ಉಡುಪಿ: ಬೀದಿಬೀದಿಗಳಲ್ಲಿ ಘರ್ಜಿಸುತ್ತಿವೆ ಬಗೆಬಗೆಯ ಹುಲಿವೇಷ

Update: 2024-08-26 16:12 GMT

ಉಡುಪಿ: ಶ್ರೀಕೃಷ್ಣ ಜಯಂತಿ ಹಿನ್ನೆಲೆಯಲ್ಲಿ ಇಂದು ಉಡುಪಿ ನಗರದಲ್ಲಿ ಹುಲಿವೇಷ ಸೇರಿದಂತೆ ವಿವಿಧ ವೇಷ ತಂಡಗಳ ಅಬ್ಬರ ಜೋರಾಗಿದೆ. ಅದರಲ್ಲೂ ಈ ಬಾರಿ ಯುವತಿಯರ ಹುಲಿವೇಷ ತಂಡಗಳು ವಿಶೇಷ ಸದ್ದು ಮಾಡುತ್ತಿವೆ.

ಕೊರೋನ ಹಿನ್ನೆಲೆಯಲ್ಲಿ ಹಿಂದಿನ ಮೂರ್ನಾಲ್ಕು ವರ್ಷಗಳ ಕೃಷ್ಣ ಜನ್ಮಾಷ್ಟಮಿ ತನ್ನ ರಂಗನ್ನು ಕಳೆದುಕೊಂಡಿತ್ತು. ಆದರೆ ಈ ಬಾರಿ ಎಲ್ಲಾ ಜೋಶ್‌ನೊಂದಿಗೆ ಅಷ್ಟಮಿ ಮತ್ತೆ ಅಬ್ಬರಿಸುತ್ತಿದೆ. ಈ ಬಾರಿ ವಿವಿಧ ಸಂಘಟನೆಗಳು ಹುಲಿವೇಷ ಕುಣಿತದ ಪ್ರದರ್ಶನಕ್ಕೆ ವಿಶೇಷ ಆದ್ಯತೆ ನೀಡಿರುವುದರಿಂದ 50ಕ್ಕೂ ಅಧಿಕ ಹುಲಿವೇಷ ತಂಡಗಳು ನಗರದ ಬೀದಿ ಬೀದಿಗಳಲ್ಲಿ ಘರ್ಜಿಸತೊಡಗಿವೆ.

ಅನಾರೋಗ್ಯ ಪೀಡಿತ ಮಕ್ಕಳ ನೆರವಿಗಾಗಿ ಬಣ್ಣ ಹಾಕುವ ರವಿ ಕಟಪಾಡಿ ಅವರು ಈ ಬಾರಿ ಅವತಾರ್-2 ವೇಷದಲ್ಲಿ ಎಲ್ಲರ ಗಮನ ಸೆಳೆಯುತಿದ್ದಾರೆ. ಹೀಗೆ ಸಂಗ್ರಹಿಸಿದ ಒಂದು ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಈವರೆಗೆ 130ಕ್ಕೂ ಅಧಿಕ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿರುವ ಅವರು ಈ ಬಾರಿ ಮತ್ತೆ ಅದೇ ಗುರಿಯೊಂದಿಗೆ ಉಡುಪಿ, ಕಟಪಾಡಿ ಆಸುಪಾಸಿನಲ್ಲಿ ಸಂಚರಿಸಿ ಹಣ ಸಂಗ್ರಹಿಸಲಿದ್ದಾರೆ.

ಈ ಇಂದು ಮತ್ತೆ ನಾಳೆ ನಗರದೆಲ್ಲೆಡೆ ಕೇಳುವುದು ಹುಲಿ ತಾಸೆ ಸದ್ದು. ನಿಟ್ಟೂರು, ಮಲ್ಪೆ, ಕಾಡಬೆಟ್ಟು, ಕಡಿಯಾಳಿ, ಮಾರ್ಪಳ್ಳಿ ಚಂಡೆಬಗಳ ಮೊದಲಾದ ಹುಲಿವೇಷ ತಂಡಗಳು ಅಷ್ಟಮಿಯ ರಂಗು ಹೆಚ್ಚಿಸಿವೆ. ಜಿಲ್ಲೆಯಾದ್ಯಂತ 110ಕ್ಕೂ ಹೆಚ್ಚು ಹುಲಿವೇಷ ತಂಡಗಳು ಅಷ್ಟಮಿ ಸಂಭ್ರಮದಲ್ಲಿ ಭಾಗವಹಿಸಿವೆ.

ನಗರದಲ್ಲಿ ಬೆಳಗ್ಗೆಯಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ರಸ್ತೆ, ಆಭರಣ ಮಳಿಗೆ ಸಮೀಪ, ಚಿತ್ತರಂಜನ್ ಸರ್ಕಲ್, ಕೋರ್ಟ್ ರೋಡ್, ಕಲ್ಸಂಕ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News