ಹೊನ್ನಾವರ | ಲಾರಿ ಉರುಳಿಬಿದ್ದು ಇಬ್ಬರು ಮೃತ್ಯು; ಮೂವರಿಗೆ ಗಾಯ
Update: 2025-01-06 05:42 GMT
ಕಾರವಾರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಹೊನ್ನಾವರ – ಸಾಗರ ರಸ್ತೆಯ ಸುಳಿಮುರ್ಖಿ ತಿರುವಿನಲ್ಲಿ ಸಂಭವಿಸಿದೆ.
ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಸಾಗರ ಕಡೆಯಿಂದ ಹೊನ್ನಾವರದತ್ತ ಬರುತ್ತಿದ್ದ ಲಾರಿ ಸೋಮವಾರ (ಜ.6) ನಸುಕಿನ ವೇಳೆ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರು ಮೃತ ಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತರನ್ನು ಬಿಹಾರ ರಾಜ್ಯದ ನಳಂದಾ ಜಿಲ್ಲೆಯ ಸಜ್ಜನ ಕುಮಾರ್, ಗಯಾ ಜಿಲ್ಲೆಯ ಗಣವ್ರಿ ಮತ್ತು ಪಾಟ್ನಾ ಜಿಲ್ಲೆಯ ಪಪ್ಪು ಕುಮಾರ್ ಎಂದು ಗುರುತಿಸಲಾಗಿದೆ.
ಗಾಯಾಳುಗಳು ಕೂಡಾ ಮೂಲತಃ ಬಿಹಾರ ರಾಜ್ಯದವರು ಎಂದು ತಿಳಿದುಬಂದಿದೆ.
ಲಾರಿಯಲ್ಲಿ ಒಟ್ಟು ಆರು ಜನರಿದ್ದರು ಎನ್ನಲಾಗಿದೆ. ಗಾಯಗೊಂಡವರನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.