ಭಟ್ಕಳ: ಬಸ್ ದರ ಏರಿಕೆ ಖಂಡಿಸಿ ಬಿಜೆಪಿ ಮನವಿ

Update: 2025-01-04 12:36 GMT

ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಬಸ್ ದರ ಏರಿಕೆ, ಹಾಗೂ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಆತ್ಮಹತ್ಯೆ ಖಂಡಿಸಿ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮಂಡಲದ ಪದಾಧಿಕಾರಿಗಳು ಮಾತನಾಡಿ, "ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬಸ್ ದರವನ್ನು ಶೇ.15 ರಷ್ಟು ಏರಿಸಲಾಗಿದೆ, ಇದರಿಂದ ಜನಸಾಮಾನ್ಯರಿಗೆ ಭಾರೀ ಹೊರೆ ಆಗುತ್ತಿದೆ. ಸರ್ಕಾರ ತನ್ನ ಆಡಳಿತದಲ್ಲಿ ವಿಫಲವಾಗಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸದೆ, ಜನರ ಮೇಲೆ ಹೆಚ್ಚಿನ ಹೊರೆ ಸೃಷ್ಟಿಸುತ್ತಿದೆ," ಎಂದು ಹೇಳಿದರು.

ಬೀದರ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಂಚಾಳ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೆಸರು ಕೇಳಿ ಬರುತ್ತಿರುವುದನ್ನು ತೀವ್ರವಾಗಿ ಖಂಡಿಸಲಾಗಿದ್ದು, "ಸಚಿವರು ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು," ಎಂದು ಒತ್ತಾಯಿಸಲಾಯಿತು.

ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, "ಕಾಂಗ್ರೆಸ್ ಸರ್ಕಾರ ಜನರ ಮೇಲೆ ತೆರಿಗೆ ಭಾರ ವನ್ನು ಏರಿಸಲು ಮಾತ್ರ ಮುಂದಾಗಿದೆ. ಸಂವಿಧಾನದಲ್ಲಿ ನಿರ್ಧರಿಸಿದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಇಗ್ನೋರ್ ಮಾಡಲಾಗುತ್ತಿದೆ," ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, "ಪಂಚ ಗ್ಯಾರಂಟಿಗಳನ್ನು ನಂಬಿ ಜನರು ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿಕೊಂಡರು. ಆದರೆ ಅಭಿವೃದ್ಧಿಯ ಹಾದಿಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾ ಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸರ್ಕಾರ ತನ್ನಲೇ ಪತನವಾಗುವ ಮುನ್ಸೂಚನೆಗಳನ್ನು ನೀಡುತ್ತಿದೆ," ಎಂದು ಅಭಿಪ್ರಾಯಪಟ್ಟರು.

ಸಹಾಯ ಅಯುಕ್ತರ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮನವಿ ಸ್ವೀಕರಿಸಿದರು.

ಈ ಸಂದರ್ಭ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ಸುನೀಲ ಕಾಮತ್ ಸೇರಿದಂತೆ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News