ಭಟ್ಕಳ: ಮಾಜಿ ಸೈನಿಕ ರಾಮಚಂದ್ರ ನಾವಡಗೆ ಬೀಳ್ಕೊಡುಗೆ

ಭಟ್ಕಳ: ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕ ತೆಂಕಬೆಟ್ಟು ರಾಮಚಂದ್ರ ನಾವಡ ಅವರಿಗೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭ ಅವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ. ಆರ್. ನಾವಡ, "ನನ್ನ ಜೀವನದಲ್ಲಿ ಇದು ಎರಡನೇ ಸೇವಾ ನಿವೃತ್ತಿಯಾಗಿದೆ. ಮೊದಲು ಸೇನೆಯಿಂದ ನಿವೃತ್ತನಾಗಿದ್ದೆ, ಈಗ ಬ್ಯಾಂಕ್ ಸೇವೆಯಿಂದ ನಿವೃತ್ತನಾಗುತ್ತಿ ದ್ದೇನೆ. ಬೇರೆಡೆ ಅವಕಾಶಗಳಿದ್ದರೂ ಈ ಬ್ಯಾಂಕ್‌ನಲ್ಲಿ ಸೇರಿದ್ದು ನನಗೆ ಮನಃತೃಪ್ತಿ ನೀಡಿದೆ. ಇದು ಅತ್ಯುತ್ತಮ ಬ್ಯಾಂಕ್ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಸಂತೋಷದಿಂದ ಕರ್ತವ್ಯ ನಿರ್ವಹಿಸಿದ ತೃಪ್ತಿ ನನಗಿದೆ," ಎಂದು ಶ್ಲಾಘಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ತುಳಸೀದಾಸ ಮೊಗೇರ ಮಾತನಾಡಿ, "ಸುಮಾರು 23 ವರ್ಷಗಳ ಕಾಲ ನಮ್ಮ ಬ್ಯಾಂಕಿಗೆ ರಕ್ಷಣೆ ಒದಗಿಸಿದ ರಾಮಚಂದ್ರ ನಾವಡ ಅವರ ನಿವೃತ್ತಿ ನಮಗೆ ಬೇಸರ ತಂದಿದೆ. ಸೈನಿಕರಾಗಿ ತಮ್ಮ ಊರು, ಕುಟುಂಬವನ್ನು ಬಿಟ್ಟು ದೇಶವನ್ನು ಕಾಯುವ ಮಹಾನ್ ಕಾರ್ಯವನ್ನು ಅವರು ಮಾಡಿ ದ್ದಾರೆ. ಅವರಿಂದಾಗಿ ನಾವು ಸುರಕ್ಷಿತ ಜೀವನ ನಡೆಸುತ್ತಿದ್ದೇವೆ. 18 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರ ನಮ್ಮ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದು ನಮಗೆ ಹೆಮ್ಮೆಯ ವಿಷಯ. ಅವರು ಬ್ಯಾಂಕಿನ ಬಗ್ಗೆ ಅಭಿಮಾನದಿಂದ ಮಾತನಾಡಿರುವುದು ಅವರ ವಿಶ್ವಾಸವನ್ನು ತೋರಿಸುತ್ತದೆ. ಅವರ ಮುಂದಿನ ಜೀವನ ಉಜ್ವಲವಾಗಿರಲಿ," ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಂ. ಎ. ಲೀಮಾ, ಶ್ರೀಧರ ನಾಯ್ಕ, ಶ್ರೀಕಾಂತ ನಾಯ್ಕ, ಶಂಭು ಹೆಗಡೆ, ಪ್ರಧಾನ ವ್ಯವಸ್ಥಾಪಕ ವಸಂತ ಶಾಸ್ತ್ರಿ ಮುಂತಾದವರು ರಾಮಚಂದ್ರ ನಾವಡ ಅವರಿಗೆ ಶುಭ ಹಾರೈಸಿದರು. ಇದೇ ವೇಳೆ ನಿರ್ದೇಶಕರಾದ ಅಯೂಬ್ ಒಟ್ಟುಪಾರ, ವಸಂತ ದೇವಾಡಿಗ, ಗಣಪತಿ ಮೊಗೇರ, ಸಂತೋಷ ಗೊಂಡ, ರಾಮಾ ನಾಯ್ಕ ಉಪಸ್ಥಿತರಿದ್ದರು.
ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಪ್ರಶಾಂತ ಮುರ್ಡೇಶ್ವರ ಸ್ವಾಗತಿಸಿದರು. ಬಾಲಕೃಷ್ಣ ಕಾಮತ್ ನಿರೂಪಿಸಿದರೆ, ಕುಮಾರ್ ವೈ. ಎಂ. ವಂದನೆ ಸಲ್ಲಿಸಿದರು.