ಉಡುಪಿ : ಸೆ.25ರಿಂದ ಹಟ್ಟಿಯಂಗಡಿ ಮೇಳದ ‘ಯಕ್ಷ ಪಂಚಮಿ’
ಉಡುಪಿ, ಸೆ.20: ಶ್ರೀಹಟ್ಟಿಯಂಗಡಿ ಯಕ್ಷಗಾನ ಮೇಳದ ನಾಲ್ಕನೇ ವರ್ಷದ ‘ಯಕ್ಷ ಪಂಚಮಿ’ ಐದು ಯಕ್ಷಗಾನ ಪ್ರದರ್ಶನ ಇದೇ ಸೆ.25ರಿಂದ 29ರವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಮೇಳದ ಸಂಚಾಲಕ ವಕ್ವಾಡಿ ರಂಜಿತ್ ಶೆಟ್ಟಿ ತಿಳಿಸಿದ್ದಾರೆ.
ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಉಡುಪಿ ಜಿಲ್ಲೆ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಐದು ದಿನದ ಈ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಪ್ರತಿದಿನ ಸಂಜೆ 7:00ಗಂಟೆಗೆ ಪ್ರದರ್ಶನ ಪ್ರಾರಂಭಗೊಳ್ಳಲಿದೆ. ಮೊದಲ ದಿನ ಸೆ.25ರಂದು ಕರ್ಣಾರ್ಜುನ, 26ರಂದು ಹರಿದರ್ಶನ, 27ರಂದು ವಾಲಿ ಮೋಕ್ಷ, 28ರಂದು ಶ್ರೀಕೃಷ್ಣ ಪಾರಿಜಾತ ಹಾಗೂ ಸೆ.29ರಂದು ಶ್ರೀನಿವಾಸ ಕಲ್ಯಾಣ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ ಎಂದವರು ತಿಳಿಸಿದರು.
ಪರ್ಯಾಯ ಕೃಷ್ಣಾಪುರದ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಸೆ.25ರ ಸಂಜೆ 7ಕ್ಕೆ ಪ್ರದರ್ಶನ ಉದ್ಘಾಟಿಸ ಲಿದ್ದು, ಮನೋಹರ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ವಿ.ಪೈ ಹಾಗೂ ಎಸ್.ಎಲ್.ನಾಯಕ್ ಮುಖ್ಯ ಅತಿಥಿ ಗಳಾಗಿ ಪಾಲ್ಗೊಳ್ಳುವರು.
ಶಂಕರ ಮರಕಾಲರಿಗೆ ಯಕ್ಷ ಪ್ರಶಸ್ತಿ: ಸೆ.29ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಡಗುತಿಟ್ಟಿನ ಖ್ಯಾತ ಬಣ್ಣದ ವೇಷಧಾರಿ ಶಂಕರ ಮರಕಾಲರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುವ ‘ಯಕ್ಷ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ, ಗೋಪಾಲ ಸಿ.ಬಂಗೇರ, ಕೆ.ರಂಜನ್ ಕಲ್ಕೂರ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ,ಡಾ.ರವೀಂದ್ರ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿ ಶಿರಿಯಾರ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.