ಭಟ್ಕಳ: ಬಿಎಎಸ್ ಮೋಟಾರ್ಸ್ ಮಾಲಕ ಎಂ.ಎಸ್. ಮೊಹತೆಶಮ್ ನಿಧನ

ಭಟ್ಕಳ: ಭಟ್ಕಳದ ಪ್ರಸಿದ್ಧ ಉದ್ಯಮಿ ಹಾಗೂ ಬಿಎಎಸ್ ಮೋಟಾರ್ಸ್ ಮಾಲಕರಾದ ಎಂ.ಎಸ್. ಮೊಹತೇಶಮ್ (ಮಂಡೆ ಸಾಹೇಬ್) (78) ಅವರು ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾಗಿದ್ದು, ಭಟ್ಕಳ ಮರ್ಚಂಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. ಸಮುದಾಯದ ಹಿತಾಸಕ್ತಿಗೆ ಅವರು ಸದಾ ಶ್ರಮಿಸಿದ್ದರು ಮತ್ತು ಹಿಂದು-ಮುಸ್ಲಿಮ್ ಬಾಂಧವ್ಯವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇವರ ನಿಧನದಿಂದಾಗಿ ಭಟ್ಕಳದಲ್ಲಿ ತೀವ್ರ ದುಃಖದ ವಾತಾವರಣ ನಿರ್ಮಾಣವಾಗಿದೆ. ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಇನಾತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಎಂ.ಜೆ. ಅಬ್ದುಲ್ ರಖೀಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಎಂ.ಎಸ್. ಮೊಹತೇಶಮ್ ಅಗಲಿಕೆ ಭಟ್ಕಳಕ್ಕೆ ತುಂಬಲಾರದ ನಷ್ಟ: ಆರ್.ವಿ.ದೇಶಪಾಂಡೆ
ಭಟ್ಕಳದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಎಂ.ಎಸ್. ಮೊಹತೇಶಮ್ ಅವರು ಇಂದು ಬೆಳಿಗ್ಗೆ ನಿಧನರಾದರು. ಅವರ ಅಕಾಲಿಕ ಅಗಲಿಕೆ ಭಟ್ಕಳದ ಜನತೆಗಾಗಿ ತುಂಬಲಾರದ ನಷ್ಟವಾಗಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ, ಮರ್ಚೆಂಟ್ ಸಂಘದ ಉಪಾಧ್ಯಕ್ಷರಾಗಿ ಹಾಗೂ ಸಮಾಜ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಡ ಜನರ ಸೇವೆಯನ್ನು ಜೀವನ ಧ್ಯೇಯವನ್ನಾಗಿಸಿಕೊಂಡಿದ್ದ ಅವರು, ಅನೇಕ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಅಪಾರ ಸಂಖ್ಯೆಯ ಬಡವರಿಗೆ ಆರೋಗ್ಯ ಸೇವೆ ಒದಗಿಸಿದ್ದರು.
"ಎಂ.ಎಸ್. ಮೊಹತೇಶಮ್ ಅವರ ನಿಧನದಿಂದ ಭಟ್ಕಳವು ಪ್ರಗತಿಪರ ನಾಯಕನನ್ನು ಕಳೆದುಕೊಂಡಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬಸ್ಥರು, ಹಿತೈಷಿಗಳು, ಅಭಿಮಾನಿಗಳು ಈ ದುಃಖವನ್ನು ಸಹಿಸಲು ಶಕ್ತಿಯನ್ನು ಹೊಂದಲಿ" ಎಂದು ಹಲವು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.
"ಭಟ್ಕಳದ ಪ್ರಗತಿಪರ ಸಮಾಜಸೇವೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದ, ಹಿಂದು-ಮುಸ್ಲಿಮ್ ಭಾವೈಕ್ಯತೆಗೆ ಸೇತುವೆಯಾಗಿದ್ದ ಎಮ್.ಎಸ್. ಮೊಹತೆಶಮ್ ಅವರ ಅಕಾಲಿಕ ನಿಧನ ಭಟ್ಕಳದ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಪವಿತ್ರ ರಮಝಾನ್ ತಿಂಗಳಲ್ಲಿ ಅವರ ಇಹಲೋಕ ಯಾತ್ರೆ ಸಂಪನ್ನವಾಗಿರುವುದು ಮತ್ತಷ್ಟು ಬೇಸರದ ಸಂಗತಿಯಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ದುಃಖವನ್ನು ತಾಳುವ ಶಕ್ತಿಯನ್ನು ಕರುಣಿಸಲಿ ಎಂಬುದು ನನ್ನ ಪ್ರಾರ್ಥನೆ".
-ಮಂಕಾಳ್ ಎಸ್. ವೈದ್ಯ, ಸಚಿವರು, ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ