ನೇಕಾರರಿಗೆ 10 ಎಚ್‌ಪಿ ಉಚಿತ, ಘಟಕಗಳಿಗೆ 20 ಎಚ್‌ಪಿ ರಿಯಾಯಿತಿ ದರದ ವಿದ್ಯುತ್

Update: 2023-10-26 04:17 GMT

ಬೆಂಗಳೂರು, ಅ.25: ನೇಕಾರರಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ಹಾಗೂ 20 ಎಚ್‌ಪಿವರೆಗಿನ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಸೌಲಭ್ಯ ನೀಡಲು ಕೈಗೊಂಡಿರುವ ನಿರ್ಣಯದಿಂದಾಗಿ ಸರಕಾರದ ಬೊಕ್ಕಸಕ್ಕೆ 145 ಕೋಟಿ ರೂ. ಹೊರೆ ಬೀಳಲಿದೆ.

ಅಲ್ಲದೇ 20 ಎಚ್‌ಪಿವರೆಗಿನ ಘಟಕಗಳಿಗೆ ವಿದ್ಯುತ್ ಶುಲ್ಕ, ನಿಗದಿತ ಶುಲ್ಕ ಹಾಗೂ ಇಂಧನ ಹೊಂದಾಣಿಕ ಶುಲ್ಕ ಎಲ್ಲವನ್ನೂ ಸಂಪೂರ್ಣವಾಗಿ ಉಚಿತ ಮಾಡಿದಲ್ಲಿ 190ರಿಂದ 200 ಕೋಟಿ ರೂ.ಗಳಷ್ಟು ಸರಕಾರಕ್ಕೆ ಹೊರೆಯಾಗಲಿದೆ ಎಂದು ಅಂದಾಜಿಸಿದೆ.

10 ಎಚ್‌ಪಿವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ಮಾಸಿಕ 250 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಕೈ ಮಗ್ಗ ಮತ್ತು ಜವಳಿ ಇಲಾಖೆಯು ಆರ್ಥಿಕ ಹೊರೆ ಬಗ್ಗೆ ಪ್ರಸ್ತಾಪಿಸಿದೆ. ಸಭೆಯ ನಡವಳಿಗಳು ‘the-file.in’ಗೆ ಲಭ್ಯವಾಗಿವೆ.

ಹಿಂದಿನ ಬಿಜೆಪಿ ಸರಕಾರದ ಕಡೆಯ ದಿನದಲ್ಲಿ (17-02-2023) ಮಂಡಿಸಿದ್ದ ಬಜೆಟ್‌ನಲ್ಲಿ 5 ಎಚ್‌ಪಿವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಘಟಕಗಳಿಗೆ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುವುದು ಎಂದು ನಿಗದಿತ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ, ಮಾದರಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಜಾರಿಗೊಂಡಿರಲಿಲ್ಲ.

2023ರ ಮೇ 29ರಂದು ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ರಚಿಸಿದ ನಂತರ 10 ಎಚ್‌ಪಿವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆಮಾಸಿಕ ಗರಿಷ್ಠ 250 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿತ್ತು.

10 ಎಚ್‌ಪಿವರೆಗಿನ ವಿದ್ಯುತ್ ಸಂಪರ್ಕ ಹೊಂದಿದ ಘಟಕವು 250 ಯೂನಿಟ್‌ಗಳ ವಿದ್ಯುತ್ ಬಳಕೆ ಮಾಡಿದಲ್ಲಿ ವಿದ್ಯುತ್ ಶುಲ್ಕ ಪ್ರತೀ ಯೂನಿಟ್‌ಗೆ 6.10 ರೂ.ನಂತೆ ಒಟ್ಟು 1,525 ರೂ. ನಿಗದಿತ ಶುಲ್ಕ ಬಳಕೆ ಮಾಡಿದಲ್ಲಿ 140 ರೂ.ನಂತೆ ಒಟ್ಟು 1,440 ರೂ., ಇಂಧನ ಹೊಂದಾಣಿಕೆ ಶುಲ್ಕ ಪ್ರತಿ ಯೂನಿಟ್‌ಗೆ 2.55 ರೂ.ನಂತೆ 638 ರೂ. ಹೀಗೆ ಒಟ್ಟು 3,563 ರೂ. ಮತ್ತು ತೆರಿಗೆ 137 ರೂ. ಸೇರಿ ಪ್ರತೀ ತಿಂಗಳೂ 3,700 ರೂ.ಗಳಾಗುತ್ತವೆ.

ಇದರಲ್ಲಿ ನೇಕಾರರು ವಿದ್ಯುತ್ ಶುಲ್ಕ 1.25 ರೂ.ಗಳಂತೆ 250 ಯೂನಿಟ್‌ಗೆ 312 ರೂ., ನಿಗದಿ ಶುಲ್ಕ 1,400 ರೂ. ಇಂಧನ ಹೊಂದಾಣಿಕೆ ಶುಲ್ಕ ಪ್ರತೀ ಯೂನಿಟ್‌ಗೆ 2.55 ರೂ. ನಂತೆ 638 ರೂ. ಹೀಗೆ ಒಟ್ಟು ಶುಲ್ಕ 2,350 ರೂ. ಮತ್ತು ತೆರಿಗೆ ಸೇರಿ ತಿಂಗಳಿಗೆ 2,487 ರೂ.ಗಳನ್ನು ಪ್ರಸ್ತುತ ಪಾವತಿಸುತ್ತಿದ್ದಾರೆ. ಇದರಲ್ಲಿ ಸುಮಾರು 1,200 ರೂ.ಗಳನ್ನು ಸರಕಾರದಿಂದ ಭರಿಸಲಾಗುತ್ತಿದೆ ಎಂಬ ಮಾಹಿತಿಯು ನಡವಳಿಯಿಂದ ಗೊತ್ತಾಗಿದೆ.

ಇದರಲ್ಲಿ ನಿಗದಿತ ಶುಲ್ಕ ಹೆಚ್ಚಾಗಿರುವುದಲ್ಲದೇ ಪ್ರಸ್ತುತ ವಿಧಿಸಲಾಗುತ್ತಿರುವ ಇಂಧನ ಹೊಂದಾಣಿಕೆ ಶುಲ್ಕದಿಂದ ನೇಕಾರರ ಮೇಲೆ ಹೊರೆ ಹೆಚ್ಚಾಗಿದೆ. ಈ ಎರಡನ್ನೂ ಸರಕಾರವು ಭರಿಸಿದಲ್ಲಿ ಹೊರೆಯಾಗಲಿದೆ ಎಂದು ಮಾಹಿತಿ ಒದಗಿಸಿದ್ದರು. ಅಲ್ಲದೇ ಮೂರು ಮಾದರಿಗಳನ್ನು ಪ್ರಸ್ತುತಪಡಿಸಿದ್ದರು.

ಮೊದಲ ಮಾದರಿಗೆ 130 ಕೋಟಿ ರೂ. ಅನುದಾನ ಅವಶ್ಯ

20 ಎಚ್‌ಪಿವರೆಗಿನ ಎಲ್ಲ ಘಟಕಗಳು ಪ್ರತೀ ತಿಂಗಳೂ ಅಂದಾಜು 1.28 ಕೋಟಿ ಯೂನಿಟ್‌ಗಳನ್ನು ಬಳಕೆ ಮಾಡಿದಲ್ಲಿ ಪ್ರಸ್ತುತ ನೀಡುತ್ತಿರುವ 1.25 ರೂ. ವಿದ್ಯುತ್ ಸಹಾಯ ಧನ ಮುಂದುವರಿಸಿದ್ದಲ್ಲಿ ವಿದ್ಯುತ್ ಶುಲ್ಕ ಒಂದು ವರ್ಷಕ್ಕೆ 80.64 ಕೋಟಿ ರೂ.ಗಳಾಗುತ್ತದೆ. ನಿಗದಿತ ಶುಲ್ಕವು 80 ರೂ.ನಿಂದ 140ಕ್ಕೆ ಏರಿಕೆಯಾಗಿದ್ದು, ಪ್ರತೀ ಎಚ್‌ಪಿ ಸಾಮರ್ಥ್ಯಕ್ಕೆ ಹೆಚ್ಚುವರಿಯಾಗಿರುವ 60 ರೂ.ಗಳನ್ನು ಸರಕಾರವೇ ಭರಿಸಬೇಕು ಎಂದಾದಲ್ಲಿ ಒಂದು ವರ್ಷಕ್ಕೆ ಸರಕಾರದ ಬೊಕ್ಕಸಕ್ಕೆ 10 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ವಿವರಿಸಲಾಗಿದೆ.

ಅದೇ ರೀತಿ ಇಂಧನ ಹೊಂದಾಣಿಕೆ ಶುಲ್ಕವು ತಿಂಗಳಿನಿಂದ ತಿಂಗಳಿಗೆ 0.55 ರಿಂದ 2.55 ವರೆಗೆ ವ್ಯತ್ಯಾಸವಾಗುತ್ತಿದ್ದು ಇದನ್ನು ಸರಕಾರ ಭರಿಸಬೇಕು ಎಂದಾದಲ್ಲಿ ಒಂದು ವರ್ಷಕ್ಕೆ ಸರಕಾರದ ಬೊಕ್ಕಸಕ್ಕೆ 40 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಈ ಮಾದರಿ ಅನ್ವಯ 130 ಕೋಟಿ ರೂ. ಅನುದಾನ ಅವಶ್ಯಕತೆ ಇದೆ ಎಂದು ಸಭೆಗೆ ವಿವರಿಸಲಾಗಿತ್ತು ಎಂಬುದು ನಡವಳಿಯಿಂದ ಗೊತ್ತಾಗಿದೆ.


2ನೇ ಮಾದರಿಗೆ 142 ಕೋಟಿ ರೂ. ಅನುದಾನ

ಬಳಕೆ ಮಾಡಿದ ಮೊದಲ 250 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಹಾಗೂ 250 ಯೂನಿಟ್‌ಗಳು ಮೇಲ್ಪಟ್ಟು ಬಳಕೆಯಾದ ಯೂನಿಟ್‌ಗಳವರೆಗೆ ಪ್ರಸ್ತುತ ನೀಡುತ್ತಿರುವ 1.25 ರೂ. ವಿದ್ಯುತ್ ಸಹಾಯಧನದಂತೆ ಮುಂದುವರಿಸಿದರೆ ವಿದ್ಯುತ್ ಶುಲ್ಕ ಒಂದು ವರ್ಷಕ್ಕೆ 92.28 ಕೋಟಿ ರೂ. ಆಗಲಿದೆ. ಈ ಮಾದರಿಯಲ್ಲಿಯೂ ಒಂದು ವರ್ಷಕ್ಕೆ 142 ಕೋಟಿ ರೂ. ಅನುದಾನ ಅವಶ್ಯ ಇದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.


3ನೇ ಮಾದರಿಗೆ 145 ಕೋಟಿ ರೂ. ಅನುದಾನ

10 ಎಚ್‌ಪಿವರೆಗಿನ ಘಟಕಗಳಿಗೆ ಉಚಿತ ವಿದ್ಯುತ್ (ಶೂನ್ಯ ಬಿಲ್) ಹಾಗೂ 10.1ರಿಂದ 20 ಎಚ್‌ಪಿವರೆಗಿನ ಘಟಕಗಳಿಗೆ ಪ್ರಸ್ತುತ ನೀಡುತ್ತಿರುವ 1.25 ರೂ.ನಂತೆ ವಿದ್ಯುತ್ ಸಹಾಯಧನದಂತೆ ಮುಂದುವರಿಸಿದಲ್ಲಿ ವಿದ್ಯುತ್ ಶುಲ್ಕ ಒಂದು ವರ್ಷಕ್ಕೆ 97.65 ಕೋಟಿ ರೂ.ಗಳಷ್ಟಾಗುತ್ತದೆ. ಇದರಲ್ಲಿ ಇಂಧನ ಶುಲ್ಕ 78 ಕೋಟಿ ರೂ., ರಿಯಾಯಿತಿ ದರದಲ್ಲಿ ಭರಿಸಬೇಕಾದ ಇಂಧನ ಶುಲ್ಕ 19.65 ಕೋಟಿ ರೂ. ಸೇರಿದೆ.

10 ಎಚ್‌ಪಿವರೆಗಿನ ಘಟಕಗಳ ನಿಗದಿತ ಶುಲ್ಕ ಪ್ರತಿ ಎಚ್‌ಪಿ ಸಾಮರ್ಥ್ಯಕ್ಕೆ 140 ರೂ.ನಂತೆ ಒಂದು ವರ್ಷಕ್ಕೆ 16.80ಕೋಟಿ ರೂ., ಇಂಧನ ಹೊಂದಾಣಿಕೆ ಶುಲ್ಕ 2.55 ರೂ.ನಂತೆ ಒಂದು ವರ್ಷಕ್ಕೆ 30.60 ಕೋಟಿ ರೂ. ಸರಕಾರವು ಭರಿಸಬೇಕು. ಈ ಮಾದರಿ ಜಾರಿಗೆ ತಂದಲ್ಲಿ ಸರಕಾರದ ಬೊಕ್ಕಸಕ್ಕೆ 145 ಕೋಟಿ ರೂ. ಹೊರೆಯಾಗುತ್ತದೆ ಎಂದು ಅಂಕಿ ಅಂಶಗಳನ್ನು ಮುಂದಿಟ್ಟಿದ್ದರು ಎಂಬುದು ಗೊತ್ತಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಜಿ.ಮಹಾಂತೇಶ್

contributor

Similar News