ರಂಝಾನ್ ಸಂದರ್ಭ ವಿದ್ಯುತ್ ವ್ಯತ್ಯಯ ತಡೆಯಬೇಕು: ಮಜ್ಲಿಸ್-ಎ-ಇಸ್ಲಾಹ್ ನಿಯೋಗ ಒತ್ತಾಯ

ಭಟ್ಕಳ: ಭಟ್ಕಳದಲ್ಲಿ ಹುಬ್ಬಳ್ಳಿ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (ಹೆಸ್ಕಾಂ) ಪ್ರತಿ ತಿಂಗಳು ರೂ.10 ಕೋಟಿ ಆದಾಯ ಗಳಿಸುತ್ತಿರುವುದಾದರೂ, ರಂಝಾನ್ ತಿಂಗಳಿನಲ್ಲಿ ವಿದ್ಯುತ್ ಕಡಿತ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ. ಈ ಬಗ್ಗೆ ಮಜ್ಲಿಸ್-ಎ-ಇಸ್ಲಾಹ್-ವ-ತಂಝೀಮ್ ಭಟ್ಕಳ ನಿಯೋಗವು ಹೆಸ್ಕಾಂ ಅಧಿಕಾರಿಗಳನ್ನು ಭೇಟಿ ಮಾಡಿ ನಿರಂತರ ವಿದ್ಯುತ್ ಪೂರೈಕೆ ಕೋರಿದೆ.
ಮಜ್ಲಿಸ್-ಎ-ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾ ಬಂದರಿ ಮಾತನಾಡಿ, "ರಂಝಾನ್ ತಿಂಗಳು ಮುಸ್ಲಿಮರ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಮುಸ್ಲಿಮರು ತಡರಾತ್ರಿವರೆಗೆ ನಮಾಝ್ ಮತ್ತು ಆರಾಧನೆಗಳಲ್ಲಿ ತೊಡಗಿರುತ್ತಾರೆ. ಮುಂಜಾನೆ ಸಹರಿ(ರೋಜಾ ಆರಂಭದ ಸಮಯ) ಹೊತ್ತಿಗೆ ವಿದ್ಯುತ್ ಕಡಿತವಾದರೆ ಜನರು ತೊಂದರೆ ಅನುಭವಿಸುತ್ತಾರೆ. ಈಗಾಗಲೇ ಉಷ್ಣತೆಯು ತೀವ್ರವಾಗಿದ್ದು, ಮಧ್ಯರಾತ್ರಿಯಲ್ಲಿ ವಿದ್ಯುತ್ ಕಡಿತ ಮಾಡುವುದು ಸಹಿಸಲಾಗದಂತಹ ಪರಿಸ್ಥಿತಿ ಸೃಷ್ಟಿಸುತ್ತದೆ" ಎಂದು ಹೇಳಿದರು.
ಈ ಕುರಿತು ಸಾರ್ವಜನಿಕರಿಂದ ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮಜ್ಲಿಸ್-ಎ-ಇಸ್ಲಾಹ್-ವ-ತಂಝೀಮ್ ನಿಯೋಗವು ಹೆಬ್ಳೆ ಯ 33/11ಕೆವಿ ಉಪ ಕೇಂದ್ರಕ್ಕೆ ಭೇಟಿ ನೀಡಿ ಹೆಸ್ಕಾಂ ಸಹಾಯಕ ಎಂಜಿನಿಯರ್ ಮಂಜುನಾಥ್ ಅವರನ್ನು ಭೇಟಿಯಾಗಿ ರಂಝಾನ್ ಸಂದರ್ಭ ವಿದ್ಯುತ್ ಕಡಿತವನ್ನು ನಿಲ್ಲಿಸುವಂತೆ ಒತ್ತಾಯಿಸಿದೆ.
ವಿದ್ಯುತ್ ಕಡಿತದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ: ಸಂಸ್ಥೆಯ ಮನವಿಗೆ ಪ್ರತಿಕ್ರಿಯಿಸಿದ ಸಹಾಯಕ ಎಂಜಿನಿಯರ್ ಮಂಜುನಾಥ್ ನಾಯ್ಕ, ಭಟ್ಕಳದಲ್ಲಿ ವಿದ್ಯುತ್ ಸರಬರಾಜು ನಿರಂತರವಾಗಿರಲು ಹೆಸ್ಕಾಂ ಪ್ರಯತ್ನಿಸುತ್ತಿದೆ ಎಂದು ಹೇಳಿದರು. "ಈ ಹಿಂದೆ ಎರಡು 5000 ಕೆವಿಎ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ವಿದ್ಯುತ್ ಬಳಕೆ ಹೆಚ್ಚುತ್ತಿರುವುದರಿಂದ ಇತ್ತೀಚೆಗೆ ಮೂರನೇ 5000 ಕೆವಿಎ ಟ್ರಾನ್ಸ್‌ಫಾರ್ಮರ್ ಕೂಡ ಅಳವಡಿಸಲಾಗಿದೆ. ಇದು ತಾತ್ಕಾಲಿಕ ಪರಿಹಾರವಷ್ಟೇ. ಶಾಶ್ವತ ಪರಿಹಾರದ ಅಗತ್ಯವಿದೆ" ಎಂದರು.
ಹೆಸ್ಕಾಂ ಪ್ರಕಾರ, ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ಹೆಚ್ಚುತ್ತಿರುವ ಒತ್ತಡ ಮತ್ತು ತಾಂತ್ರಿಕ ದೋಷಗಳ ಕಾರಣದಿಂದಲೂ ವಿದ್ಯುತ್ ವ್ಯತ್ಯಯ ಸಂಭವಿಸುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ 110 ಕೆವಿ ವಿದ್ಯುತ್ ಲೈನ್ ಅನ್ನು ಬಂಡೂರಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದೆ. ಇದರಿಂದ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಬಹುದು. ಆದರೆ, ಈ ಯೋಜನೆ ಅನುಮೋದನೆ, ಭೂಸ್ವಾಧೀನ, ತಾಂತ್ರಿಕ ಅಡಚಣೆಗಳು ಮುಂತಾದ ಕಾರಣಗಳಿಂದ ವಿಳಂಬಗೊಂಡಿದೆ ಎಂದು ಅವರು ವಿವರಿಸಿದರು.
ಮಜ್ಲಿಸ್-ಎ-ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ಮುಂದಿನ ಕ್ರಮ: ತಂಝೀಮ್ ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ರಖೀಬ್ ಎಂ.ಜೆ. ನದ್ವಿ ಮಾತನಾಡಿ, "ವಿದ್ಯುತ್ ಸಮಸ್ಯೆಯು ಭಟ್ಕಳದ ಜನರ ದೈನಂದಿನ ಜೀವನಕ್ಕೆ ತೊಂದರೆ ಉಂಟು ಮಾಡುತ್ತಿದೆ. ಇದನ್ನು ಶಾಶ್ವತವಾಗಿ ಪರಿಹರಿಸಲು ಸರ್ಕಾರದ ಗಮನ ಸೆಳೆಯಲು ನಮ್ಮ ಸಂಘಟನೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ" ಎಂದರು.
ಈ ಸಂದರ್ಭ ಜಿಲಾನಿ ಶಾ ಬಂದರಿ, ಅಝೀಝುರ್ ರಹಮಾನ್ ರುಕ್ನುದ್ದೀನ್ ನದ್ವಿ ಮತ್ತು ಇತರರು ಹಾಜರಿದ್ದು, "ಸರ್ಕಾರದ ಮಟ್ಟದಲ್ಲಿ ಈ ವಿಚಾರದಲ್ಲಿ ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ. ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗದಿದ್ದರೆ, ಭವಿಷ್ಯದಲ್ಲಿ ಹೆಚ್ಚಿನ ಹೋರಾಟ ನಡೆಸಲು ಕೂಡ ತಯಾರಾಗಿದ್ದೇವೆ" ಎಂದು ಒತ್ತಿಹೇಳಿದರು.