ಭಟ್ಕಳ | ರಾಷ್ಟ್ರ ಮಟ್ಟದ ಹ್ಯಾಕಥಾನ್ ‘ಕೋಡ್ ಫೆಸ್ಟ್ 2025’ ಅನ್ನು ಆಯೋಜಿಸಲಿರುವ ಅಂಜುಮನ್ ಇನ್ಸ್ಟಿಟ್ಯೂಟ್
ಭಟ್ಕಳ: ದಿ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ ಮೆಂಟ್(AITM) ರಾಷ್ಟ್ರ ಮಟ್ಟದ ಹ್ಯಾಕಥಾನ್ ಕೋಡ್ ಫೆಸ್ಟ್- 2025 ಆತಿಥ್ಯ ವಹಿಸಲು ಮುಂದಾಗಿದೆ. ಈ ಕಾರ್ಯಕ್ರಮವು ಆವಿಷ್ಕಾರ, ಸೃಜನಶೀಲತೆ ಹಾಗೂ ತಂತ್ರಜ್ಞಾನದ ಮೂಲಕ ಜಗತ್ತಿನ ನೈಜ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಾಗಲಿದೆ.
ಈ ಹ್ಯಾಕಥಾನ್ ದೇಶಾದ್ಯಂತದ ತಂತ್ರಜ್ಞರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಕ್ತವಾಗಲಿದ್ದು, ಎರಡು ಕಠಿಣ ಸುತ್ತಿನ ಪ್ರಕ್ರಿಯೆಯನ್ನು ಒಳಗೊಂಡಿದ್ದು, ಪ್ರತಿಭಾವಂತ ಹಾಗೂ ಆವಿಷ್ಕಾರಿ ತಂಡಗಳು ಅಂತಿಮ ಸುತ್ತಿಗೆ ಪ್ರವೇಶಿಸುವುದನ್ನು ಖಾತರಿ ಪಡಿಸಲಿದೆ.
ಈ ಹ್ಯಾಕಥಾನ್ ಮೊದಲ ಸುತ್ತಿನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಕೆ ಇರಲಿದ್ದು, ಈ ಸುತ್ತಿನಲ್ಲಿ ದೇಶದ ವಿವಿಧೆಡೆಗಳಿಂದ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಎರಡನೆ ಸುತ್ತಿನಲ್ಲಿ ಭಟ್ಕಳದ ಎಐಟಿಎಂ ಕ್ಯಾಂಪಸ್ ನಲ್ಲಿ ಹ್ಯಾಕಥಾನ್ ಇರಲಿದೆ. ಈ ಅಂತಿಮ ಹಂತದಲ್ಲಿ ಭಾಗವಹಿಸಲು ಅಗ್ರ 100 ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 25-30 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಹ್ಯಾಕಥಾನ್ ನ ನೋಂದಣಿ ಡಿಸೆಂಬರ್ 25, 2024ರಿಂದ ಪ್ರಾರಂಭಗೊಂಡಿದ್ದು, ಜನವರಿ 20, 2025ರಂದು ಅಂತ್ಯಗೊಳ್ಳಲಿದೆ. ಯೋಜನೆ ಸಲ್ಲಿಕೆ ಅವಧಿ ಜನವರಿ 21ರಿಂದ 31ರವರೆಗೆ ಇರಲಿದ್ದು, ತಂಡಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ಫೆಬ್ರವರಿ 3, 2025ರಂದು ನಡೆಯಲಿದೆ. ಅಂತಿಮವಾಗಿ ಹ್ಯಾಕಥಾನ್ ಫೆಬ್ರವರಿ 8, 2025ರಂದು ನಡೆಯಲಿದೆ.