ಕಾರವಾರ: ಕಾಸ್ಟಿಕ್ ಸೋಡಾ ಉತ್ಪಾದನಾ ಘಟಕದಲ್ಲಿ ರಾಸಾಯನಿಕ ಸೋರಿಕೆ; 12 ಮಂದಿ ಕಾರ್ಮಿಕರು ಅಸ್ವಸ್ಥ
Update: 2025-01-11 11:58 GMT
ಕಾರವಾರ: ಆದಿತ್ಯ ಬಿರ್ಲಾ ಗ್ರಾಸಿಮ್ ಇಂಡಸ್ಟ್ರೀಸ್ ನ ಕಾಸ್ಟಿಕ್ ಸೋಡಾ ಉತ್ಪಾದನಾ ಘಟಕದಲ್ಲಿ ಶನಿವಾರ ರಾಸಾಯನಿಕ ಸೋರಿಕೆಯಾಗಿ 12 ಮಂದಿ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಕಾರವಾರದ ಬಿಣಗಾದಲ್ಲಿ ಸಂಭವಿಸಿದೆ.
ಘಟಕದಲ್ಲಿ ಕೆಲಸ ಮಾಡುತ್ತಿದ್ದಾಗ ರಾಸಾಯನಿಕ ಸೋರಿಕೆಯಾಗಿದೆ. ಇದರಿಂದ ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ, ಕಣ್ಣು ಉರಿಯಿಂದ ಅಸ್ವಸ್ಥರಾಗಿದ್ದಾರೆ. ಬಳಿಕ ಅವರನ್ನು ರಾಸಾಯನಿಕ ಸೋರಿಕೆಯಾದ ಸ್ಥಳದಿಂದ ಹೊರಗೆ ತರಲಾಗಿದೆ.
ಅಸ್ವಸ್ಥಗೊಂಡ ಕಾರ್ಮಿಕರನ್ನು ಬಿಹಾರ, ಜಾರ್ಖಂಡ್ ಮೂಲದ ಜಹಾನೂರ (20), ಕಮಲೇಶ ವರ್ಮಾ (22), ನೀಲಕಂಠ (22), ಬೇಜನಕುಮಾರ್ (27), ಕಿಶನ್ ಕುಮಾರ್ (28), ಮೋಹಿತ್ ವರ್ಮಾ (21), ನಂದ ಕಿಶೋರ್, ಅಝೀಝ್, ದೀಪು, ಕಲ್ಲು, ಸುಜನ್, ನಝೀದುಲ್ಲಾ ಎಂದು ಗುರುತಿಸಲಾಗಿದೆ. ಸದ್ಯ ಇವರನ್ನು ಕಾರವಾರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ರಾಸಾಯನಿಕ ಸೋರಿಕೆಯಾಗಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದಿತ್ತು.