ಭಟ್ಕಳ: ಡಿ.ಕೆ. ಶಿವಕುಮಾರ್ ಹೇಳಿಕೆ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ, ಪ್ರತಿಕೃತಿ ದಹನ

ಭಟ್ಕಳ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂವಿಧಾನ ಕುರಿತ ಹೇಳಿಕೆ ವಿರೋಧಿಸಿ ಭಟ್ಕಳ ಬಿಜೆಪಿ ಮಂಡಲವತಿಯಿಂದ ಮಂಗಳವಾರ ಶಂಶುದ್ದೀನ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಗೂ ಮುನ್ನ ಭಟ್ಕಳ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಗೊಂಡು ಶಂಶುದ್ದೀನ್ ಸರ್ಕಲ್‌ಗೆ ತಲುಪಿತು. ಅಲ್ಲಿ ಪ್ರತಿಕೃತಿಯನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ದಹಿಸಲಾಯಿತು ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಸುನಿಲ್ ನಾಯ್ಕ, "ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಹಲವು ಬಾರಿ ಬದಲಾಯಿಸಿದೆ. ಸಂವಿಧಾನವು ಯಾರೊಬ್ಬರ ಆಸ್ತಿಯಲ್ಲ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭಾರತದ ಜನರಿಗೆ ಶಾಂತಿಯುತ ಜೀವನಕ್ಕಾಗಿ ರಚಿಸಿದ ದಾಖಲೆಯಾಗಿದೆ. ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಎಲ್ಲಾ ಸಮುದಾಯದ ಜನರಿಗೆ ನೋವುಂಟು ಮಾಡಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಡಿ.ಕೆ. ಶಿವಕುಮಾರ್ ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸಿ, ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು" ಎಂದು ಒತ್ತಾಯಿಸಿದರು. "ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಕಾಂಗ್ರೆಸ್ ಜನವಿರೋಧಿ ಧೋರಣೆ ತೋರುತ್ತಿದೆ" ಎಂದು ಅವರು ಖಂಡಿಸಿದರು.
ಬಿಜೆಪಿ ಮುಖಂಡ ಗೋವಿಂದ ನಾಯ್ಕ ಮಾತನಾಡಿ, "ಮುಖ್ಯಮಂತ್ರಿಗಳು ಈಗಾಗಲೇ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಕಂಡಿದ್ದೇನೆ. ಆದರೆ ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವಂತಿಲ್ಲ ಎಂದು ಸ್ಪಷ್ಟವಾಗಿದೆ. ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕಾಂಗ್ರೆಸ್ ಸಂವಿಧಾನ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ" ಎಂದರು. "ಕಾಂಗ್ರೆಸ್ ಹಲವು ಬಾರಿ ಸಂವಿಧಾನವನ್ನು ತಿರುಚಿದೆ. ಬಿಜೆಪಿಯೇ ಅಂಬೇಡ್ಕರ್ ಅವರ ಗೌರವವನ್ನು ಎತ್ತಿಹಿಡಿದಿದೆ. ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಮತ್ತಷ್ಟು ಪ್ರತಿಭಟನೆ ನಡೆಸಲಾಗುವುದು" ಎಂದು ಎಚ್ಚರಿಸಿದರು.
ಮಾಜಿ ಮಂಡಲ ಅಧ್ಯಕ್ಷ ಸುಬ್ರಾಯ್ ದೇವಾಡಿಗ, "1950ರಲ್ಲಿ ಸಂವಿಧಾನ ಜಾರಿಗೆ ಬಂದಾಗಿನಿಂದ ಕಾಂಗ್ರೆಸ್ ಅದರ ಮೂಲ ಸ್ವರೂಪವನ್ನು ಹಾಳುಮಾಡಿದೆ. ಆರ್ಟಿಕಲ್ 370, 35A ತಿದ್ದುಪಡಿ, ತುರ್ತು ಪರಿಸ್ಥಿತಿ, ಜಾತ್ಯತೀತ ಪದ ಸೇರ್ಪಡೆ, ಮುಸ್ಲಿಂ ವೈಯಕ್ತಿಕ ಕಾನೂನು ರಚನೆಗೆ ಸಂವಿಧಾನ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರಗಳೇ. ಇಂತಹ ಪಕ್ಷವು ಬಿಜೆಪಿ ಮೇಲೆ ಅಪಪ್ರಚಾರ ಮಾಡುತ್ತಿದೆ" ಎಂದು ಆರೋಪಿಸಿದರು. "ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಕ್ತಪಾತದ ಬಗ್ಗೆ ಮಾತನಾಡಿದ್ದಾರೆ. ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಾವೇನು ಉತ್ತರಿಸುತ್ತೀರಿ?" ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶಿವಾನಿ ಶಾಂತಾರಾಂ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಮಾಜಿ ಮಂಡಲ ಅಧ್ಯಕ್ಷ ರಾಜೇಶ ನಾಯ್ಕ, ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.