ಭಟ್ಕಳದ ರಮಝಾನ್ ಪೇಟೆ: ಸೌಹಾರ್ದತೆಯ ಸಂಗಮ

Update: 2025-03-30 13:48 IST
ಭಟ್ಕಳದ ರಮಝಾನ್ ಪೇಟೆ: ಸೌಹಾರ್ದತೆಯ ಸಂಗಮ
  • whatsapp icon

ಭಟ್ಕಳ : ರಮಝಾನ್ ತಿಂಗಳ ಪವಿತ್ರತೆಯಲ್ಲಿ ಈದುಲ್ ಫಿತರ್ ಹಬ್ಬದ ಸಂಭ್ರಮಕ್ಕಾಗಿ ದಿನಗಣನೆ ಆರಂಭವಾಗಿದೆ. ಭಟ್ಕಳ ಸೇರಿದಂತೆ ದೇಶಾದ್ಯಂತ ಈದ್ ಆಚರಣೆಯ ಸಂತಸ ತುಂಬಲಿದೆ. ಈ ಸಂತೋಷದ ಸಂದರ್ಭದಲ್ಲಿ ಭಟ್ಕಳದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ‘ರಮಝಾನ್ ಪೇಟೆ’ ಎಂಬ ವಿಶೇಷ ಮಾರುಕಟ್ಟೆ ತನ್ನ ಝಗಮಗಿಸುವ ದೀಪಗಳು, ಜನರ ಜಂಗುಳಿ ಮತ್ತು ಸಾಮರಸ್ಯದ ಸಂದೇಶದೊಂದಿಗೆ ಗಮನ ಸೆಳೆಯುತ್ತಿದೆ. ಈ ಪೇಟೆ ಕೇವಲ ವ್ಯಾಪಾರದ ಕೇಂದ್ರವಷ್ಟೇ ಅಲ್ಲ, ಇದು ಮಾನವೀಯತೆ, ಪರಸ್ಪರ ವಿಶ್ವಾಸ ಮತ್ತು ಸೌಹಾರ್ದತೆಯ ಸಂಕೇತವಾಗಿ ಹೊರಹೊಮ್ಮಿದೆ.

ಎಲ್ಲರಿಗೂ ಒಂದು ಮಾರುಕಟ್ಟೆ :

ಭಟ್ಕಳದ ರಮಝಾನ್ ಪೇಟೆಯ ವಿಶೇಷತೆ ಎಂದರೆ, ಇದು ಎಲ್ಲ ಜಾತಿ, ಧರ್ಮದ ಜನರನ್ನು ಒಂದೇ ತಾಣದಲ್ಲಿ ಸೇರಿಸುತ್ತದೆ. ಇಲ್ಲಿ ದಿನಬಳಕೆಯ ವಸ್ತುಗಳಿಂದ ಹಿಡಿದು ಬಟ್ಟೆ, ಪಾತ್ರೆಗಳು, ಮಕ್ಕಳ ಆಟಿಕೆಗಳು ಮತ್ತು ತಿನಿಸುಗಳವರೆಗೆ ಎಲ್ಲವೂ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತವೆ.

ಭಟ್ಕಳ ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ದೂರದ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಿಂದಲೂ ವ್ಯಾಪಾರಿಗಳು ಮತ್ತು ಗ್ರಾಹಕರು ಇಲ್ಲಿಗೆ ಆಗಮಿಸುತ್ತಾರೆ. ದುಬಾರಿ ವಸ್ತುಗಳಿಂದ ಹಿಡಿದು ಅಗ್ಗದ ಸಾಮಗ್ರಿಗಳವರೆಗೆ ಎಲ್ಲವೂ ಒಂದೇ ಚಾವಣಿಯಡಿ ದೊರೆಯುವ ಈ ಪೇಟೆ, ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಆಯ್ಕೆಯನ್ನು ಒದಗಿಸುತ್ತದೆ.

ಪೇಟೆಯ ಸುರಕ್ಷತೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್, ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಮತ್ತು ಸಂಚಾರ ನಿಯಂತ್ರಣದಂತಹ ಕ್ರಮಗಳು ಯಾವುದೇ ಕಿಡಿಗೇಡಿತನಕ್ಕೆ ಅವಕಾಶವೇ ಇಲ್ಲದಂತೆ ಮಾಡಿವೆ.

ಸೌಹಾರ್ದತೆಗೆ ಸಾಕ್ಷಿ :

ಇತ್ತೀಚೆಗೆ ದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಹಿಂದೂ ಉತ್ಸವಗಳು ಮತ್ತು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಪ್ರಕರಣಗಳು ವರದಿಯಾಗಿವೆ. ಮಹಾ ಕುಂಭಮೇಳದಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಸರ್ಕಾರವೇ ಈ ರೀತಿಯ ಬಹಿಷ್ಕಾರಕ್ಕೆ ಮುಂದಾಗಿರುವುದು ದುರದೃಷ್ಟಕರ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಕೆಲವು ಮನುಷ್ಯ ವಿರೋಧಿ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳ ವಿರುದ್ಧ ದ್ವೇಷದ ಧ್ವನಿ ಎತ್ತಿವೆ. ಆದರೆ ಭಟ್ಕಳದ ರಮಝಾನ್ ಪೇಟೆ ಇದಕ್ಕೆ ಒಂದು ಸುಂದರ ಅಪವಾದವಾಗಿ ನಿಂತಿದೆ. ಇಲ್ಲಿ ಪಕ್ಕದ ಕುಂದಾಪುರ, ಉಡುಪಿ ಜಿಲ್ಲೆಗಳಿಂದ ಬಂದ ಹಿಂದೂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹಾಕಿಕೊಂಡು, ಯಾವುದೇ ಆತಂಕವಿಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ಇದೇ ರೀತಿ ಹಿಂದೂ ಗ್ರಾಹಕರು ಸಹ ಸಾಕಷ್ಟು ಸಂಖ್ಯೆಯಲ್ಲಿ ಖರೀದಿಗೆ ಆಗಮಿಸುತ್ತಾರೆ.  

ಮಾನವೀಯತೆಯ ಮಹತ್ವ :

ರಮಝಾನ್ ಪೇಟೆ ಕೇವಲ ಒಂದು ಮಾರುಕಟ್ಟೆಯಾಗಿ ಮಾತ್ರ ಸೀಮಿತವಾಗಿಲ್ಲ. ಇದು ಒಂದು ಸಾಮಾಜಿಕ ಸಂಗಮ ಸ್ಥಾನವಾಗಿದೆ. ಇಲ್ಲಿ ಧರ್ಮ, ಜಾತಿ, ಪ್ರಾಂತದ ಗಡಿಗಳು ಮಾಸಿ, ಜನರು ಪರಸ್ಪರ ವಿಶ್ವಾಸ ಮತ್ತು ಪ್ರೀತಿಯೊಂದಿಗೆ ಒಟ್ಟಾಗಿ ಸಂತಸ ಪಡುತ್ತಾರೆ. ಉತ್ತರ ಪ್ರದೇಶ, ಬಿಹಾರದಿಂದ ಬಂದ ವ್ಯಾಪಾರಿಗಳು ತಮ್ಮ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾ ಈ ಸೌಹಾರ್ದತೆಯ ಭಾಗವಾಗುತ್ತಾರೆ. ಇಲ್ಲಿ ಯಾರೂ ಒಬ್ಬರನ್ನು ತಾರತಮ್ಯದ ದೃಷ್ಟಿಯಿಂದ ನೋಡುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯುತ್ತದೆ.

ರಮಝಾನ್ ಪೇಟೆಯ ಸಂದೇಶ :

ಭಟ್ಕಳದ ರಮಝಾನ್ ಪೇಟೆ ತನ್ನ ಸರಳತೆಯಲ್ಲಿ ಒಂದು ದೊಡ್ಡ ಸಂದೇಶವನ್ನು ಮುಂದಿಡುತ್ತದೆ. ಧರ್ಮದ ಹೆಸರಿನಲ್ಲಿ ದ್ವೇಷ ಹರಡುವವರಿಗೆ ಇದೊಂದು ಪಾಠ. ಇಲ್ಲಿ ಜನರು ಒಂದಾಗಿ ವ್ಯಾಪಾರ ಮಾಡುತ್ತಾರೆ, ಖರೀದಿಸುತ್ತಾರೆ, ಸಂತೋಷಿಸುತ್ತಾರೆ. ಈ ಪೇಟೆ ಸಾಮರಸ್ಯದ ಸಂಕೇತವಾಗಿ, ಎಲ್ಲರನ್ನೂ ಒಂದೇ ಎತ್ತರದಲ್ಲಿ ಕಾಣುವ ಮಾನವೀಯತೆಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಸೌಂದರ್ಯವನ್ನು ಉಳಿಸಿಕೊಂಡು, ಭಟ್ಕಳದ ರಮಝಾನ್ ಪೇಟೆ ದೇಶಕ್ಕೆ ಒಂದು ಮಾದರಿಯಾಗಿದೆ.

ರಮಝಾನ್ ಪೇಟೆ ಕೇವಲ ಹಬ್ಬದ ತಯಾರಿಯ ಸ್ಥಳವಲ್ಲ :

ರಮಝಾನ್ ಪೇಟೆ ಕೇವಲ ಹಬ್ಬದ ತಯಾರಿಯ ಸ್ಥಳವಲ್ಲ. ಇದು ಭಾರತದ ಸಂಸ್ಕೃತಿಯ ಆಳವಾದ ಏಕತೆಯನ್ನು ತೋರುವ ಜೀವಂತ ಉದಾಹರಣೆಯಾಗಿದೆ. ರಮಝಾನ್ ಪೇಟೆಯ ಈ ಸೌಹಾರ್ದತೆ ಎಂದೆಂದಿಗೂ ಮುಂದುವರಿಯಲಿ ಎಂಬುದೇ ಎಲ್ಲರ ಆಶಯವಾಗಿದೆ.

“ಇಲ್ಲಿ ಎಲ್ಲ ಜಾತಿ, ಧರ್ಮದ ಜನರು ವ್ಯಾಪಾರ ಮಾಡುತ್ತಾರೆ. ಹಿಂದೂ ಗ್ರಾಹಕರೂ ಸಾಕಷ್ಟು ಬರುತ್ತಾರೆ. ಯಾರಿಗೂ ಯಾವುದೇ ನಿರ್ಬಂಧವಿಲ್ಲ. ಈ ರಮಝಾನ್ ಪೇಟೆ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಒಂದು ಉತ್ತಮ ಉದಾಹರಣೆ.”

-ಮಾಸ್ತಪ್ಪ ನಾಯ್ಕ, ಭಟ್ಕಳ

“ರಮಝಾನ್ ಪೇಟೆ ಬಹಳ ಖುಷಿ ನೀಡುತ್ತದೆ. ಇಲ್ಲಿ ತಿಂಡಿ ತಿನಿಸುಗಳು, ಕಡಿಮೆ ಬೆಲೆಯ ವಸ್ತುಗಳು ಸಿಗುತ್ತವೆ. ಪ್ರತಿ ವರ್ಷ ನಾವು ಮಕ್ಕಳೊಂದಿಗೆ ಇಲ್ಲಿಗೆ ಬರುತ್ತೇವೆ.”

-ಸಂತೋಷ್, ಕುಂದಾಪುರ


Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - -ಎಂ.ಆರ್.ಮಾನ್ವಿ

contributor

Similar News