18,952.77 ಕೋಟಿ ರೂ.ರಾಜಸ್ವ ಕೊರತೆ; ಮೊದಲ ತ್ರೈಮಾಸಿಕದಲ್ಲಿ 1,19,788.49 ಕೋಟಿ ರೂ. ಜಮೆ

Update: 2023-09-25 03:29 GMT

Photo: Freepik

ಬೆಂಗಳೂರು, ಸೆ.24: ಅಬಕಾರಿ, ಸ್ವಂತ ತೆರಿಗೆ, ತೆರಿಗೆಯೇತರ, ಮೋಟಾರು ವಾಹನ, ವಾಣಿಜ್ಯ, ಮುದ್ರಾಂಕ, ನೋಂದಣಿ, ಕೇಂದ್ರ ಸರಕಾರದ ತೆರಿಗೆ ಹಂಚಿಕೆ ಹಾಗೂ ಕೇಂದ್ರ ಸರಕಾರದ ಸಹಾಯನುದಾನ ಸೇರಿದಂತೆ 2023-24ನೇ ಸಾಲಿನಲ್ಲಿ ಜಮೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ್ದ 4,11,712.41 ಕೋಟಿ ರೂ. ಪೈಕಿ ಮೊದಲ ತ್ರೈಮಾಸಿಕ (ಎಪ್ರಿಲ್-ಜೂನ್)ದಲ್ಲಿ ಒಟ್ಟಾರೆ 1,19,788.49 ಕೋಟಿ ರೂ. ಜಮೆಯಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 7,270.69 ಕೋಟಿ ರೂ. ವ್ಯತ್ಯಾಸವಿರುವುದು ಕಂಡು ಬಂದಿದೆ. ಅದೇ ರೀತಿ 2023-24ನೇ ಸಾಲಿನ ಎಪ್ರಿಲ್‌ನಿಂದ ಜುಲೈವರೆಗೆ 18,952.77 ಕೋಟಿ ರೂ. ರಾಜಸ್ವ ಕೊರತೆ ಅನುಭವಿಸುತ್ತಿದೆ.

2022-23ನೇ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ 13,131.93 ಕೋಟಿ ರೂ. ರಾಜಸ್ವ ಕೊರತೆ ಎದುರಿಸಿತ್ತು. ಇದನ್ನು ಹೋಲಿಸಿದರೆ ಪ್ರಸಕ್ತ ಆರ್ಥಿಕ ಸಾಲಿನ ಎಪ್ರಿಲ್‌ನಿಂದ ಜುಲೈವರೆಗೆ 5,820.84 ಕೋಟಿ ರೂ.ನಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ. ಆರ್ಥಿಕ ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಈ ವಿವರಗಳನ್ನು ಪ್ರಕಟಿಸಿದೆ. ಅಬಕಾರಿ ಆದಾಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ 36,000 ಕೋಟಿ ರೂ.ರಾಜಸ್ವ ಸಂಗ್ರಹಣೆಗೆ ಗುರಿ ನಿಗದಿಪಡಿಸಲಾಗಿದೆ.

ಈ ಪೈಕಿ 2023ರ ಎಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 11,443.07 ಕೋಟಿ ರೂ. ಸಂಗ್ರಹಿಸಲಾಗಿದೆ. ಇದು ಒಟ್ಟು ಗುರಿಯಲ್ಲಿ ಶೇ. 31.24ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.16.41ರಷ್ಟಿದೆ. 2022-23ನೇ ಸಾಲಿನಲ್ಲಿ 29,000 ಕೋಟಿ ರೂ. ಸಂಗ್ರಹಿಸಲು ಗುರಿ ನಿಗದಿಪಡಿಸಲಾಗಿತ್ತು. ಇದೇ ಎಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 10,068.37 ಕೋಟಿ ರೂ. ಸಂಗ್ರಹಿಸಿತ್ತು. ಇದು ಒಟ್ಟಾರೆ ಗುರಿಗೆ ಶೇ.34.72ರಷ್ಟಿತ್ತು. ಎರಡೂ ಸಾಲಿನಲ್ಲಿ ಶೇಕಡವಾರು ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಶೇ.3ರಷ್ಟು ವ್ಯತ್ಯಾಸವಿದೆ.

ರಾಜಸ್ವ ಸ್ವೀಕೃತಿಯಲ್ಲಿ ಸ್ವಂತ ತೆರಿಗೆ, ಸ್ವಂತ ತೆರಿಗೆಯೇತರ, ವಿವಿಧ ಬಂಡವಾಳ ಜಮೆ, ಋಣೇತರ ಬಂಡವಾಳ, ವಿವಿಧ ಬಂಡವಾಳ ಜಮೆ, ಸಾರ್ವಜನಿಕ ಸಾಲವೂ ಸೇರಿದಂತೆ ಒಟ್ಟಾರೆ 2023-24ನೇ ಸಾಲಿನ ಎಪ್ರಿಲ್‌ನಿಂದ ಜುಲೈವರೆಗೆ 68,756.15 ಕೋಟಿ ರೂ. (ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮುದ್ರಾಂಕ, ಇತರ ಹೊರತುಪಡಿಸಿ) ಜಮೆಯಾಗಿದೆ. ಇದೇ ವಿಭಾಗದಲ್ಲಿ 2022-23ನೇ ಸಾಲಿನ ಎಪ್ರಿಲ್‌ನಿಂದ ಜುಲೈವರೆಗೆ ಒಟ್ಟಾರೆ 68,619.43 ಕೋಟಿ ರೂ. ಜಮೆಯಾಗಿತ್ತು.

ಇನ್ನು ಸ್ವಂತ ತೆರಿಗೆ ರಾಜಸ್ವ 2023-24ನೇ ಸಾಲಿನಲ್ಲಿ 1,73,302.60 ಕೋಟಿ ರೂ. ನಿಗದಿಪಡಿಸಲಾಗಿದೆ. ಎಪ್ರಿಲ್‌ನಿಂದ ಜುಲೈವರೆಗೆ 51,712.92 ಕೋಟಿ ರೂ.ಸಂಗ್ರಹವಾಗಿದೆ. ಇದು ಒಟ್ಟಾರೆ ಶೇ.29.84ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15.06ರಷ್ಟು ಬೆಳವಣಿಗೆ ಯಾಗಿದೆ.

ಸ್ವಂತ ರಾಜಸ್ವ ತೆರಿಗೆ ಸಂಗ್ರಹವು 2022-23ನೇ ಸಾಲಿನಲ್ಲಿ 1,26,882.76 ಕೋಟಿ ರೂ.ಸಂಗ್ರಹಿಸಲು ನಿಗದಿಗೊಳಿಸಿತ್ತು. ಎಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 44,945.57 ಕೋಟಿ ರೂ. ಸಂಗ್ರಹವಾಗಿತ್ತು. ಇದು ಶೇ.35.42ರಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.5.58ರಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ. ವಾಣಿಜ್ಯ ತೆರಿಗೆಯಲ್ಲಿ 2023-24ನೇ ಸಾಲಿಗೆ 98,650.00 ಕೋಟಿ ರೂ. ನಿಗದಿಪಡಿಸಲಾಗಿದೆ.

ಎಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 30,820.03 ಕೋಟಿ ರೂ. ಸಂಗ್ರಹವಾಗಿದೆ. ಇದು ಶೇ.31.24ರಷ್ಟಿದೆ. 2022-23ನೇ ಸಾಲಿನಲ್ಲಿ 72,010.00 ಕೋಟಿ ರೂ. ನಿಗದಿಗೊಳಿಸಲಾಗಿತ್ತು. ಎಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 26,476.34 ಕೋಟಿ ರೂ. ಸಂಗ್ರಹವಾಗಿತ್ತು. ಇದು ಶೇ.36.77ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5.53ರಷ್ಟು ವ್ಯತ್ಯಾಸವಿದೆ.

ಇತರ ವಿಭಾಗದಲ್ಲಿ 2,152.60 ಕೋಟಿ ರೂ. ನಿಗದಿಪಡಿಸಿದ್ದು ಎಪ್ರಿಲ್‌ನಿಂದ ಜುಲೈವರೆಗೆ 700.88 ಕೋಟಿ ರೂ. ಸಂಗ್ರಹವಾಗಿದೆ. ಶೇ. 35.56ರಷ್ಟಿದೆ. 2022-23ನೇ ಸಾಲಿನಲ್ಲಿ 2,866.07 ಕೋಟಿ ರೂ. ನಿಗದಿಪಡಿಸಿದ್ದು ಎಪ್ರಿಲ್‌ನಿಂದ ಜುಲೈವರೆಗೆ 246.05 ಕೋಟಿ ರೂ.ಸಂಗ್ರಹವಾಗಿತ್ತು. ಶೇ.8.58ರಷ್ಟು ಪ್ರಗತಿ ಹೊಂದಿತ್ತು.

ಸ್ವಂತ ತೆರಿಗೆಯೇತರ ರಾಜಸ್ವವು 2023-24ನೇ ಸಾಲಿನಲ್ಲಿ 12,500 ಕೋಟಿ ರೂ.ಗೆ ನಿಗದಿಪಡಿಸಿದ್ದು ಎಪ್ರಿಲ್‌ನಿಂದ ಜುಲೈವರೆಗೆ 3,514.86 ಕೋಟಿ ರೂ. ಸಂಗ್ರಹವಾಗಿದೆ. ಇದು ಶೇ.28.12ರಷ್ಟಿದೆ. 2022-23ನೇ ಸಾಲಿನಲ್ಲಿ 10,940.57 ಕೋಟಿ ರೂ. ನಿಗದಿಪಡಿಸಿದ್ದು ಈ ಪೈಕಿ 4,238.96 ಕೋಟಿ ರೂ. ಸಂಗ್ರಹವಾಗಿತ್ತು. ಶೇ. 38.75ರಷ್ಟಿತ್ತು. ಕಳೆದ ವರ್ಷದ ಇದೇ ಹೊತ್ತಿಗೆ ಹೋಲಿಸಿದರೆ ಶೇ.10.63ರಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ.

ಕೇಂದ್ರ ಸರಕಾರದ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ 37,252.21 ಕೋಟಿ ರೂ. ನಿಗದಿಪಡಿಸಿದ್ದು ಈ ಪೈಕಿ ಎಪ್ರಿಲ್‌ನಿಂದ ಜುಲೈವರೆಗೆ 11,288.22 ಕೋಟಿ ರೂ. ಜಮೆಯಾಗಿದೆ. ಇದು ಶೇ.30.30ರಷ್ಟಿದೆ. 2022-23ನೇ ಸಾಲಿನಲ್ಲಿ 29,783.21 ಕೋಟಿ ರೂ. ಜಮೆಯಾಗಬೇಕಿದ್ದ ಪೈಕಿ ಎಪ್ರಿಲ್‌ನಿಂದ ಜುಲೈವರೆಗೆ 7,334.45 ಕೋಟಿ ರೂ. ಹಂಚಿಕೆಯಾಗಿತ್ತು.

ಕೇಂದ್ರ ಸರಕಾರದ ಸಹಾಯ ಅನುದಾನವು 2023-24ನೇ ಸಾಲಿನಲ್ಲಿ 15,355 ಕೋಟಿ ರೂ. ನಿಗದಿಪಡಿಸಿದ್ದು ಈ ಪೈಕಿ ಎಪ್ರಿಲ್‌ನಿಂದ ಜುಲೈವರೆಗೆ 1,559.56 ಕೋಟಿ ರೂ. ಜಮೆಯಾಗಿದೆ. ಶೆ.10.16ರಷ್ಟಿದೆ. 2022-23ನೇ ಸಾಲಿನಲ್ಲಿ 22,281.01 ಕೋಟಿ ರೂ. ನಿರೀಕ್ಷಿಸಿದ್ದು ಆ ಪೈಕಿ 11,053.24 ಕೋಟಿ ರೂ. ಜಮೆಯಾಗಿತ್ತು. ಇದು ಶೇ.49.61ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.39.45ರಷ್ಟು ವ್ಯತ್ಯಾಸವಿರುವುದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಜಿ.ಮಹಾಂತೇಶ್

contributor

Similar News