ಅರಣ್ಯ ಹಕ್ಕು ಕಾಯಿದೆಯ ಪುನರ್ ಪರಿಶೀಲನೆ ವಿರೋಧಿಸಿ ಹೋರಾಟ: ರವೀಂದ್ರ ನಾಯ್ಕ

Update: 2025-01-11 12:22 GMT

ಭಟ್ಕಳ: ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ನಡೆಯುತ್ತಿರುವ ಪುನರ್ ಪರಿಶೀಲನಾ ಪ್ರಕ್ರಿಯೆಗೆ ವ್ಯಾಪಕವಾದ ಕಾನೂನಾತ್ಮಕ ಆಕ್ಷೇಪಣೆಗಳು ಬಂದಿರುವ ಹಿನ್ನಲೆಯಲ್ಲಿ, ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸರ್ಕಾರದ ಮೇಲೆ ತೀವ್ರ ಒತ್ತಡ ತರಲಾಗುತ್ತಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಅವರು ಶನಿವಾರ ಭಟ್ಕಳದ ಕೋಲಾ ಪ್ಯಾರಡೈಜ್ ವಸತಿ ಗೃಹದ ಸಂಭಾಗಣದಲ್ಲಿ ಭಟ್ಕಳ ತಾಲೂಕಿನ ಗ್ರೀನ್‌ಕಾರ್ಡ್ ಪ್ರಮುಖರ ತರಬೇತಿ ಶಿಬಿರವನ್ನ ಉದ್ದೇಶಿಸಿ ಮಾತನಾಡಿದರು.

ನ. 28ರಂದು ಸರ್ಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, "ಅರಣ್ಯ ಹಕ್ಕು ಅರ್ಜಿಗಳನ್ನು ಕಾನೂನಾತ್ಮಕ ನಿಯಮಾವಳಿ ಉಲ್ಲಂಘಿಸಿ ಅಸ್ತಿತ್ವವಿಲ್ಲದ ಸಮಿತಿಗಳ ಮೂಲಕ ವಿಲೇವಾರಿ ಮಾಡುವುದು ಕಾನೂನು ಬಾಹಿರ ಕೃತ್ಯವಾಗಿದೆ. ಇಂತಹ ಕ್ರಮಗಳು ಅರಣ್ಯವಾಸಿಗಳಿಗೆ ತೀವ್ರ ಅನ್ಯಾಯವನ್ನು ಉಂಟು‌ ಮಾಡುತ್ತವೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಹಿನ್ನಲೆಯಲ್ಲಿ, ಹೋರಾಟಗಾರರ ವೇದಿಕೆಯು ಪುನರ್ ಪರಿಶೀಲನಾ ಪ್ರಕ್ರಿಯೆಯನ್ನು ನಿಲ್ಲಿಸಲು ಕಾನೂನಾತ್ಮಕ ಹೋರಾಟವನ್ನು ಪ್ರಾರಂಭಿಸಿದೆ. ಈ ಕುರಿತು ಹೋರಾಟಗಾರರು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಗ್ರೀನ್ ಕಾರ್ಡ್ ಪ್ರಮುಖರ ಸಭೆ ಭಟ್ಕಳ ತಾಲೂಕಿನ ಕೋಲಾಪೆರಡೈಜ್ ವಸತಿ ಗೃಹದಲ್ಲಿ ನಡೆದ ಗ್ರೀನ್‌ಕಾರ್ಡ್ ಪ್ರಮುಖರ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ರವೀಂದ್ರ ನಾಯ್ಕ, "ಜಿಲ್ಲೆಯ ಪ್ರತಿಯೊಂದು ತಾಲೂಕಿನಿಂದ 100 ಜನರನ್ನು ಗುರುತಿಸಿ, ಒಟ್ಟು 1,000 ಗ್ರೀನ್‌ಕಾರ್ಡ್ ಪ್ರಮುಖರನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ಸಂಘಟನಾ ತ್ಮಕ ಕೌಶಲ್ಯ ಮತ್ತು ಕಾನೂನು ಜ್ಞಾನವನ್ನು ವೃದ್ಧಿಸಲು ಮುಂದಿನ ಮೂರು ತಿಂಗಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ," ಎಂದು ತಿಳಿಸಿದರು.

ಸಭೆಯಲ್ಲಿ ದೇವರಾಜ ಗೊಂಡ, ಅಬ್ದುಲ್ ಕಯ್ಯುಮ್ ಕೋಲಾ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರು ನಾಯ್ಕ, ಚಂದ್ರ ಹಾಸ್ ಭಟ್ಕಳ, ಸಲೀಂ ಹೆಬಳೆ, ಮಂಜುನಾಥ ನಾಯ್ಕ ಕಾಯ್ಕಣಿ, ಜಯಲಕ್ಷ್ಮೀ ನಾಯ್ಕ, ಶಾಂತಾ ನಾಯ್ಕ ಶಿರಾಲಿ, ರಾಮಚಂದ್ರ ಆಚಾರಿ, ರತ್ನಾ ಮೋಗೇರ್, ನಾಗಮ್ಮ ಮೋಗೇರ್ ಮುಂತಾದವರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News