ಮುರುಡೇಶ್ವರ ಕಡಲ ತೀರದ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ
ಮುರ್ಡೇಶ್ವರ, ಭಟ್ಕಳ: ರವಿವಾರ ಬೆಳ್ಳಂಬೆಳಿಗ್ಗೆ ಮುರ್ಡೇಶ್ವರ ಕಡಲತೀರದಲ್ಲಿನ ಅನಧಿಕೃತ ಗೂಡಂಗಡಿಗಳನ್ನು ಪೊಲೀಸರ ಬಂದೋಬಸ್ತ್‌ನಲ್ಲಿ ಅಧಿಕಾರಿಗಳು ತೆರವುಗೊಳಿಸಿದರು. ಸಹಾಯಕ ಆಯುಕ್ತೆ ಡಾ. ನಯನ ಮತ್ತು ತಹಶೀಲ್ದಾರ್ ನಾಗೇಂದ್ರ ಶೆಟ್ಟಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಸಿಆರ್ ಝಡ್ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಕಳೆದ ಕೆಲ ತಿಂಗಳಿಂದ ಸ್ಥಳೀಯರು ಕಡಲ ತೀರದ ಎದುರು ಗೂಡಂಗಡಿ ಸ್ಥಾಪನೆ ಮಾಡಿ ವ್ಯಾಪಾರ ನಡೆಸುತ್ತಿದ್ದರು. ಸಾರ್ವಜನಿಕರ ಮನವಿ ಮೇರೆಗೆ ಜಿಲ್ಲೆಯ ಉಸ್ತುವಾರಿ ಸಚಿವರು ತಾತ್ಕಾಲಿಕ ಅನುಮತಿ ನೀಡಿದ್ದರು. ಆದರೆ, ಡಿಸೆಂಬರ್ ಎರಡನೇ ವಾರದಲ್ಲಿ ಕೋಲಾರ ಮೂಲದ ವಿದ್ಯಾರ್ಥಿನಿಯರ ದುರಂತ ಸಾವಿನ ಘಟನೆ ಬಳಿಕ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಯಿತು.
ಅಧಿಕಾರಿಗಳು ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಿ, ಕಡಲತೀರದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಜಾರಿಗೆ ತರುವ ಯೋಜನೆಯ ಭಾಗವಾಗಿ ಈ ತೆರವು ಕಾರ್ಯಾಚರಣೆ ನಡೆಸಿದರು ಎನ್ನಲಾಗಿದೆ.
ಅಧಿಕಾರಿಗಳ ಸೂಚನೆಯ ನಂತರ, ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಫುಟ್‌ಪಾತ್ ಮೇಲೆ ಇದ್ದ ಮೂರು ಅಂಗಡಿಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದರು.