ಭಟ್ಕಳ| ಜನರಿಂದ ಟೋಲ್ ರೂಪದಲ್ಲಿ ಹಣ ಲೂಟಿ ಮಾಡಲಾಗುತ್ತಿದೆ: ನಾಗೇಶ ನಾಯ್ಕ ಆರೋಪ

Update: 2024-10-16 17:27 GMT

ಭಟ್ಕಳ: ಜಿಲ್ಲೆಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿಯ ಜೊತೆಗೆ ಜನರಿಂದ ಟೋಲ್ ರೂಪದಲ್ಲಿ ಹಣವನ್ನು ಲೂಟಿ ಮಾಡುತ್ತಿರುವ ಐ.ಆರ್.ಬಿ. ಕಂಪನಿ ವಿರುದ್ದ ಇವರುಗಳ‌ ಹಗರಣವನ್ನು ಜಿಲ್ಲೆಯ ಪ್ರತಿಯೊಂದು ಜನರಲ್ಲಿ ಜಾಗೃತಿ ಮೂಡಿಸಿ ಜನಾಂದೋಲನವನ್ನು ರೂಪಿಸಿ ಇನ್ನೊಂದೆಡೆ ಇವರುಗಳ ಎಲ್ಲಾ ಹಗರಣದ ದಾಖಲೆಗಳನ್ನು ಕ್ರೂಢಿಕರಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೇವೆ ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಶಿರಸಿ ಇದರ ಅಧ್ಯಕ್ಷ ನಾಗೇಶ ನಾಯ್ಕ ಕಾಗಲ್ ಅವರು ಎಚ್ಚರಿಕೆ ನೀಡಿದರು.

ಅವರು ಬುಧವಾರದಂದು ಇಲ್ಲಿನ ನಗರ ಭಾಗದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

'ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಸಾಕಷ್ಟು ಇವೆ. ಈಗ ಅವೆಲ್ಲದವುಗಳ ಜೊತೆಗೆ ಜಿಲ್ಲೆಯ ಜನರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ಪರಿಣಮಿಸಿದೆ. 3 ವರ್ಷದ ಅವಧಿಯಲ್ಲಿ ಮುಗಿಯ ಬೇಕಾದ ಹೆದ್ದಾರಿ ಅಗಲೀಕರಣ ಕಾಮಗಾರಿಯು 11 ವರ್ಷಗಳು ಕಳೆದರು ಸಹ ಇನ್ನು ಮುಕ್ತಾಯಗೊಂಡಿಲ್ಲ. ಕಾರಣ ಇನ್ನು ತನಕ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಭಿವೃದ್ಧಿ ಕೆಲಸ ತೀರಾ ವಿಳಂಬವಾಗಿದೆ. ಸಾಕಷ್ಟು ಕಡೆ ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆದಿದೆ. ಟೋಲ್ ನಾಕಾದಲ್ಲಿ ಹಣವನ್ನು ಲೂಟಿ ಹೊಡೆಯುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಂತ್ರಣದಡಿ ಐ.ಆರ್.ಬಿ. ಗುತ್ತಿಗೆದಾರ ಕಂಪನಿ ವತಿಯಿಂದ ಈ ವರೆಗೆ ಮುಕ್ತಾಯ ವಾಗಿರುವ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳಲ್ಲಿ ಭೂ ವಿಜ್ಞಾನ ಸಮೀಕ್ಷಾ ವರದಿ ಶಿಫಾರಸ್ಸಿನಂತೆ ಯಾವುದೇ ಮುಂಜಾಗ್ರತಾ ಕ್ರಮವನ್ನು ಅನುರಿಸಿಲ್ಲವಾಗಿದೆ. ಆಯಾ ಸ್ಥಳಗಳಲ್ಲಿನ ರಸ್ತೆ, ಗುಡ್ಡ, ಸಮುದ್ರ ಕಿನಾರೆಗಳು ಸೇರಿದಂತೆ ಕೆಲವು ಕಡೆಗಳಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡಿರುತ್ತಾರೆ. ಇದರಲ್ಲಿ ಯಾವುದೇ ಪಾರದರ್ಶಕತೆ ಕಂಡು ಬಂದಿಲ್ಲ ವಾಗಿದೆ. ಜಿಲ್ಲೆಯ ಯಾವ ಸ್ಥಳದಲ್ಲಿ ಅಲ್ಲಿನ ಸ್ಥಳೀಯ ಪರಿಸ್ಥಿತಿಯನ್ನಾಧರಿಸಿ ಫೈ ಓವರ್, ಅಂಡರಪಾಸ್, ಓವರ್ ಬ್ರೀಡ್ಜ, 45ಮೀ ಅಗಲ ಚರಂಡಿ‌ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಸ್ಪಷ್ಟವಾಗಿದೆ ಎಂದ ಅವರು ಅಂಕೋಲಾ ಶಿರೂರುನಲ್ಲಿ ನಡೆದ ಘಟನೆಯ ಗುತ್ತಿಗೆದಾರ ಐ.ಆರ್.ಬಿ. ಕಂಪನಿಗೆ ಬಿಸಿ ಮುಟ್ಟಂತಾಗಿದೆ ಎಂದರು.

ಅಂಕೋಲಾ ಶಿರೂರು ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ ಸ್ಥಳ ಭೇಟಿ ಮಾಡಿ ಕಾರವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆದ ಸಭೆಗೆ ಎನ್.ಎಚ್.ಎ.ಐ. ಮತ್ತು ಐ.ಆರ್.ಬಿ.ಕಂಪನಿ ಅಧಿಕಾರಿಗಳನ್ನು ಕಷ್ಟಪಟ್ಟು ಕರೆಯಿಸಿಕೊಂಡಿದ್ದು ಸಭೆಯಲ್ಲಿ ಮುಖ್ಯಮಂತ್ರಿಗಳ ಪ್ರಶ್ನೆಗೆ ಅಧಿಕಾರಿಗಳು ಸಮಂಜಸವಾದ ಉತ್ತರ ನೀಡಿಲ್ಲ. ಇದಕ್ಕೆ ಮುಖ್ಯಮಂತ್ರಿಗಳು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಕತ್ತಲೆಯಲ್ಲಿ ಇಟ್ಟಿದ್ದೀರಿ ಎಂದು ಎನ್.ಎಚ್.ಎ.ಐ. ಮತ್ತು ಐ.ಆರ್.ಬಿ.ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನ್ಯಾಷನಲ್ ಸರ್ವೇ ಆಪ್ ಇಂಡಿಯಾದ ವರದಿ ಯನ್ನಾಧರಿಸಿ ಕೆಲಸ ಮಾಡಿಲ್ಲ. ಇದಕ್ಕೂ ಪೂರ್ವದಲ್ಲಿಯೇ 5 ವರ್ಷದೊಳಗೆ 80% ರಸ್ತೆ ಮುಕ್ತಾಯವಾಗದೇ ಟೋಲ್ ಸ್ವೀಕರಿಸುತ್ತಿದ್ದೀರಿ ಎಂದು ಬೇಸರದಿಂದ ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದು ಹೇಳಿದರು.

ಕಾರವಾರದಿಂದ ಭಟ್ಕಳ ಗೊರಟೆಯ ಟೋಲ್ ತನಕದ 145 ಕಿ.ಮೀ. ರಸ್ತೆಯಲ್ಲಿ 60 ಕಿ.ಮೀ. ಗೂ ಅಧಿಕ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಳೇ ನಡೆದಿಲ್ಲ. ಇವರಿಗೆ ಜನರ ಜೀವದ ಬೆಲೆಯು ಗೊತ್ತಿಲ್ಲ. ಅದಕ್ಕೆ ಪರಿಹಾರವು ಅರಿವಿಲ್ಲದವರ ವಿರುದ್ಧ ಮುಂದಿನ ಕಾನೂನಿನ ಹೋರಾಟಕ್ಕೆ ಮುನ್ನುಡಿಯಿಡಲಿದ್ದೇವೆ. ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವ ಐಆರ್.ಬಿ. ಕಂಪನಿಯ ವಿರುದ್ದ ಮುಖ್ಯವಾಗಿ ಜನಪ್ರತಿನಿಧಿಗಳು ಸಹ ಹೋರಾಟ ಮಾಡಬೇಕು. ಅವರು ಜಿಲ್ಲೆಯ ಈ ಸಮಸ್ಯೆಗೆ ಸಮಯ ನೀಡಬೇಕಿದೆ. ಆದರರಲ್ಲಿ ಅವರು ಈ ದುಷ್ಟ ವ್ಯವಸ್ಥೆಯ ಜೊತೆಗೆ ಅವರು ಸುಮ್ಮನಿದ್ದಾರೆ. ಇವರುಗಳಿಗೆ ಜನಾಂ ದೋಲನದ ಮೂಲಕ ಜಿಲ್ಲೆಯ ಜನರನ್ನು ಒಗ್ಗೂಡಿಸಲಿದ್ದೇವೆ. ನಮ್ಮ ಜಿಲ್ಲೆ ಒಂದು ನಿಷ್ಕ್ರಿಯ ಜಿಲ್ಲೆಯಾಗಿದೆ ಕಾರಣ ಇದಕ್ಕೆ ಜನರು ಮತ್ತು ಜನಪ್ರತಿನಿಧಿಗಳೇ ಕಾರಣ ಎಂದ ಅವರು ನಮ್ಮ ಹೋರಾಟವನ್ನು ಅಡಗಿಸುವ ಕೆಲಸ ಮಾಡಬಾರದು ಎಂದರು.

ಬೇಡಿಕೆಗಳು

* ಚತುಷ್ಪಥ ರಸ್ತೆ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ ಈಗ ಮುಂದುವರೆಸಿರುವ ಅನುಚಿತ ಟೋಲ್ ವಸೂಲಾತಿಯನ್ನು ತಕ್ಷಣದಿಂದ ನಿಲ್ಲಿಸಬೇಕು.

* ಗುತ್ತಿಗೆದಾರ ಐ.ಆರ.ಬಿ. ಕಂಪನಿ ಭೂ ವಿಜ್ಞಾನ ಸಮೀಕ್ಷಾ ವರದಿಯಂತೆ ಮುಂಜಾಗ್ರತಾ ಸುರಕ್ಷಾ ಕ್ರಮಗಳನ್ನು ಸಂಪೂರ್ಣವಾಗಿ ಅಳವಡಿಸಬೇಕು ಮತ್ತು ಅತೀ ಶೀಘ್ರವಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು.

* ರಸ್ತೆ ಅಗಲೀಕರಣದ ಅವೈಜ್ಞಾನಿಕ ಕಾಮಗಾರಿಯ ಪರಿಣಾಮವಾಗಿ ಈ ವರೆಗೆ ಸಂಭವಿಸಿದ ವಾಹನ ಅಪಘಾತ, ಭೂಕುಸಿತದಂತಹ ಘಟನೆಗಳಿಂದ ಸಂಕಷ್ಟಕ್ಕಿಡಾದ ಸಂತ್ರಸ್ತರಿಗೆ ಸೂಕ್ತ ಪರಿಹಾರದ ಹಣವನ್ನು ಎನ್.ಎಚ್.ಎ.ಐ. ಮತ್ತು ಐ.ಆರ್.ಬಿ.ಕಂಪನಿ ನೀಡಬೇಕು.

* ಈ ಘಟನೆ ಕುರಿತಂತೆ ಜಿಲ್ಲಾ ಮಟ್ಟದಿಂದ ಹೊನ್ನಾವರ ತಾಲೂಕಿನಲ್ಲಿ ಸೆಪ್ಟೆಂಬರ್ 12 2024 ರಂದು ಮುಂಚಿತವಾಗಿ ಪೋಲಿಸ್ ಅನುಮತಿ ಕೋರಿದಾಗ್ಯೂ ಸಹ ಯಾವುದೇ ಪ್ರತ್ಯುತ್ತರ ನೀಡದೇ ಪಾದಯಾತ್ರೆಯೊಂದಿಗೆ ಎನ್.ಎಚ್.ಎ.ಐ. ಮತ್ತು ಐ.ಆರ್.ಬಿ. ಕಂಪನಿ ವಿರುದ್ದ ಶಾಂತಿಯುತ ಪ್ರತಿಭಟನೆ ನಡೆಸಿ ತಹಸೀಲ್ದಾರ ಮತ್ತು ಐ.ಆರ್.ಬಿ. ಕಂಪನಿಗೆ ನೀಡಿದ ಮನವಿಗೆ ಕುರಿತಂತೆ 8 ಜನರು ಸಹಿತ ನನ್ನ ಮೇಲೆ ಸೂಮೋಟೋ ಪ್ರಕರಣ ದಾಖಲಿಸಿದ್ದಾರೆ. ಇದನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ‌

* ಸಾರ್ವಜನಿಕ ನ್ಯಾಯಕ್ಕಾಗಿ ನಡೆಸುವ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಎನ್.ಎಚ್.ಎ.ಐ. ಮತ್ತು ಐ.ಆರ್.ಬಿ.ಯ ಹುನ್ನಾರದ ವಿರುದ್ದ ಜಿಲ್ಲೆಯಾದ್ಯಂತ ಜನಾಂದೋಲನ ರೂಪಿಸಿ ಮುಂದಿನ ದಿನದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗು ವುದು ಎಂದು ಎಚ್ಚರಿಸಿದರು.

ಭಟ್ಕಳ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ರಾಜೇಶ ನಾಯಕ ಮಾತನಾಡಿ 'ಜಿಲ್ಲೆಯಲ್ಲಿನ ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರುದ್ದದ ಹೋರಾಟಕ್ಕೆ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಜೊತೆಗೆ ಭಟ್ಕಳದ ಹೋರಾಟದ ಸಮಿತಿಯವರದ್ದು ಬೆಂಬಲ ಇದೆ ಎಂದರು.

ಈ ಸಂದರ್ಭದಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ವಿ.ಎನ್.ನಾಯ್ಕ, ವೀರಭದ್ರ, ಚಂದ್ರಪ್ಪ ಚೆನ್ನಯ್ಯ, ರಾಘವೇಂದ್ರ ನಾಯ್ಕ, ಭಟ್ಕಳದ ಪುರಸಭೆ ಉಪಾಧ್ಯಕ್ಷ ಅಲ್ತಾಪ್ ಖರೂರಿ, ಇಮ್ರಾನ್ ಲಂಖಾ, ಮಜ್ಲಿಸೆ ಇಸ್ಲಾ ಒ ತಂಝಿಂ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ, ಕಾರ್ಯದರ್ಶಿ ಎಂ.ಜೆ.ರಖೀಬ್, ಎಮ್.ಡಿ.ನಾಯ್ಕ, ಟಿ.ಡಿ.ನಾಯ್ಕ, ಪಾಂಡು ನಾಯ್ಕ, ಸತೀಶ ಆಚಾರ್ಯ ಸೇರಿದಂತೆ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News