ಭಟ್ಕಳ: ನ್ಯೂ ಶಮ್ಸ್ ಸ್ಕೂಲ್ ನಲ್ಲಿ ವಾರ್ಷಿಕ ಕಾರ್ಯಕ್ರಮ
ಭಟ್ಕಳ: "ನಿಮಗಾಗಿ ಉಜ್ವಲ ಭವಿಷ್ಯ ಕಾಯುತ್ತಿದೆ. ಭವಿಷ್ಯದ ಬಗ್ಗೆ ಚಿಂತೆ ಬಿಡಿ" ಎಂದು ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಇಂಜಿನಿಯರ್ ನಝೀರ್ ಆಹ್ಮದ್ ಖಾಝಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿರುವ ಐಸಿಎಸ್‌ಇ ಪಠ್ಯಕ್ರಮದ ನ್ಯೂ ಶಮ್ಸ್ ಸ್ಕೂಲ್ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
"ನಮ್ಮ ಯುವಕರು ಭವಿಷ್ಯವನ್ನು ಬದಲಿಸುವ ಶಕ್ತಿಯುಳ್ಳವರು. ನಾವು ಹಿಂದೆ ಏನನ್ನು ಮಾಡಿದ್ದೇವೆ ಎಂಬುದಕ್ಕಿಂತ, ಭವಿಷ್ಯದಲ್ಲಿ ಏನನ್ನು ಸಾಧಿಸುಲಿದ್ದೇವೆ ಎನ್ನುವುದು ಮುಖ್ಯವಾಗಿದೆ. ನಮ್ಮ ವಿದ್ಯಾರ್ಥಿಗಳ ಪ್ರತಿಭೆ ಭರವಸೆಯ ಚಿಹ್ನೆಯಾ ಗಿದ್ದು, ಅವರು ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ" ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮರ್ಕಝ್ ಅನ್ನವಾಯತ್ ಅಬುಧಾಬಿ ಸಂಸ್ಥೆಯ ಅಧ್ಯಕ್ಷ ಅಶ್ರಫ್ ಅಲಿ ಮುಸ್ಬಾ, "ಯಶಸ್ವಿ ವ್ಯಕ್ತಿಗಳ ಜೀವನ ಅಧ್ಯಯನ ನಮ್ಮ ಜೀವನದ ಮಾರ್ಗದರ್ಶನವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗುರಿಯನ್ನು ನಿರ್ಧರಿಸಿ, ಅದನ್ನು ಸಾಧಿಸಲು ಪ್ರಯತ್ನಶೀಲರಾಗಬೇಕು" ಎಂದು ಕರೆ ನೀಡಿದರು.
ಗೌರವ ಅತಿಥಿಯಾಗಿ ದುಬೈ ಇಸ್ಲಾಮಿಕ್ ಫೌಂಡೇಷನ್ ಜೆಮ್ಸ್ ಮಾಡ್ರನ್ ಅಕಾಡೆಮಿಯ ಮುಖ್ಯಸ್ಥ ಮೀರಾ ಫೌಝಾನ್ ಮಾತನಾಡಿ, "ಪ್ರತಿಭೆಗಳಿಗೆ ಕೊರತೆಯಿಲ್ಲ. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರ ಹಾಗೂ ಪಾಲಕರ ಮಹತ್ವದ ಪಾತ್ರವಿದೆ" ಎಂದರು.
ಪ್ರಾಂಶುಪಾಲ ಲಿಯಾಖತ್ ಅಲಿ ಪ್ರಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಆಹ್ಮದ್ ದಾಮ್ದಾ ಮತ್ತು ಮುಯಿಝ್ ನಿರೂಪಿಸಿದರು. ಅಬ್ದುಲ್ಲಾ ರುಕ್ನುದ್ದೀನ್ ಸ್ವಾಗತಿಸಿದರು.
ಜಮಾಆತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಸದಸ್ಯರಾದ ಸೈಯ್ಯದ್ ಶಕೀಲ್ ಎಸ್.ಎಂ., ಕಾದಿರ್ ಮೀರಾ ಪಟೇಲ್, ಸಲಾಹುದ್ದೀನ್ ಎಸ್.ಕೆ., ಉಪಾಧ್ಯಕ್ಷ ಸೈಯ್ಯದ್ ಖುತುಬ್ ಬರ್ಮಾವರ್, ಮೌಲಾನ ಝಿಯಾವುರ್ರಹ್ಮಾನ್ ರುಕ್ನುದ್ದೀನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇಳೆ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.