ಭಟ್ಕಳ: ಸರ್ಕಾರಿ ಐಟಿಐ ಕಾಲೇಜು ಲೋಕಾರ್ಪಣೆಗೊಳಿಸಿದ ಸಚಿವ ಮಂಕಾಳ್ ವೈದ್ಯ
ಭಟ್ಕಳ: 2015-16ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಮಂಜೂರಾದ ಕೈಗಾರಿಕ ತರಬೇತಿ ಕೇಂದ್ರ (ಐಟಿಐ) ಕಾಲೇಜು ಕಟ್ಟಡವು ನಾನಾ ಅಡಚಣೆಗಳನ್ನು ಎದುರಿಸಿ 7 ವರ್ಷಗಳ ಬಳಿಕ ಉದ್ಘಾಟನೆಯ ಭಾಗ್ಯ ಕಂಡಿದೆ.
ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಐಟಿಐ ಸರ್ಕಾರಿ ಕಾಲೇಜು ಕಟ್ಟಡವನ್ನು ಸೋಮವಾರ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, "ಎಲ್ಲಾ ಶಿಕ್ಷಣ ಸಂಸ್ಥೆಗಳು ಒಂದೇ ಪ್ರದೇಶದಲ್ಲಿ ನೆಲೆಸಬೇಕು" ಎಂಬ ಆಶಯದಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೈಗಾರಿಕ ತರಬೇತಿ ಕೇಂದ್ರ (ಐಟಿಐ) ಈ ನಾಲ್ಕು ಸಂಸ್ಥೆಗಳಿಗೆ 2015-16ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಯೋಜನೆಗಳಿಗೆ ಅನುಮೋದನೆ ನೀಡಿತ್ತು. “ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ತತ್ಕ್ಷಣ ಉದ್ಘಾಟನೆಗೊಂಡವು. ಆದರೆ ಪ್ರಥಮ ದರ್ಜೆ ಕಾಲೇಜು ಮತ್ತು ಐಟಿಐ ಕಾಲೇಜಿನ ಸ್ಥಳವನ್ನು ಮಾಜಿ ಶಾಸಕರು ರಾಜಕೀಯ ಲಾಭಕ್ಕಾಗಿ ಮಂಜೂರಾದ ಸ್ಥಳದಿಂದ ಬೇರೆ ಯೋಗ್ಯವಲ್ಲದ ಜಾಗಕ್ಕೆ ಸ್ಥಳಾಂತರ ಮಾಡಿದರು. ಇದರಿಂದ ಕಾಮಗಾರಿ ವಿಳಂಬವಾಗಿ, 5 ವರ್ಷಗಳ ಅವಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಸ್ತಾಂತರವಾಗಲಿಲ್ಲ ಎಂದರು. ಮತ್ತೊಮ್ಮೆ ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ, ಈ ವಿಳಂಬವನ್ನು ಗಮನಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಸೂಚನೆ ನೀಡಿ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳುವಂತೆ ನೋಡಿಕೊಂಡೆ ಎಂದು ಸಚಿವರು ತಿಳಿಸಿದರು.
2017ರ ಡಿಸೆಂಬರ್ 6ರಂದು ಈ ಯೋಜನೆಯ ಶಂಕುಸ್ಥಾಪನೆ ನಡೆದಿದ್ದು, ಇಂದು ಅದರ ನೂತನ ಕಟ್ಟಡವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಗಿದೆ. ಹೊಸ ಕಟ್ಟಡವು ತಾಂತ್ರಿಕ ಶಿಕ್ಷಣಕ್ಕಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ ಎಂದ ಅವರು, “ಶಿಕ್ಷಣ ಹಾಗೂ ತಾಂತ್ರಿಕ ತರಬೇತಿ ಕೇಂದ್ರಗಳು ಭಟ್ಕಳದ ಯುವ ಜನತೆಗೆ ಉದ್ಯೋಗಾಭಿಲಾಷೆಗಳನ್ನು ಗುರಿಯಾಗಿಸಿ ಬೆಳೆಸಲು ಸಹಾಯ ಮಾಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.