ಜ.7: ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಭಟ್ಕಳ: ಭಟ್ಕಳ ತಾಲೂಕ 11ನೇ ಸಾಹಿತ್ಯ ಸಮ್ಮೇಳನವು ಜ.7ರಂದು ಅಳವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಲಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ನಾರಾಯಣ ಯಾಜಿ ಅಧಿಕಾರ ವಹಿಸಲಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣವು ಶಿರಾಲಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ದೈಮನೆ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಹಾಗೂ ತಾ.ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಅವರಿಂದ ನಡೆಯಲಿದೆ. ನಂತರ, 9 ಗಂಟೆಗೆ ಡಾ. ನಯನಾ ಎಮ್. ಎಸ್. ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಸಮ್ಮೇಳನವನ್ನು ಕಸಾಪದ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಶ ನಾಯ್ಕ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಚಿವ ಮಂಕಾಳು ಎಸ್. ವೈದ್ಯ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಾನಾಸುತ ಶಂಭು ಹೆಗಡೆ, ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಡಾ. ದಿನೇಶ ಗಾಂವಕರ್ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿಗಳು ಮತ್ತು ಪತ್ರಕರ್ತರು ತಮ್ಮ ಉಪನ್ಯಾಸ ನೀಡಲಿದ್ದಾರೆ.
ಕವಿಗೋಷ್ಠಿ ಸಂಜೆ 3 ಗಂಟೆಗೆ ನಡೆಯಲಿದ್ದು, ನಾನಾ ಪ್ರತಿಭಾವಂತ ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದಾರೆ. ಸಾಯಂಕಾಲ 5 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನ ನಡೆಯಲಿದೆ.
ಕನ್ನಡ ಪ್ರಿಯರು ಮತ್ತು ಸಾಹಿತ್ಯಾಸಕ್ತರು ಈ ಸಮ್ಮೇಳನದಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ತಾ. ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮನವಿ ಮಾಡಿದ್ದಾರೆ.