ಉಡುಪಿ: ಆನ್‌ಲೈನ್ ವಂಚನೆ ಪ್ರಕರಣ: ಒರಿಸ್ಸಾ ಮೂಲದ ಆರೋಪಿ ಬಂಧನ, 1.56ಲಕ್ಷ ರೂ. ನಗದು ವಶ
ಉಡುಪಿ, ಸೆ.4: ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿರುವ ಉಡುಪಿ ಸೆನ್ ಪೊಲೀಸರು, ಲಕ್ಷಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಒಡಿಶಾ ರಾಜ್ಯದ ಗಂಜಮ್ ಜಿಲ್ಲೆಯ ಕೊನಪಾಲದ ವಿಶಾಲ್ ಕೋನಪಾಲ (30) ಬಂಧಿತ ಆರೋಪಿ. ಈತನಿಂದ 1,56,100ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಬೆಳ್ಮಣ್ ನಿವಾಸಿ ಜಯ ಶೆಟ್ಟಿ ಎಂಬವರ ಮಗ ಪ್ರಶಾಂತ್ ಶೆಟ್ಟಿ ಎಂಬವರು ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ಎರಡು ಖಾತೆಗಳನ್ನು ಹೊಂದಿದ್ದರು.
ಫೆ.10ರಿಂದ 20ರ ಮಧ್ಯಾವಧಿಯಲ್ಲಿ ಪ್ರಶಾಂತ್ ಶೆಟ್ಟಿಯ ಗಮನಕ್ಕೆ ಬಾರದೇ ಅಪರಿಚಿತರು ಆನ್‌ಲೈನ್ ಮೂಲಕ ಎರಡು ಖಾತೆಗಳಿಂದ ಹಂತ ಹಂತವಾಗಿ ಒಟ್ಟು 1,56,100ರೂ. ನಗದನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ಎಎಸ್‌ಐ ಉಮೇಶ್ ಜೋಗಿ ಮತ್ತು ಸಿಬ್ಬಂದಿ ನಿಲೇಶ್ ತಂಡ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಒರಿಸ್ಸಾ ರಾಜ್ಯದ ಬೈರಂಪುರಕ್ಕೆ ತೆರಳಿ ಬಂಧಿಸಿದೆ ಎಂದು ತಿಳಿದುಬಂದಿದೆ.