ಮುರುಡೇಶ್ವರ ಸಮುದ್ರದಲ್ಲಿ ಮೂವರು ವಿದ್ಯಾರ್ಥಿನಿಯರ ದಾರುಣ ಮೃತ್ಯು: ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹ ಹಸ್ತಾಂತರ
ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಕಣ್ಮರೆಯಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳನ್ನು ಕರಾವಳಿ ಕಾವಲುಪಡೆ ತಂಡ ಬುಧವಾರ ಪತ್ತೆ ಮಾಡಿದೆ. ಅವರ ಮೃತದೇಹಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಜಿಲ್ಲಾಡಳಿತ, ಬಳಿಕ ಕುಟುಂಬದವರಿಗೆ ಹಸ್ತಾಂತರ ಮಾಡಿದೆ.
ಮಂಗಳವಾರ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಯರು ಮುರುಡೇಶ್ವರದಲ್ಲಿ ಪ್ರವಾಸದ ವೇಳೆ ಸಮುದ್ರದಲ್ಲಿ ನೀರಿಗೆ ಕೊಚ್ಚಿ ಹೋಗಿದ್ದರು. ಶೋಧ ಕಾರ್ಯಾಚರಣೆಯಲ್ಲಿ ಮುರುಡೇಶ್ವರದ ನವೀನ್ ಬೀಚ್ ರೆಸಾರ್ಟ್ ಬಳಿ ದೀಕ್ಷಾ (15), ಲಾವಣ್ಯ (15) ಮತ್ತು ವಂದನಾ (15) ಎಂಬ ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆಯಾಗಿದ್ದು, ಅವುಗಳನ್ನು ಬೋಟ್ ಮೂಲಕ ಅಳ್ವೆಕೋಡಿ ಬಂದರಿಗೆ ತಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಮುಲುಬಾಗಿಲು ಶಾಸಕ ಸಮೃದ್ಧಿ ಮಂಜುನಾಥ, ಜಿಲ್ಲಾಧಿಕಾರಿ, ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಮೃತ ದೇಹಗಳನ್ನು ಮುಳಬಾಗಿಲಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಉಳಿದ ವಿದ್ಯಾರ್ಥಿಗಳನ್ನು ಊರಿಗೆ ಕಳುಹಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಮಂಗಳವಾರ ಮುರುಡೇಶ್ವರ ಸಮುದ್ರದಲ್ಲಿ ಏಳು ವಿದ್ಯಾರ್ಥಿನಿಯರು ನೀರಿಗೆ ಕೊಚ್ಚಿ ಹೋಗಿದ್ದರು. ಲೈಫ್ ಗಾರ್ಡ್ ಸಿಬ್ಬಂದಿ ಮೂವರನ್ನು ರಕ್ಷಿಸಿದರೂ, ಶ್ರಾವಂತಿ ಮೃತಪಟ್ಟಿದ್ದರು. ಉಳಿದ ದೀಕ್ಷಾ, ಲಾವಣ್ಯ, ಮತ್ತು ವಂದನಾ ಕಾಣೆಯಾಗಿದ್ದರು. ಈ ದಾರುಣ ದುರಂತದಲ್ಲಿ ನಾಲ್ವರು ಅಮಾಯಕ ವಿದ್ಯಾರ್ಥಿನಿಯರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಸಾರ್ವಜನಿಕರು ಶಿಕ್ಷಕರು ಮತ್ತು ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯವನ್ನು ದೋಷ್ಟಪಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ, ಮುರುಡೇಶ್ವರದ ಲೈಫ್ ಗಾರ್ಡ್ ಸಿಬ್ಬಂದಿಗೆ ಜೀವ ರಕ್ಷಕ ಸಾಮಗ್ರಿಗಳ ಕೊರತೆ ಇದ್ದು, ಇದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದು ಮುರುಡೇಶ್ವರ ಪ್ರವಾಸೋದ್ಯಮ ಸ್ಥಳದಲ್ಲಿ ಸುರಕ್ಷತಾ ವ್ಯವಸ್ಥೆಗಳ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.