ವಿದ್ಯುತ್ ಸರಬರಾಜು ಕಂಪೆನಿಗಳಿಂದ 6,242.53 ಕೋಟಿ ರೂ. ಸಹಾಯಧನಕ್ಕಾಗಿ ಪ್ರಸ್ತಾವ

Update: 2024-01-09 02:42 GMT

Photo: freepik

ಬೆಂಗಳೂರು, ಜ.8: ಮುಂಗಾರು ಮಳೆ ಕೊರತೆ ಯಿಂದಾಗಿ ವಿದ್ಯುತ್ ಬಳಕೆಯ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಧಿಕ ಸಹಾಯಧನಕ್ಕಾಗಿ ಸರಕಾರದ ಮೆಟ್ಟಿಲು ಹತ್ತಿರುವ ವಿದ್ಯುತ್ ಸರಬರಾಜು ಕಂಪೆನಿಗಳೀಗ ಇದರ ಬೇಡಿಕೆಗೆ ಅನುಗುಣವಾಗಿ 6,242.53 ಕೋಟಿ ರೂ. ಅಧಿಕ ಸಹಾಯ ಧನ ಬಿಡುಗಡೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ. ಇದನ್ನು ಪರಿಶೀಲಿಸಿರುವ ಹಣಕಾಸು ಇಲಾಖೆಯು ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ವಿದ್ಯುತ್ ಸಹಾಯಧನ ಸೀಮಿತಗೊಳಿಸಬೇಕು ಎಂದು ನಿಲುವು ತಳೆದಿರುವುದು ಇದೀಗ ಬಹಿರಂಗವಾಗಿದೆ.

ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು 10 ಎಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಉಚಿತ ವಿದ್ಯುತ್ ಸರಬರಾಜು ಸಂಬಂಧಿಸಿದಂತೆ ವಿದ್ಯುತ್ ಸರಬರಾಜು ಕಂಪೆನಿಗಳು ಸಲ್ಲಿಸಿರುವ ಅಧಿಕ ಸಹಾಯಧನ ಬಿಡುಗಡೆಯ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಇದೀಗ ತಲೆ ಮೇಲೆ ಕೈ ಹೊತ್ತು ಕುಳಿತಿದೆ.

ಬೊಕ್ಕಸಕ್ಕೆ ಹೊರೆಯಾದರೂ ಗೃಹ ಜ್ಯೋತಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ವಿಧಾನಸಭೆ ಅಧಿವೇಶನದಲ್ಲಿ ಲಿಖಿತ ಉತ್ತರ ನೀಡಿರುವ ಬೆನ್ನಲ್ಲೇ ಇದೀಗ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, 10 ಎಚ್‌ಪಿ ವರೆಗಿನ ಉಚಿತ ವಿದ್ಯುತ್ ಸರಬರಾಜು ಯೋಜನೆಗೆ 6,242.53 ಕೋಟಿ ರೂ. ಅಧಿಕ ಸಹಾಯಧನಕ್ಕಾಗಿ ಸಲ್ಲಿಸಿರುವ ಪ್ರಸ್ತಾವನೆಯು ಮುನ್ನೆಲೆಗೆ ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ‘The-file.in’ಗೆ ಕೆಲ(DB/423/C\P1/2023) ದಾಖಲೆಗಳು ಲಭ್ಯವಾಗಿವೆ. ‘ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ವಿದ್ಯುತ್ ಸಹಾಯಧನವನ್ನು ಸೀಮಿತಗೊಳಿಸಬೇಕು ಎನ್ನುವುದು ಆರ್ಥಿಕ ಇಲಾಖೆಯ ನಿಲುವಾಗಿದ್ದು ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಸರಬರಾಜು ಮಾಡಿ ಈಗ ಇದಕ್ಕಾಗಿ ಹೆಚ್ಚಿನ ಅನುದಾನವನ್ನು ಕೋರಲಾಗುತ್ತಿದೆ,’ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

2023-24ನೇ ಸಾಲಿನ ಆಯವ್ಯಯದಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, 10 ಎಚ್‌ಪಿ ವರೆಗಿನ ನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳ ಉಚಿತ ವಿದ್ಯುತ್ ಸರಬರಾಜಿಗಾಗಿ 13,143 ಕೋಟಿ ರೂ.ಗಳ ಸಹಾಯಧನವನ್ನು ಒದಗಿಸಿದೆ. ಇದೇ ಆರ್ಥಿಕ ಸಾಲಿನ 2023ರ ಎಪ್ರಿಲ್‌ನಿಂದ ನವೆಂಬರ್ ಮಾಹೆಯಲ್ಲಿ ಈ ಯೋಜನೆಗಳಡಿ ಉಚಿತ ವಿದ್ಯುತ್ ಸರಬರಾಜುಗಾಗಿ 14,803.53 ಕೋಟಿ ರೂ. ವಾಸ್ತವಿಕ ವಿದ್ಯುತ್ ಬೇಡಿಕೆ ಇದೆ ಎಂಬುದು ತಿಳಿದು ಬಂದಿದೆ.

2023ರ ಎಪ್ರಿಲ್‌ನಿಂದ 2023ರ ನವೆಂಬರ್‌ವರೆಗೆ ಮುಂಗಾರು ಮಳೆ ಕೊರತೆ ಪರಿಣಾಮ ಹೆಚ್ಚುವರಿ ವಿದ್ಯುತ್ ಬಳಕೆಯಿಂದಾಗಿ ಬೇಡಿಕೆಯು ಹೆಚ್ಚಾಗಿದೆ. ಹೀಗಾಗಿ ಒಟ್ಟಾರೆ 14,803.53 ಕೋಟಿ ರೂ. ವಾಸ್ತವಿಕ ಬೇಡಿಕೆ ಇರಿಸಿತ್ತು. ಇದೇ ಅವಧಿಯಲ್ಲಿ 8,561.00 ಕೋಟಿ ರೂ. (2,000 ಕೋಟಿ ಮುಂಗಡ ಸಹಾಯಧನ ಹೊರತುಪಡಿಸಿ), ಸಹಾಯಧನ, ಇದಲ್ಲದೇ ಹೆಚ್ಚುವರಿ ವಿದ್ಯುತ್ ಬಳಕೆಯಿಂದ ಹೆಚ್ಚಾಗಿರುವ ಬೇಡಿಕೆಗೆ ಅನುಗುಣವಾಗಿ 6,242 ಕೋಟಿ ರೂ. ಕೋರಿದೆ. ಅಲ್ಲದೆ ಡಿಸೆಂಬರ್ ತಿಂಗಳಿನಿಂದ 2024 ಮಾರ್ಚ್‌ವರೆಗೂ ವಾಸ್ತವಿಕ ಬೇಡಿಕೆ ಹೆಚ್ಚಳವಾಗುವ ಸಂಭವವಿರುವುದು ಗೊತ್ತಾಗಿದೆ.

ಹೀಗಾಗಿ 2,582 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಇಂಧನ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು’ ಅಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ವಿದ್ಯುತ್ ಸಹಾಯಧನವನ್ನು ಸೀಮಿತಗೊಳಿಸಬೇಕು ಎನ್ನುವುದು ಆರ್ಥಿಕ ಇಲಾಖೆಯ ನಿಲುವಾಗಿದ್ದು ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಸರಬರಾಜು ಮಾಡಿ ಈಗ ಇದಕ್ಕಾಗಿ ಹೆಚ್ಚಿನ ಅನುದಾನವನ್ನು ಕೋರುತ್ತಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದೆ. ಈ ಪ್ರಸ್ತಾವನೆಯ ಕುರಿತು ಆದೇಶಕ್ಕಾಗಿ ಕಡತವನ್ನು ಮಂಡಿಸಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ. ಮಹಾಂತೇಶ್

contributor

Similar News