ಉಡುಪಿ: ಆ.2ರಂದು ಸಮಾನ ಮನಸ್ಕರ ವೇದಿಕೆ ವತಿಯಿಂದ ಮಣಿಪುರ ಹಿಂಸಾಚಾರ ಖಂಡಿಸಿ ಕಾಲ್ನಡಿಗೆ ಜಾಥ, ಪ್ರತಿಭಟನಾ ಸಭೆ

Update: 2023-07-29 15:05 GMT

ಉಡುಪಿ, ಜು.29: ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲೆಯ ಸಮಾನ ಮನಸ್ಕರ ವೇದಿಕೆಯಿಂದ ಇದೇ ಆ.2ರಂದು ಕಾಲ್ನಡಿಗೆ ಜಾಥ ಹಾಗೂ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಚಾಲಕ ಪ್ರಶಾಂತ ಜತ್ತನ್ನ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ನಡಿಗೆ ಜಾಥವು ಆ.2ರ ಅಪರಾಹ್ನ 2 ಗಂಟೆಗೆ ನಗರದ ಶೋಕಮಾತಾ ಇಗರ್ಜಿ ಆವರಣದಿಂದ ಪ್ರಾರಂಭಗೊಳ್ಳಲಿದ್ದು, ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ.ಮಾರ್ಗ, ಕೋರ್ಟ್ ರೋಡ್ ಮೂಲಕ ಸಾಗಿ ಮಿಷನ್ ಕಾಂಪೌಂಡ್‌ನಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ಸಂಜೆ 4 ಗಂಟೆಗೆ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು, ಸಭೆಯನ್ನುದ್ದೇಶಿಸಿ ಮಾಧ್ಯಮ ಚಿಂತಕ, ಚಿಂತಕ ಬೆಂಗಳೂರಿನ ಶಿವಸುಂದರ್ ಮುಖ್ಯ ಭಾಷಣ ಮಾಡಲಿದ್ದಾರೆ. ರ್ಯಾಲಿ ಹಾಗೂ ಪ್ರತಿಭಟನಾ ಸಭೆಯಲ್ಲಿ ಸುಮಾರು 7000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಮಣಿಪುರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ವಿವಿಧ ಘಟನೆಗಳು, ರಾಜಕೀಯ ಬೆಳವಣಿಗೆಗಳು ಕಳೆದ ಮೇ ತಿಂಗಳಿನಿಂದ ಸ್ಪೋಟಕ ಸ್ಥಿತಿಗೆ ತಲುಪಿದ್ದು, ಅಲ್ಲೀಗ ಹಿಂಸೆ ನಿತ್ಯದ ಪರಿಪಾಟವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ನೇರ ಮೂಗಿನಡಿಯಲ್ಲಿ ಈ ಹಿಂಸಾಚಾರ ನಡೆಯುತ್ತಿದ್ದರೂ, ಅದನ್ನು ನಿಯಂತ್ರಿಸಲು ಅವು ವಿಫಲವಾಗಿವೆ ಎಂದರು.

ನಮ್ಮ ಪ್ರತಿಭಟನೆ ಧರ್ಮಾಧಾರಿತವಲ್ಲ. ಬುಡಕಟ್ಟು ಜನಾಂಗದ ಮೇಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸಿ ನಾವು ಈ ಪ್ರತಿಭಟನೆ ನಡೆಸುತಿದ್ದೇವೆ. ಮೂರು ತಿಂಗಳಾದರೂ ಮಣಿಪುರದ ಬೆಳವಣಿಗೆಯ ಕುರಿತಂತೆ ಮೌನಧಾರಿಯಾಗಿದ್ದು, ಮೊನ್ನೆ ಮೂರು ಶಬ್ದಗಳನ್ನಷ್ಟೇ ಮಾತನಾಡಿದ್ದಾರೆ. ಪ್ರಧಾನಿಯನ್ನು ಎಚ್ಚರಿಸುವುದು ರ್ಯಾಲಿಯ ಉದ್ದೇಶಗಳಲ್ಲೊಂದಾಗಿದೆ ಎಂದು ಪ್ರಶಾಂತ ಜತ್ತನ್ನ ನುಡಿದರು.

ದಲಿತ ಮುಖಂಡ ಸುಂದರ ಮಾಸ್ತರ್ ಮಾತನಾಡಿ, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರ ನಡೆದರೂ ಪ್ರಧಾನಿ ಮಾತ ನಾಡುತ್ತಿಲ್ಲ. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸುತಿದ್ದರೂ, ಸಂಸತ್ತಿನಿಂದ ದೂರ ಉಳಿದು ಅಡಗಿ ಕುಳಿತ ಅವರ ನಡೆ ಅಕ್ಷಮ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಯಾಸಿನ್ ಮಲ್ಪೆ, ವಂ.ಡೆನಿಸ್ ಡೇಸಾ, ಪ್ರೊ.ಫಣಿರಾಜ್, ಉದ್ಯಾವರ ನಾಗೇಶ್ ಕುಮಾರ್, ರೋನಾಲ್ಡ್, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವೆರಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News