ಭಟ್ಕಳ: ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಮುಂದೇನು ಕಾರ್ಯಾಗಾರ
ಭಟ್ಕಳ: ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ (ಬಿಎಂವೈಎಫ್) ವತಿಯಿಂದ ಅಂಜುಮನ್ ಪದವಿ ಕಾಲೇಜು ಸಭಾಂಗಣದಲ್ಲಿ "ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಮುಂದೇನು" ಎಂಬ ಕಾರ್ಯಾಗಾರವನ್ನು ಆಯೋಜಿಸಿತು.
ವಿದ್ಯಾರ್ಥಿಗಳ ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ತೃಪ್ತಿದಾಯಕ ನಿರ್ಧಾರಗಳನ್ನು ಕೈಗೊಳ್ಳಲು ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿದ್ದ ಈ ಕಾರ್ಯಕ್ರಮದಲ್ಲಿ 250 ಪಿಯುಸಿ ಮತ್ತು 180 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭಾಗವಹಿಸಿದರು.
ಮಹಾರಾಷ್ಟ್ರದ ಭಿವಂಡಿಯ ಪ್ರಖ್ಯಾತ ಶೈಕ್ಷಣಿಕ ಸಲಹೆಗಾರ ಫಹೀಮ್ ಅಹ್ಮದ್ ಮೊಮಿನ್ ಕಾರ್ಯಾಗಾರದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ನಡೆದ ಮಾರ್ಗದರ್ಶನ ಕಾರ್ಯಗಾರದಲ್ಲಿ, ಕಲೆ, ವಿಜ್ಞಾನ, ವಾಣಿಜ್ಯ, ITI ಕೋರ್ಸ್ ಗಳು, ಮತ್ತು ಡಿಪ್ಲೋಮಾ ಶಿಕ್ಷಣದ ವೃತ್ತಿ ಆಯ್ಕೆಗಳ ಕುರಿತು ವಿವರಿಸಿದ ಮೋಮಿನ್, ಆಕರ್ಷಕ ಓದು, ನಿಯಮಿತ ಹಾಜರಾತಿ ಮತ್ತು ಕಠಿಣ ಪರಿಶ್ರಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಒತ್ತಿಹೇಳಿದರು.
ಪಿಯುಸಿ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ನೀಡಿದ ಅವರು, ಕೃತಕ ಬುದ್ಧಿಮತ್ತೆ, ನೈತಿಕ ಹ್ಯಾಕಿಂಗ್, ಪತ್ರಿಕೋದ್ಯಮ ಮತ್ತು ಕಾನೂನು ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣದ ಅವಕಾಶಗಳನ್ನು ವಿವರಿಸಿದರು. NEET, JEE, ನಾಗರಿಕ ಸೇವೆಗಳು ಮತ್ತು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರೇರಣೆ ನೀಡಿದರು.
ಕಾರ್ಯಕ್ರಮದಲ್ಲಿ ಭಟ್ಕಳ ಮುಸ್ಲಿಂ ಜಮಾಅತ್ ದುಬೈ ಮಾಜಿ ಅಧ್ಯಕ್ಷ ಅಷ್ಫಾಕ್ ಸದಾ, ನ್ಯಾಯವಾದಿ ಸೈಯದ್ ಇಮ್ರಾನ್ ಲಂಕಾ, ನ್ಯಾಯವಾದಿ ಆಫಾಖ್ ಕೋಲಾ, ಬಿಎಂವೈಎಫ್ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ, ಅಂಜುಮನ್ ಶಿಕ್ಷಣ ಮಂಡಳಿ ಸದಸ್ಯ ಶಾದಾಬ್ ಎಸ್.ಎಂ., ಅಂಜುಮನ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಯೂಸುಫ್ ಕೋಲಾ, ಶಮ್ಸ್ ಪಿ.ಯು.ಕಾಲೇಜಿನ ಎಂ.ಆರ್.ಮಾನ್ವಿ, ಅಂಜುಮನ್ ಬಾಲಕರ ಪ್ರೌಢಶಾಲೆಯ ಮುಖ್ಯಶಿಕ್ಷಕ ಅಬ್ದುಲ್ಲಾ ರುಕ್ನುದ್ದೀನ್, ಮತ್ತಿತರರು ಇದ್ದರು.