81.5 ಕೋಟಿ ಭಾರತೀಯರ ಆಧಾರ್ ಕಾರ್ಡ್ ನ ವೈಯಕ್ತಿಕ ಮಾಹಿತಿಗಳು ಸೋರಿಕೆ

Update: 2023-11-07 08:41 GMT
Editor : Thouheed | Byline : ಆರ್. ಜೀವಿ

Photo: PTI

ಕೋಟಿಗಟ್ಟಲೆ ಭಾರತೀಯರ ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಾಗಿದೆಯೇ ?. ಕೋಟಿ ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಗಳನ್ನು ಬೇಕಾಬಿಟ್ಟಿ ಬಿಕರಿಗೆ ಇಡಲಾಗಿದೆಯೇ ?. ಹೆಸರು, ವಿಳಾಸ, ಪಾಸ್ ಪೋರ್ಟ್ ವಿವರ , ಫೋನ್ ನಂಬರ್ ಎಲ್ಲವೂ ಯಾರ್ಯಾರ ಕೈ ಸೇರಿವೆಯೇ ?.

ಅತ್ಯಂತ ಸುರಕ್ಷಿತ ಎಂದು ಸರಕಾರ ಹೇಳುವ ಯಾವುದೂ ಸುರಕ್ಷಿತವಾಗಿ ಉಳಿದೇ ಇಲ್ಲವೇ ?. ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಬಹಳ ಹಿಂದಿನಿಂದಲೂ ಮೂಡಿದ್ದ ಅನುಮಾನವನ್ನೇ ಖಾತ್ರಿಪಡಿಸುವಂಥ ಆಘಾತಕಾರಿ ವಿಚಾರವೊಂದು ಬಯಲಾಗಿದೆ.

81.5 ಕೋಟಿ ಭಾರತೀಯರ ಆಧಾರ್ ಕಾರ್ಡ್ನಲ್ಲಿನ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂದು ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ, ರಿಸೆಕ್ಯುರಿಟಿ ವರದಿ ಮಾಡಿದೆ. ಈ ಮಾಹಿತಿಗಳನ್ನೆಲ್ಲ ಡಾರ್ಕ್ ವೆಬ್ನಲ್ಲಿ ಮಾರಾಟಕ್ಕಿಟ್ಟಿರುವುದಾಗಿ ವರದಿ ಹೇಳುತ್ತಿದೆ.

ವರದಿಯ ಪ್ರಕಾರ​ ಭಾರತೀಯರ ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳೊಂದಿಗೆ ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿಯಂತಹ ವಿವರಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕಿವೆ. ಇದು ಬಹಳ ಗಂಭೀರ ಡೇಟಾ ಸೋರಿಕೆಯಾಗಿದ್ದು, ಆಧಾರ್ ಸುರಕ್ಷತೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಈ ಮಾಹಿತಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (​ಐಸಿಎಂಆರ್) ಕಳವು ಮಾಡ​ಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.​ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡ ಕೋಟ್ಯಂತರ ಭಾರತೀಯರ ಮಾಹಿತಿಗಳು ಐಸಿಎಂಆರ್​ ಬಳಿ ಇವೆ.

ಐಸಿಎಂಆರ್​ ಮೇಲೆ ಈ ರೀತಿಯ ಸೈಬರ್ ದಾಳಿ ಆಗುತ್ತಿರೋದು ಇದೇ ಮೊದಲಲ್ಲ. ಐಸಿಎಂಆರ್​ ದೂರು ದಾಖಲಿಸಿದ್ದು, ಸಿಬಿಐ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ವರದಿಗಳಿವೆ. ರಿಸೆಕ್ಯುರಿಟಿ ವೆಬ್‌ಸೈಟ್ ಪ್ರಕಾರ, ಅಕ್ಟೋಬರ್ 9ರಂದು “pwn0001” ಹೆಸರನ್ನು ಬಳಸುವ ವ್ಯಕ್ತಿಯೊಬ್ಬ ಆಧಾರ್ ಮತ್ತು ಪಾಸ್‌ಪೋರ್ಟ್ ವಿವರಗಳು, ಹೆಸರುಗಳು, ಫೋನ್ ಸಂಖ್ಯೆಗಳು ಮಾತ್ರವಲ್ಲದೆ, ತಾತ್ಕಾಲಿಕ ಮತ್ತು ಶಾಶ್ವತ ವಿಳಾಸಗಳನ್ನು ಒಳಗೊಂಡ 81.5 ಕೋಟಿ ಭಾರತೀಯರ ಮಾಹಿತಿಗಳ ಕುರಿತು ಸೂಚಿಸುವ ಪೋಸ್ಟ್ ಅನ್ನು​ ​ಬ್ರೀಚ್‌​ ಫೋರಮ್ಸ್​ ನಲ್ಲಿ ಹಂಚಿಕೊಂಡಿದ್ದಾನೆ.​ ಬ್ರೀಚ್‌​ ಫೋರಮ್ಸ್​ ಒಂದು ರೀತಿಯ ಡಾರ್ಕ್ ನೆಟ್ ಕ್ರೈಮ್ ಫೋರಂ.

ಆ ಹ್ಯಾಕರ್ ಸಂಪೂರ್ಣ ಆಧಾರ್ ಮತ್ತು ಭಾರತೀಯ ಪಾಸ್‌ಪೋರ್ಟ್ ಮಾಹಿತಿಯನ್ನು 80,000 ಡಾಲರ್ಗೆ ಮಾರಾಟ ಮಾಡಲು ಮುಂದಾಗಿದ್ದ ವಿಚಾರವನ್ನೂ ರಿಸೆಕ್ಯುರಿಟಿ ವರದಿ ಹೇಳಿದೆ. ಈ ವರ್ಷದ ಆಗಸ್ಟ್ನಲ್ಲಿ ಲೂಸಿಯಸ್ ಎಂಬ ​ಹೆಸರಿನ ಮತ್ತೊಬ್ಬ ವ್ಯಕ್ತಿ ಕೂಡ ಭಾರತೀಯರಿಗೆ ಸಂಬಂಧಿಸಿ ದೊಡ್ಡ ಪ್ರಮಾಣದಲ್ಲಿ ಡೇಟಾ ಕಳವು ಮಾಡಿರುವುದಾಗಿ ತಿಳಿಸಿದ್ದ. ಸುಮಾರು 1.8 ಟೆರಾಬೈಟ್ಸ್ ಡೇಟಾ ತನ್ನ ಬಳಿ ಇರುವುದಾಗಿ ಹೇಳಿದ್ದ ಆತ, ಅದು ಭಾರತೀಯ ಆಂತರಿಕ ಕಾನೂನು ಜಾರಿ ಸಂಸ್ಥೆ​ಯೊಂದಕ್ಕೆ ಸಂಬಂಧಿಸಿದ್ದಾಗಿದ್ದು, ಮಾರಾಟ ಮಾಡುವುದಾಗಿ ಬೆದರಿಕೆ ಒಡ್ಡಿದ್ದ.

​ಜೂನ್ 2023 ರಲ್ಲಿ ಕೋವಿಡ್ ಲಸಿಕೆಗಾಗಿ ನೀಡಿರುವ ಭಾರತೀಯರ ಮಾಹಿತಿ ಕೋವಿನ್ ವೆಬ್ ಸೈಟ್ ನಿಂದ ಸೋರಿಕೆಯಾಗಿದೆ ಎಂಬ ಮಾಹಿತಿ ಬಂದಿತ್ತು. ಹ್ಯಾಕರ್ ಒಬ್ಬ ಕೋವಿನ್ ವೆಬ್ ಸೈಟ್ ನಿಂದ 80 ಕೋಟಿಗೂ ಹೆಚ್ಚು ಜನರ ಹೆಸರು, ಫೋನ್ ನಂಬರ್ ಗಳು, ಆಧಾರ್ ನಂಬರ್ ಗಳು ಸೋರಿಕೆಯಾಗಿದ್ದು ನನ್ನ ಬಳಿ ಇವೆ ಎಂದು ಹೇಳಿದ್ದ. ಕೋವಿನ್ ವೆಬ್ ಸೈಟ್ ನಿಂದ ಅತಿ ಗಣ್ಯರ ಮಾಹಿತಿಯನ್ನು ಕದ್ದು ಟೆಲಿಗ್ರಾಮ್ ಚಾನಲ್ ನಲ್ಲಿ ಸೋರಿಕೆ ಮಾಡಿದ ಸುದ್ದಿಯೂ ಬಂದಿತ್ತು. ಆಗ ತನಿಖೆಗೆ ಆದೇಶಿಸಲಾಗಿತ್ತು. ಆ ತನಿಖೆ ಎಲ್ಲಿಗೆ ತಲುಪಿತು ಎಂಬ ಮಾಹಿತಿ ಇಲ್ಲ.

ಅದಕ್ಕೂ ಮೊದಲು ಏಪ್ರಿಲ್ ನಲ್ಲಿ ಹ್ಯಾಕ್ಟಿವಿಸ್ಟ್ ಇಂಡೋನೇಷಿಯಾ ಎಂಬ ಹ್ಯಾಕರ್ ಗಳ ಗುಂಪು 12,000 ವೆಬ್ ಸೈಟ್ ಗಳ ಪಟ್ಟಿ ಬಿಡುಗಡೆ ಮಾಡಿ ಅವುಗಳನ್ನು ನಾವು ಟಾರ್ಗೆಟ್ ಮಾಡಿದ್ದೇವೆ ಎಂದು ಹೇಳಿತ್ತು. ಬಹಳ ಬೇಗ ಭಾರತ ಸರಕಾರದ ವೆಬ್ ಸೈಟ್ ಗಳನ್ನೂ ಹ್ಯಾಕ್ ಮಾಡುತ್ತೇವೆ ಎಂದು ಆ ಗುಂಪು ಹೇಳಿತ್ತು. ಅದೇ ಗುಂಪು ಸ್ವೀಡನ್, ಇಸ್ರೇಲ್ ಹಾಗು ಅಮೆರಿಕದಲ್ಲೂ ಇಂತಹ ಕೃತ್ಯ ಎಸಗಿತ್ತು ಎಂದು ಆಗ ಗೃಹ ಸಚಿವಾಲಯ ಹೇಳಿತ್ತು.

ಏಪ್ರಿಲ್ 2022ರಲ್ಲಿ ಬಿಡುಗಡೆಯಾಗಿದ್ದ ಸಿಎಜಿ ವರದಿ ಕೂಡ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ​ಅಂದ್ರೆ UIDAI ವಿಚಾರವಾಗಿ ತನ್ನ ವರದಿಯಲ್ಲಿ ಹಲವು ದೋಷಗಳನ್ನು ಪಟ್ಟಿ ಮಾಡಿತ್ತು. ಪ್ರಾಧಿಕಾರವು ಡೇಟಾ ಸುರಕ್ಷತೆಯನ್ನು ಕಾಪಾಡುವ ವಿಚಾರದಲ್ಲಿ ಕಾಳಜಿ ವಹಿಸಿಲ್ಲ ಎಂಬ ವಿಚಾರವನ್ನು ಸಿಎಜಿ ವರದಿ ಬಹಿರಂಗಪಡಿಸಿತ್ತು. 2009ರಲ್ಲಿ ಪ್ರಾರಂಭವಾದಾಗಿನಿಂದಲೂ UIDAI ಸುಮಾರು 140 ಕೋಟಿ ಆಧಾರ್ ಕಾರ್ಡ್‌ಗಳನ್ನು ನೀಡಿದೆ.

ಆದರೆ ಈಗ ಕೋಟಿಗಟ್ಟಲೆ ಜನರ ವೈಯಕ್ತಿಕ ಮಾಹಿತಿಗಳು ಕಳವಾಗುತ್ತಿರುವ, ಮಾರಾಟಕ್ಕಿರುವ ವರದಿಗಳು ಬರುತ್ತಿರುವುದು ​ತೀವ್ರ ಆತಂಕ​ಕ್ಕೆ ಎಡೆ ಮಾಡಿಕೊಟ್ಟಿದೆ. ಭಾರತೀಯರ ಆಧಾರ್ ಮತ್ತಿತರ ವೈಯಕ್ತಿಕ ವಿವರಗಳು ಈಗ ಡಾರ್ಕ್ ವೆಬ್‌ನಲ್ಲಿ ಬಯಲಾಗಿರುವುದು ಡಿಜಿಟಲ್ ಗುರುತು ಕಳವಿನ ಗಮನಾರ್ಹ ಅಪಾಯಕ್ಕೆ ಒಂದು ಉದಾಹರಣೆಯಾಗಿದೆ.

ಈ ಮಾಹಿತಿಗಳನ್ನು ದುಷ್ಟರ್ಮಿಗಳು ಆನ್‌ಲೈನ್ ಬ್ಯಾಂಕಿಂಗ್ ವಂಚನೆ, ತೆರಿಗೆ ಮರುಪಾವತಿ ಹಗರಣಗಳು ಮತ್ತು ವಿವಿಧ ಸೈಬರ್ ಹಣಕಾಸು ಅಪರಾಧಗಳಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುತ್ತಾರೆ ಎಂಬುದು ಇನ್ನೂ ಆತಂಕಕ್ಕೆ ಎಡೆ ಮಾಡುವ ಸತ್ಯವಾಗಿದೆ.

ಜಾಗತಿಕ ರೇಟಿಂಗ್ ಸಂಸ್ಥೆ ​ಮೂಡೀಸ್ ಕೂಡ ತನ್ನ ವರದಿಯಲ್ಲಿ ಆಧಾರ್ ಕಾರ್ಡ್ ಖಾಸಗಿತನ ಮತ್ತು ಭದ್ರತೆಗೆ ಅಪಾಯ ತರುತ್ತದೆ ಎಂದು ಹೇಳಿತ್ತು. ಬಯೋಮೆಟ್ರಿಕ್ ವಿಶ್ವಾಸಾರ್ಹತೆಯ ಬಗ್ಗೆಯೂ ಅದು ಕಳವಳ ವ್ಯಕ್ತಪಡಿಸಿತ್ತು. ತಾಂತ್ರಿಕ ಸಂಕೀರ್ಣತೆ, ಸೈಬರ್ ಅಪಾಯಗಳು ಸೇರಿದಂತೆ ಹಲವು ಸವಾಲುಗಳು ಇರುವುದಾಗಿ ಅದು ಹೇಳಿತ್ತು. ಆದರೆ, ಮೂಡೀಸ್ ಆರೋಪವನ್ನು ತಳ್ಳಿಹಾಕಿದ್ದ ಭಾರತ ಸರ್ಕಾರ, ಅದನ್ನು ಆಧಾರ ರಹಿತ ಎಂದಿತ್ತು.

​ಮೂಡೀಸ್ ವರದಿ ಹಲವಾರು ಆಧಾರ್ ಬಳಕೆದಾರರನ್ನು ತಪ್ಪಾಗಿ ಉಲ್ಲೇಖಿಸಿದೆ ಎಂದು ಆರೋಪಿಸಿದ್ದ ಐಟಿ ಸಚಿವಾಲಯ, ಮೂಡೀಸ್ ತನ್ನ ಅಭಿಪ್ರಾಯ ದೃಢಪಡಿಸುವ ಯಾವುದೇ ದತ್ತಾಂಶ ಅಥವಾ ಸಂಶೋಧನೆಯನ್ನು ಉಲ್ಲೇಖಿಸಿಲ್ಲ ಎಂದಿತ್ತು. ಆದರೆ, ಈಗ ಮತ್ತೊಮ್ಮೆ ಆಧಾರ್ ವಿಚಾರವಾಗಿ ಕಹಿ ​ಸತ್ಯ ಬಯಲಾಗಿದೆ.

​ಕೇಂದ್ರ ಸರಕಾರ ಬುಧವಾರ ಬೆಳಗ್ಗಿನವರೆಗೂ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ವಿಪಕ್ಷಗಳು ಹಾಗು ಸೈಬರ್ ಪರಿಣಿತರು ಏನಾಗಿದೆ ಎಂಬ ಬಗ್ಗೆ ಸಂಪೂರ್ಣ ವಿವರ ಬಯಲಾಗಬೇಕು ಎಂದು ಆಗ್ರಹಿಸಿದ್ದಾರೆ. ಮೊದಲೇ ಏಕೆ ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿಲ್ಲ ಎಂದು ಕೇಳಿದ್ದಾರೆ. ಕೋಟಿಗಟ್ಟಲೆ ಜನರ ಮಾಹಿತಿ ಸಂಗ್ರಹಿಸುವ ಸರಕಾರ ಅದನ್ನು ಸುರಕ್ಷಿತವಾಗಿಡುವ ಅತ್ಯುನ್ನತ ವಿಧಾನವನ್ನು ಅನುಸರಿಸಬೇಕು. ಆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಇಲ್ಲದಿದ್ದರೆ ಭಾರೀ ಅಪಾಯ ಹಾಗು ಬಿಲಿಯನ್ ಗಟ್ಟಲೆ ನಷ್ಟ ಆಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಸೈಬರ್ ಸುರಕ್ಷತಾ ತಜ್ಞರು. ನಿಜವಾಗಿಯೂ ಭಾರತೀಯರ ವೈಯಕ್ತಿಕ ಮಾಹಿತಿಗಳು ಅಪಾಯದಲ್ಲಿವೆಯೆ ಎಂಬ ಆತಂಕಕ್ಕೆ ಯಾರು ಉತ್ತರಿಸಬೇಕು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News