ಭಟ್ಕಳ| ಬ್ಯಾಂಕ್ ಕಳ್ಳತನ ಪ್ರಕರಣ; ಆರೋಪಿ ಸೆರೆ

ಭಟ್ಕಳ: ಕಳೆದ ವರ್ಷ ಏಪ್ರಿಲ್‌ನಲ್ಲಿ ರಂಗೀನಕಟ್ಟಾ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ರಾಯಿಕ್ (24) ಎಂದು ಗುರುತಿಸಲಾಗಿದೆ. ಈತ ಬ್ಯಾಂಕ್ ಶೆಟರ್ ಮುರಿದು 1,70,968 ನಗದು ಲಾಕರ್ ಸಮೇತ ಕಳ್ಳತನ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ, 40,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹೊರ ಜಿಲ್ಲೆಗಳಲ್ಲಿ ಈತನ ವಿರುದ್ಧ 16ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ: ಭಟ್ಕಳ ಜಾತ್ರೆಯ ಸಂದರ್ಭ, ನಾಗರಿಕರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದ ವೇಳೆ ಇಬ್ಬರು ಯುವಕರು ಹೆಲ್ಮೆಟ್ ಮತ್ತು ಮುಖಗವಸ ಧರಿಸಿ ಬ್ಯಾಂಕ್ ಶೆಟರ್ ಮುರಿದು ಒಳನುಗ್ಗಿ ಸೇಫ್ ಲಾಕರ್ ದೋಚಿ ಪರಾರಿಯಾಗಿದ್ದರು. ಈ ವೇಳೆ ಸಿಸಿಟಿವಿಯಲ್ಲಿ ಕೆಲ ತುಣುಕು ದೃಶ್ಯಗಳು ಮಾತ್ರ ಸೆರೆಯಾಗಿದ್ದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಭಟ್ಕಳ ಡಿವೈಎಸ್ಪಿ ಮಹೇಶ ಕೆ ಅವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ಸಂತೋಷ ಕಾಯ್ಕಿಣಿ, ಪಿ.ಎಸ್.ಐ ನವೀನ್ ಎಸ್. ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶಾಂತಿನಾಥ ಪಾಸಾನೆ, ನಾರಾಯಣ ನಾಯ್ಕ, ದಿನೇಶ್ ನಾಯ್ಕ, ಅರುಣ ಪಿಂಟೋ, ದೀಪಕ್ ಎಸ್. ನಾಯ್ಕ, ಮದಾರಸಾಬ್ ಚಿಕ್ಕೇರಿ, ಕಿರಣ ಕುಮಾರ ನಾಯ್ಕ, ನಾಗರಾಜ ಮೊಗೇರ, ಕೃಷ್ಣ ಎನ್, ಲೋಕೇಶ್ ಕತ್ತಿ, ಜಗದೀಶ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಕಿರಣ ಪಾಟೀಲ್ ಮೊದಲಾದ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕಳ್ಳತನದ ತನಿಖೆಯಲ್ಲೂ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ಸಹಾಯ ಪಡೆಯಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.