ಲೌಡ್ ಸ್ಪೀಕರ್ ಘಟನೆಗೆ ಕೋಮುಬಣ್ಣ; ಬಿಜೆಪಿ ಸಂಸದ ತೇಜಸ್ವಿಸೂರ್ಯ ವಿರುದ್ಧ ದೂರು ದಾಖಲು
ಬೆಂಗಳೂರು, ಮಾ.19: ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶದಿಂದ ನಗರದ ನಗರ್ತಪೇಟೆಯಲ್ಲಿ ಪ್ರತಿಭಟನೆ ನಡೆಸಲು ಪ್ರಚೋದಿಸುವ ಹೇಳಿಕೆ ನೀಡಿ, ಕೋಮು ದ್ವೇಷ ಹರಡಲು ಯತ್ನಿಸಿದ ಬಿಜೆಪಿ ಸಂಸದ ತೇಜಸ್ವಿಸೂರ್ಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದೆ.
ಈ ಕುರಿತು ಕಾಂಗ್ರೆಸ್‌ನ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಆಯೋಗದ ಕಚೇರಿಗೆ ತೆರಳಿ ದೂರು ನೀಡಿದ್ದು, ಬೆಂಗಳೂರಿನ ನಗರ್ತಪೇಟೆಯಲ್ಲಿ ಅಂಗಡಿ ಮಾಲಕರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕೋಮು ದ್ವೇಷ ಮೂಡಿಸುವ ಸಲುವಾಗಿ ಬಿಜೆಪಿಯ ನಾಯಕರು ತಿರುಚುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಾ.18ರಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಭೇಟಿ ನೀಡಿ ಅಂಗಡಿಯ ಮುಂದೆ ಗುಂಪು ಸೇರಿಸಿ ಮಾ.19ರ ಮಧ್ಯಾಹ್ನ 12ಗಂಟೆಗೆ ಹನುಮಾನ್ ಚಾಲೀಸ ಪಠಣೆ ಮಾಡಲು ಕರೆ ನೀಡಿ ಧಾರ್ಮಿಕ ಘೋಷಣೆಗಳನ್ನು ಕೂಗಿರುತ್ತಾರೆ. ಸುಪ್ರೀಕೋರ್ಟ್ ನ ಆದೇಶ ಮತ್ತು ಚುನಾವಣಾ ಆಯೋಗದ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ ಕೋಮು, ಮತ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೃತ್ಯವೆಸಗುವುದು ಅಪರಾಧ. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆಗೆ ಕರೆ ನೀಡಿರುವ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.