ಯುಗಾದಿ, ರಮಝಾನ್ ಹಿನ್ನಲೆ: ಭಟ್ಕಳದಲ್ಲಿ ಶಾಂತಿ ಸಮಿತಿ ಸಭೆ

ಭಟ್ಕಳ: ಭಟ್ಕಳದಲ್ಲಿ ಯುಗಾದಿ, ರಮಝಾನ್ ಹಾಗೂ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆಯಂತಹ ಮೂರು ಪ್ರಮುಖ ಹಬ್ಬಗಳು ಒಂದೇ ಸಮಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಶಾಂತಿಯುತ ಆಚರಣೆಗಾಗಿ ಶಾಂತಿ ಸಮಿತಿ ಸಭೆಯನ್ನು ತಾಲೂಕು ಆಡಳಿತ ಸೌಧದಲ್ಲಿ ಇಂದು ಕರೆಯಲಾಗಿತ್ತು.
ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
"ಈ ಮೂರು ಹಬ್ಭಗಳು ಒಟ್ಟಿಗೆ ಬಂದಿರುವುದರಿಂದ ಶಾಂತಿ ಸಮಿತಿ ಸಭೆ ತುರ್ತಾಗಿ ಕರೆಯಲಾಗಿದೆ. ಭಟ್ಕಳದಲ್ಲಿ ಪ್ರತಿ ವರ್ಷ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸುತ್ತಿದ್ದರೂ, ಇತಿಹಾಸದ ಹಿನ್ನೆಲೆಯಲ್ಲಿ ಈ ಸಭೆ ಅಗತ್ಯವಾಗಿದೆ," ಎಂದು ಕಾವ್ಯಾರಾಣಿ ಹೇಳಿದರು. ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಭದ್ರತಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು. ಪುರಸಭೆಯಿಂದ ಸ್ವಚ್ಛತೆ, ರಥ ಬೀದಿಯ ಹೊಂಡಗಳನ್ನು ಮುಚ್ಚುವ ಕಾರ್ಯ ಮತ್ತು ರಥೋತ್ಸವದ ರಸ್ತೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಮಝಾನ್ ಮೆರವಣಿಗೆಯನ್ನು ಪ್ರತಿ ವರ್ಷದಂತೆ ಅದೇ ಮಾರ್ಗದಲ್ಲಿ ನಡೆಸುವಂತೆ ಮತ್ತು ಯಾವುದೇ ಕಾರಣಕ್ಕೂ ಪಥ ಬದಲಿಸದಂತೆ ಸೂಚಿಸಿದ ಅವರು, ಹೆಸ್ಕಾಂಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ನೀಡಿದರು. "ಯುವ ಪೀಳಿಗೆಗೆ ಶಾಂತಿ ಸಂದೇಶ ಮುಟ್ಟಿಸಿ, ವದಂತಿಗಳಿಗೆ ಕಿವಿಗೊಡದೆ ಎಲ್ಲರೂ ಸೌಹಾರ್ದತೆಯಿಂದ ಹಬ್ಬ ಆಚರಿಸಿ," ಎಂದು ಕರೆ ನೀಡಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ವಿಳಂಬದ ಬಗ್ಗೆ ಚರ್ಚೆಯಾಯಿತು. "ಈಗಾಗಲೇ ಈ ವಿಷಯದಲ್ಲಿ ನಾಲ್ಕು ಸಭೆಗಳನ್ನು ನಡೆಸಲಾಗಿದೆ. ಶೀಘ್ರದಲ್ಲಿ ಮತ್ತೊಂದು ಸಭೆ ಕರೆದು ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗುವುದು. ಮಳೆಗಾಲಕ್ಕೆ ಮುಂಚಿತವಾಗಿ ಕ್ರಮ ಕೈಗೊಳ್ಳಲಾಗುವುದು," ಎಂದು ಸಹಾಯಕ ಆಯುಕ್ತೆ ಭರವಸೆ ನೀಡಿದರು
ಪುರಸಭೆಯ ಪ್ರಭಾರ ಅಧ್ಯಕ್ಷ ಅಲ್ತಾಫ್ ಖರೂರಿ ಮಾತನಾಡಿ, "ಭಟ್ಕಳದಲ್ಲಿ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುವ ಇತಿಹಾಸವಿದೆ. ರಥೋತ್ಸವದಲ್ಲಿ ಪರಸ್ಪರ ಸ್ನೇಹವನ್ನು ಶತಮಾನಗಳಿಂದ ಕಾಪಾಡಿಕೊಂಡು ಬರಲಾಗಿದೆ," ಎಂದರು.
ಮಜ್ಲಿಸ್-ಎ-ಇಸ್ಲಾಹ್-ಓ-ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, "ನಮ್ಮಲ್ಲಿ ಪರಸ್ಪರ ನಂಬಿಕೆ ಇದೆ. ಈದ್ಗಾ ಮೈದಾನ ಚಿಕ್ಕದಾದರೂ ನ್ಯೂ ಇಂಗ್ಲಿಷ್ ಶಾಲೆಯವರು ನಮಾಝ್‌ಗೆ ಸ್ಥಳ ಒದಗಿಸಿ ಸಹಕರಿಸುತ್ತಿದ್ದಾರೆ," ಎಂದರು. ಆದರೆ, ಹೆದ್ದಾರಿ ಕಾಮಗಾರಿ ವಿಳಂಬದಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿ, ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದರು.
ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಮಾಜಿ ಅಧ್ಯಕ್ಷ ಎಂ.ಆರ್. ನಾಯ್ಕ, ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ, ಚೆನ್ನಪಟ್ಟಣ ದೇವಸ್ಥಾನದ ಶ್ರೀಧರ ಮೊಗೇರ, ಮಜ್ಲಿಸ್ ಕಾರ್ಯದರ್ಶಿ ಅಬ್ದುರ್ ರಕೀಬ್, ಆಟೋ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು.
ಡಿವೈಎಸ್‌ಪಿ ಮಹೇಶ್ ಅವರು ಪೊಲೀಸ್ ಇಲಾಖೆಯ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು. ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಪೊಲೀಸ್ ಇನ್‌ಸ್ಪೆಕ್ಟರ್ ವಸಂತ ಆಚಾರಿ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.