ಕಾರವಾರ: ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಕಠಿಣ ಸಜೆ, ದಂಡ
ಕಾರವಾರ: ದಾಂಡೇಲಿಯಲ್ಲಿ 1 ಫೆಬ್ರವರಿ 2021 ರಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ ಆರೋಪಿ ಬೋನವೆಂಚರ್ ಡುಮುಂಗ್ ಫರ್ನಾಂಡೀಸ್ ಎಂಬಾತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೋನವೆಂಚರ್ ಗೆ 20 ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ.ದಂಡ ವಿಧಿಸಿ ಕಾರವಾರ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ತೀರ್ಪು ನೀಡಿದ್ದಾರೆ.
ಆರೋಪಿ ಬೋನವೆಂಚರ್ ಡುಮುಂಗ್ ಫರ್ನಾಂಡೀಸ್ ಅಪ್ರಾಪ್ತೆ ಹಾಗೂ ವಿಕಲಾಂಗ ಚೇತನೆಗೆ ಮದುವೆಯಾಗುವುದಾಗಿ ನಂಬಿಸಿ ಅಶ್ಲೀಲ ಪೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ಹಾಗೂ ಅತ್ಯಾಚಾರ ಮಾಡಿದ್ದ. ಆರೋಪಿಗೆ ಅಶ್ಲೀಲ ಪೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ್ದಕ್ಕೆ ಸೆಕ್ಷನ್ 448 ರ ಅಡಿ 1 ವರ್ಷ ಸಜೆ ಹಾಗೂ 5000 ದಂಡ ಪ್ರತ್ಯೇಕವಾಗಿ ವಿಧಿಸಲಾಗಿದೆ.
ದಂಡದ ಮೊತ್ತ ಒಂದು ಲಕ್ಷ ರೂ.ಗಳನ್ನು ಸಂತ್ರಸ್ತ ಬಾಲಕಿಗೆ ನೀಡಲು ನ್ಯಾಯಾಧೀಶೆ ತೀರ್ಪುನಲ್ಲಿ ಆದೇಶಿಸಿದ್ದಾರೆ. ಪೊಲೀಸರು ಈ ಸಂಬಂಧ ದಾಂಡೇಲಿ ಠಾಣೆಯಲ್ಲಿ 2021 ರಲ್ಲಿ ಪ್ರಕರಣ ದಾಖಲಿಸಿ,ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು . 77 ಜನ ಸಾಕ್ಷ್ಯ ನುಡಿದ್ದರು. 38 ದಾಖಲೆಗಳನ್ನು ಆಧರಿಸಿ ನ್ಯಾಯಾಧೀಶರು ತೀರ್ಪು ನೀಡಿದರು ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ತನುಜಾ ಹೊಸಪಟ್ಟಣ ವಾದಿಸಿದ್ದರು.