ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣ ದೊರೆಯಬೇಕು: ಸಚಿವ ಮಾಂಕಾಳ್ ವೈದ್ಯ

Update: 2024-06-11 13:13 GMT

ಭಟ್ಕಳ: ಎಲ್ಲರಿಗೂ ಶಿಕ್ಷಣ ದೊರಕಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ಶಿಕ್ಷಣದಿಂದ ವಂಚಿತನಾಗಬಾರದು, ಎಂದಿಗೂ ನನ್ನ ಮೊದಲ ಆಧ್ಯತೆ ಶಿಕ್ಷಣವೇ ಆಗಿದೆ ಎಂದು ಉ.ಕ.ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು.

ಅವರು, ಭಟ್ಕಳದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ "ಶೈಕ್ಷಣಿಕ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ತಾಲೂಕು ಜಿಲ್ಲೆಗೆ ಎರಡನೇ ಸ್ಥಾನ ಬಂದಿರುವುದು ಖುಷಿ ನೀಡಿದೆ. ಮುಂದಿನ ವರ್ಷ ಜಿಲ್ಲೆಗೆ ಅಷ್ಟೇ ಅಲ್ಲದೇ ರಾಜ್ಯಕ್ಕೆ ಪ್ರಥಮ ಸ್ಥಾನ ಬರುವಂತಾಗಬೇಕು. ಆ ನಿಟ್ಟಿನಲ್ಲಿ ಬೇಕಾದ ಎಲ್ಲಾ ಸಹಾಯ-ಸಹಕಾರ ನೀಡಲು ಸಿದ್ಧ' ಎಂದು ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.

ಈ ಸಂದರ್ಭದಲ್ಲಿ ಭಟ್ಕಳ ತಾಲೂಕಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಹರ್ಷ ನಾಗಯ್ಯ ಗೊಂಡ, ಮೈಮುನಾ ಅಜಾಯಿಬ್, ಭಾವನಾ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಭಟ್ಕಳ ತಾಲೂಕಿನ ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ

ಶೇ.100 ಫಲಿತಾಂಶ ಪಡೆದಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ 21 ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇಲಾಖೆಯ ವತಿಯಿಂದ ನೀಡಿರುವ ಲ್ಯಾಪ್‌ಟಾಪ್‌ನ್ನು ಸಚಿವರು ವಿತರಿಸಿದರು. ಶೈಕ್ಷಣಿಕ ಸಾಧನೆಗೆ ವಿನೂತನ ಕಾರ್ಯಕ್ರಮಗಳಿಂದ ಕಾರ್ಯಯೋಜನೆ ರೂಪಿಸಿ 'ಯಶಸ್ಸನ್ನು ಪಡೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ ಮೊಗೇರ ರನ್ನು ಸಚಿವರು ಸನ್ಮಾನಿಸಿದರು.

ವೇದಿಕೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಎನ್.ಜಿ ನಾಯಕ, ಜಿಲ್ಲಾ ಅಕ್ಷರದಾಸೋಹ ನಿರ್ದೇಶಕರಾದ ವಿ.ಟಿ ನಾಯ್ಕ, ತಹಶೀಲ್ದಾರ ನಾಗರಾಜ ನಾಯ್ಕ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಭಾಕರ ಚಿಕ್ಕನಮನೆ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪಾನ್ಯಾಸಕ ಸಂತೋಷ ಶ್ರೇಷ್ಠಿ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ದತ್ತಾತ್ರೇಯ ನಾಯ್ಕ, ನೌಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಭಟ್ಕಳ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ವಸಂತ ಶಾಸ್ತ್ರಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಅಧ್ಯಕ್ಷೆ ಶಾರದಾ ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಎಮ್.ಎನ್ ನಾಯ್ಕ, ಸಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಪ್ರೌಢಶಾಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಗೌಡ, ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಬ್ಬಿರ ಆಹ್ಮದ್ ಧಪೇದಾರ್, ಅನುದಾನರಹಿತ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಮಮತಾ ಭಟ್ಕಳ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ ಪಟಗಾರ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ ಮೊಗೇರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ ವಂದಿಸಿದರು. ಶಿಕ್ಷಕ ಶ್ರೀಧರ ಶೇಟ್‌ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಜಾಮಿಯಾ ಜಾಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮಾನಂದ ನಾಯಕ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ನಾಗೇಶ ಮಡಿವಾಳ ಶೈಕ್ಷಣಿಕ ವಿಷಯಗಳನ್ನು ಪ್ರಸ್ತುತಪಡಿಸಿದರು.


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News