ಭಟ್ಕಳ| ಎಂ.ಎಸ್. ಮೊಹತೆಶಾಮ್, ಇರ್ಷಾದ್ ಇಕ್ಕೇರಿಗೆ ಶ್ರದ್ಧಾಂಜಲಿ ಸಭೆ

ಭಟ್ಕಳ: ಭಟ್ಕಳ ತಂಝೀಂ ಅಧ್ಯಕ್ಷ ಹಾಗೂ ರಾಜಕೀಯ ಪ್ರಮುಖ ಇನಾಯತ್‌ವುಲ್ಲಾ ಶಾಬಂದ್ರಿ ಅವರ ಫ್ಯಾನ್‌ಕ್ಲಬ್ ವತಿಯಿಂದ ಇಲ್ಲಿನ ಅಮೀನಾ ಪ್ಯಾಲೇಸ್ ಹಾಲ್‌ನಲ್ಲಿ ಇತ್ತೀಚೆಗೆ ನಿಧನರಾದ ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಂ.ಎಸ್. ಮೊಹತೆಶಾಮ್ ಹಾಗೂ ಸಮಾಜ ಸೇವಕ ಇರ್ಷಾದ್ ಇಕ್ಕೇರಿ (ಡಾಟಾ ಇರ್ಷಾದ್) ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಇನಾಯತ್‌ವುಲ್ಲಾ ಶಾಬಂದ್ರಿ, ಭಟ್ಕಳದ ಅಭಿವೃದ್ಧಿಯ ಬಗ್ಗೆ ಸದಾ ಕಾಳಜಿ ಹೊಂದಿದ್ದ ಎಂ.ಎಸ್. ಮೊಹತೆಶಾಮ್ ಅವರು ಅಸಂಘಟಿತ ಆಟೋ ಚಾಲಕರ ಸಂಘಟನೆಯನ್ನು ರೂಪಿಸಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದರು.
ಆಟೋ ಚಾಲಕರಿಗೆ ಸಾಲ ಸಿಗದ ಸಂದರ್ಭದಲ್ಲಿ ಭಟ್ಕಳ ಅರ್ಬನ್ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಕಲ್ಪಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣಕ್ಕಾಗಿ ಯೋಚಿಸುತ್ತಿದ್ದ ಅವರು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದರೂ ರಾಜಕೀಯ ಅವಕಾಶಗಳನ್ನು ನಿರಾಕರಿಸಿದ್ದರು ಎಂದು ಅವರು ಸ್ಮರಿಸಿದರು.
ಭಟ್ಕಳ ಅರ್ಬನ್ ಬ್ಯಾಂಕ್ ಇಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅದಕ್ಕೆ ಮೊಹತೆಶಾಮ್ ಅವರು ಹಾಕಿದ ದೃಢ ಬುನಾದಿಯೇ ಕಾರಣ ಎಂದು ಶ್ಲಾಘಿಸಿದರು. ಜಾತಿ-ಮತ-ಪಂಥಗಳಿಗೆ ಒತ್ತು ನೀಡದೇ ಬುದ್ಧಿವಂತಿಕೆಗೆ ಮಾನ್ಯತೆ ನೀಡಿ ಸಿಬ್ಬಂದಿ ನೇಮಕ ಮಾಡಿದ್ದ ಅವರ ಕಾರ್ಯವೈಖರಿಯನ್ನು ಅವರು ಕೊಂಡಾಡಿದರು. ಈ ಬಾರಿ ಉತ್ತಮ ಆಡಳಿತ ಮಂಡಳಿ ಆಯ್ಕೆಯಾಗಿದ್ದು, ಬ್ಯಾಂಕ್ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು.
ಡಾಟಾ ಇರ್ಷಾದ್ ಅವರು ಉತ್ತಮ ಸಮಾಜ ಸೇವಕರಾಗಿದ್ದು, ಅಧಿಕಾರಿಗಳೊಂದಿಗೆ ಸ್ನೇಹಪರರಾಗಿ ಅನೇಕರಿಗೆ ಸಹಾಯ ಮಾಡಿದ್ದರು ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ, ಎಂ.ಎಸ್. ಮೊಹತೆಶಾಮ್ ಅವರು ಜನರೊಂದಿಗೆ ಬೆರೆತು ಅವರ ಕಷ್ಟ-ಕಾರ್ಪಣ್ಯಗಳನ್ನು ಆಲಿಸಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ರಾಜೇಶ ನಾಯಕ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ದುಷ್ಪರಿಣಾಮಗಳನ್ನು ತಡೆಯಲು ಮೊಹತೆಶಾಮ್ ದೆಹಲಿಗೆ ನಿಯೋಗದೊಂದಿಗೆ ತೆರಳಿ 60 ಮೀಟರ್ ಅಗಲೀಕರಣವನ್ನು 45 ಮೀಟರ್‌ಗೆ ಸೀಮಿತಗೊಳಿಸುವಲ್ಲಿ ಶ್ರಮಿಸಿದ್ದರು ಎಂದರು.
ಅರ್ಬನ್ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಷ ಶೆಟ್ಟಿ, ಬ್ಯಾಂಕ್ ಒಂದೇ ಬಾರಿಗೆ 10 ಆಟೋ ರಿಕ್ಷಾ ಹಾಗೂ 10 ಲಾರಿಗಳಿಗೆ ಸಾಲ ನೀಡಿ ದಾಖಲೆ ಬರೆದಿದ್ದಾಗಿ, ಉತ್ತಮ ಕೆಲಸಗಾರರಿಗೆ ಅವಕಾಶ ಕಲ್ಪಿಸಿದ ಮೊಹತೆಶಾಮ್ ತಮಗೆ ಐದು ಶಾಖೆಗಳಲ್ಲಿ ಪ್ರಥಮ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ತಂಝೀಂ ಉಪಾಧ್ಯಕ್ಷ ಅತಿಕುರ್ ರಹಮಾನ್ ಮುನೀರಿ, ಮೌಲಾನಾ ಅಬ್ದುಲ್ ಖತೀಬ್ ನದ್ವಿ, ಕೆ.ಎಂ. ಕರ್ಕಿ, ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಸಂತ ಶಾಸ್ತ್ರಿ, ಪತ್ರಕರ್ತ ರಾಧಾಕೃಷ್ಣ ಭಟ್ಟ, ಮೊಹತೆಶಾಮ್ ಅವರ ಹಿರಿಯ ಪುತ್ರ ರೌನಕ್, ರಿಕ್ಷಾ ಯೂನಿಯನ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ಎನ್. ನಾಯ್ಕ, ಪತ್ರಕರ್ತ ಎಂ.ಆರ್. ಮಾನ್ವಿ, ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ, ಮೌಲಾನಾ ಜಾಫರ್ ಸಾಬ್ ಮುಂತಾದವರು ಮಾತನಾಡಿದರು.
ಮೌಲಾನಾ ಅಯೂಬ್ ಖುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪತ್ರಕರ್ತ ಅತಿಕುರ್ ರೆಹಮಾನ್ ಶಾಬಂದ್ರಿ ನಿರೂಪಣೆ ಮಾಡಿದರು.


