ಪ್ರವಾದಿ ಕುರಿತು ದ್ವೇಷ ಭಾಷಣಗೈದ ಯತಿ ನರಸಿಂಗಾನಂದ ಹೇಳಿಕೆ ಖಂಡಿಸಿ ಭಟ್ಕಳ ಬಂದ್

Update: 2024-10-15 08:28 GMT

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ದ್ವೇಷ ಭಾಷಣಗೈದ ಉತ್ತರ ಪ್ರದೇಶದ ಯತಿ ನರಸಿಂಗಾನಂದ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಭಟ್ಕಳದ ಸಾಮಾಜಿಕ- ರಾಜಕೀಯ ಸಂಸ್ಥೆ ತಂಝೀಮ್ ನೇತೃತ್ವದಲ್ಲಿ ಸರ್ವ ಜಮಾಅತ್ ಸಂಘಟನೆಗಳು ನೀಡಿದ್ದ ಮಂಗಳವಾರದ ಭಟ್ಕಳ ಬಂದ್ ಕರೆಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.

ನರಸಿಂಗಾನಂದ ಹೇಳಿಕೆ ಖಂಡಿಸಿ ಸೋಮವಾರ ತಂಝೀಮ್ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಈ ವೇಳೆ ನರಸಿಂಗಾನಂದ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ಭಟ್ಕಳ ಬಂದ್ ಗೆ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಕರೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಭಟ್ಕಳದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಧೀನಕ್ಕೊಳಪಟ್ಟ ಶಿಕ್ಷಣ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಆಟೋ ರಿಕ್ಷಾಗಳು ರಸ್ತೆಗಿಳಿದಿಲ್ಲ. ಎಲ್ಲ ರೀತಿಯ ವ್ಯಾಪಾರ, ವ್ಯವಹಾರ ಸ್ಥಗಿತಗೊಂಡಿವೆ. ಆದರೆ ಮುಸ್ಲಿಮೇತರರ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಎಂದಿನಂತೆ ಕಾರ್ಯಾಚರಿಸುತ್ತಿವೆ.

ನಗರದಲ್ಲಿ ಜನ ಸಂಚಾರ ವಿರಳವಾಗಿದ್ದು, ಎಲ್ಲೆಡೆ ಶಾಂತ ವಾತಾವರಣವಿದೆ. ಬಂದ್ ಹಿನ್ನೆಲೆಯಲ್ಲಿ ಭಟ್ಕಳದಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ತಂಝೀಮ್ ಹಾಗೂ ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಕೂಡ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸ್ವಯಂ ಸೇವಕರನ್ನು ನಿಯೋಜಿಸಿದ್ದು ಕಂಡು ಬಂದಿದೆ.

 

Full View

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News