ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರಪಾಲಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆ

Update: 2024-12-11 08:11 GMT

ಭಟ್ಕಳ: ಮುರುಡೇಶ್ವರದಲ್ಲಿ ಮಂಗಳವಾರ ಸಂಜೆ ಸಮುದ್ರಪಾಲಾಗಿದ್ದ ಕೋಲಾರದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಇಂದು ಪತ್ತೆಯಾಗಿವೆ.

ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ಜೆ. (15), ಲಾವಣ್ಯಾ (15), ಮತ್ತು ವಂದನಾ (15) ಮೃತಪಟ್ಟವರು.

ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಕಣ್ಮರೆಯಾಗಿದ್ದ ವಿದ್ಯಾರ್ಥಿನಿಯರ ಪತ್ತೆಗಾಗಿ ಕರಾವಳಿ ಕಾವಲು ಪೊಲೀಸ್ ಪಡೆಯು ಸ್ಥಳೀಯ ಮೀನುಗಾರರ ಸಹಕಾರದಲ್ಲಿ ಇಂದು ಮುಂಜಾನೆಯಿಂದ ಶೋಧ ಮುಂದುವರಿಸಿದ್ದರು. ಇಂದು ಪೂರ್ವಾಹ್ನ 11:30ೆ ಸುಮಾರಿಗೆ ದೀಕ್ಷಾ ಹಾಗೂ ಲಾವಣ್ಯಾರ ಮೃತದೇಹಗಳು ಇಲ್ಲಿನ ಆರ್.ಎನ್.ಎಸ್. ರೆಸಿಡೆನ್ಸಿ ಹಿಂಭಾಗದ ಸಮುದ್ರ ತೀರದ ಕಲ್ಲುಬಂಡೆ ಸಮೀಪ ಪತ್ತೆಯಾಗಿವೆ. ವಂದನಾ ಅವರ ಮೃತದೇಹ ಸಮೀಪದ ಗುಡ್ಡದ ಕೆಳಭಾಗದಲ್ಲಿ ಪತ್ತೆಯಾಗಿದೆ.

ಇವರೊಂದಿಗೆ ಸಮುದ್ರಪಾಲಾಗಿದ್ದ ಇನ್ನೋರ್ವ ವಿದ್ಯಾರ್ಥಿನಿ ಶ್ರಾವಂತಿ ಗೋಪಾಲಪ್ಪ(15) ಮೃತಪಟ್ಟಿದ್ದಾಳೆ. ಮಂಗಳವಾರ ಸಮುದ್ರದಲ್ಲಿ ಸ್ನಾನಕ್ಕಿಳಿದ ಒಟ್ಟು ಏಳು ವಿದ್ಯಾರ್ಥಿಗಳು ಅಲೆಗಳ ಸುಳಿಗೆ ಸಿಲುಕಿದ್ದರು. ಈ ಪೈಕಿ ಮೂವರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಹಾಗೂ ಉಪವಿಭಾಗಾಧಿಕಾರಿ ಡಾ. ನಯನಾ ಭೇಟಿ ನೀಡಿ, ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News