ಭಟ್ಕಳ, ಮಂಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ

Update: 2025-03-25 20:34 IST
ಭಟ್ಕಳ, ಮಂಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ
  • whatsapp icon

ಭಟ್ಕಳ: ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಭಟ್ಕಳ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಶಿರಾಲಿಯ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ, "ಪ್ರತಿ ಪಂಚಾಯತ್ ಮಟ್ಟದಲ್ಲಿ ಸರಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ನೀರಿನ ಸಮಸ್ಯೆಗಳ ಪರಿಹಾರಕ್ಕಾಗಿ ಶರಾವತಿ ನದಿಯ ನೀರನ್ನು ಹೊನ್ನಾವರ ಮಾಗೋಡದಿಂದ ಭಟ್ಕಳದ ಗೊರಟೆತನಕ ಸರಬರಾಜು ಮಾಡಲು 240 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಅನುಮೋದನೆಗೊಂಡಿದ್ದು, ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿ ಇದೆ. ಜೊತೆಗೆ ಭಟ್ಕಳ ಪುರಸಭೆಗೆ 37 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಹೊನ್ನಾವರ-ಮಂಕಿಯಲ್ಲಿ 106 ಕೋಟಿ ರೂ. ವೆಚ್ಚದಲ್ಲಿ ಯೋಜನೆ ನಡೆಯಬೇಕಿದೆ. ಭಟ್ಕಳ ಜಾಲಿಯ ಪಟ್ಟಣ ಪಂಚಾಯತ್ ಪ್ರದೇಶದಲ್ಲಿ 86 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ ಹಂತದಲ್ಲಿದೆ. ಈ ಎಲ್ಲ ಯೋಜನೆಗಳ ಬಳಿಕ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ" ಎಂದು ಹೇಳಿದರು.

"2005ರಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಲು ಆದೇಶಿಸಿತು. ಆದರೆ ರಾಜ್ಯದಲ್ಲಿದ್ದ ಬಿಜೆಪಿ ಮತ್ತು ಸಮಿಶ್ರ ಸರ್ಕಾರಗಳು ಇದನ್ನು 2013ರವರೆಗೆ ಜಾರಿಗೊಳಿಸಲಿಲ್ಲ. ನಾನು ಶಾಸಕನಾದ ನಂತರ, ದೇಶಪಾಂಡೆಯವರು ಉಸ್ತುವಾರಿ ಮಂತ್ರಿಯಾಗಿ, ಜಿ.ಪಿ.ಎಸ್. ಸಮಿತಿಗಳನ್ನು ರಚಿಸಿ ಕಾರ್ಯಾರಂಭ ಮಾಡಿದರು. ನಮ್ಮ ಕ್ಷೇತ್ರದಲ್ಲಿ 25 ಸಾವಿರ ಅತಿಕ್ರಮಣದಾರರಿದ್ದು, ಅವರ ಹಕ್ಕುಪತ್ರ ವಿತರಿಸುವ ಕಾರ್ಯ ಮುಂದುವರಿಯಲಿದೆ. ಆದರೆ ಹೊಸ ಅತಿಕ್ರಮಣಕ್ಕೆ ನಮ್ಮ ಬೆಂಬಲ ಇಲ್ಲ" ಎಂದು ಅವರು ತಿಳಿಸಿದರು.

ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ಭಟ್ಕಳದಲ್ಲಿ ವಿದ್ಯುತ್ ಘಟಕ ನಿರ್ಮಾಣ ಹಂತದಲ್ಲಿದೆ. ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 2 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳ ಗುದ್ದಲಿಪೂಜೆ ಮಾಡುವ ಯೋಜನೆ ಇದೆ. ಭಟ್ಕಳದಲ್ಲಿ ಸಾಗರ ರಸ್ತೆ-ಬಂದರ ರಸ್ತೆ ಕಾಮಗಾರಿ 25 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ನೇರವಾಗಿ ಹಣ ಪಾವತಿಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಮುಖಂಡ ಸಾಯಿ ಗಾಂವಕರ ಮಾತನಾಡಿ, ಪಕ್ಷ ಸಂಘಟನೆ ಬಲಪಡಿಸಲು, ಮುಂಬರುವ ಚುನಾವಣೆಗೆ ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದ ತನಕ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತಿದೆ. ಹೊಸಬರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಪಕ್ಷವನ್ನು ವಿಸ್ತರಿಸಬೇಕು. ನಮ್ಮ ಸರ್ಕಾರ ಜನರ ಆರ್ಥಿಕ ಸುಧಾರಣೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಮಂಕಿ ಅಧ್ಯಕ್ಷ ಗೋವಿಂದ ನಾಯ್ಕ, ಗ್ಯಾರಂಟಿ ಯೋಜನೆ ಸಮಿತಿ ಭಟ್ಕಳ ತಾಲ್ಲೂಕು ಅಧ್ಯಕ್ಷ ರಾಜು ನಾಯ್ಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಲ್ಬರ್ಟ್ ಡಿಕೋಸ್ತಾ, ಬ್ಲಾಕ್ ಕಾಂಗ್ರೆಸ್ ಸಮಿತಿ ಭಟ್ಕಳ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ನಯನಾ ನಾಯ್ಕ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News