಟ್ಟಿ, ಜಿಲ್ಲಾ ಸರ್ಜನ್
‘ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಇಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಇಲ್ಲಿರುವ ಹೊರಗುತ್ತಿಗೆ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳ ಆಗದ ಕಾರಣಕ್ಕೆ ಅವರೆಲ್ಲ ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಇಷ್ಟು ದೊಡ್ಡ ಆಸ್ಪತ್ರೆಯ ನಿರ್ವಹಣೆ ಮಾಡಲು ಕಷ್ಟವಾಗಿ ಸಾಕಷ್ಟು ದೂರುಗಳು ಬರುತ್ತಿವೆ. ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ನಿರ್ವಹಣೆಗೆ ಹಣ ಬರುತ್ತಿಲ್ಲ. ವಿದ್ಯುತ್ ಬಿಲ್ ಬಾಕಿ ಇದೆ. ಸರಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರ ವಿರುದ್ಧ ಹೋರಾಟದ ಮೂಲಕ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ’
-ಯಶ್‌ಪಾಲ್ ಸುವರ್ಣ, ಶಾಸಕರು