ರಾಜ್ಯದ ಸಹಕಾರ ಸಂಘಗಳಲ್ಲಿ ಕೃಷಿ ಸಾಲ: 25,547.02 ಕೋಟಿ ರೂ. ಸಾಲ ಹೊರಬಾಕಿ

Update: 2023-12-30 05:58 GMT

Photo: PTI

ಬೆಂಗಳೂರು: ರೈತರ ಆತ್ಮಹತ್ಯೆ, ಬರ, ರೈತರ ಸಾಲಮನ್ನಾ ಕುರಿತಾದ ವಿಷಯಗಳು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ರಾಜ್ಯದ ಸಹಕಾರ ಸಂಘಗಳಲ್ಲಿ ಕೃಷಿ ಸಾಲ ಪಡೆದಿದ್ದ 31.65 ಲಕ್ಷ ರೈತರು 25,547.02 ಕೋಟಿ ರೂ. ಸಾಲ ಹೊರಬಾಕಿ ಹೊಂದಿದ್ದಾರೆ ಎಂಬ ಅಂಕಿ ಅಂಶಗಳು ಇದೀಗ ಮುನ್ನೆಲೆಗೆ ಬಂದಿವೆ.

ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲಿ ಈಗಾಗಲೇ ರಾಜ್ಯ ಸರಕಾರವು ಸ್ಪಷ್ಟಪಡಿಸಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರೈತರು ಪಡೆದಿರುವ 50 ಸಾವಿರ ಮತ್ತು 1 ಲಕ್ಷ ರೂ. ಸಾಲವನ್ನು ಮನ್ನಾ ಮಾಡುವ ಸಂಬಂಧ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ರೈತರಿಗೆ ಸಂಬಂಧಿಸಿದಂತೆ ನೀಡಿರುವ ಹಸಿರು ಪಟ್ಟಿಗೆ ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿತ್ತು.

2023ರ ನವೆಂಬರ್ 20ರ ಅಂತ್ಯಕ್ಕೆ ಸಹಕಾರ ಸಂಘಗಳಲ್ಲಿ 29.75 ಲಕ್ಷ ರೂ. ರೈತರು 21,912.14 ಕೋಟಿ ರೂ.ಗಳ ಅಲ್ಪಾವಧಿ ಸಾಲ ಮತ್ತು 1.91 ಲಕ್ಷ ರೈತರು 3,634.88 ಕೋಟಿ ರೂ.ಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ಹೀಗೆ ಒಟ್ಟು 31.65 ಲಕ್ಷ ರೂ. ರೈತರು 25,547.02 ಕೋಟಿ ರೂ.ಗಳ ಕೃಷಿ ಸಾಲದ ಹೊರಬಾಕಿ ಹೊಂದಿರುತ್ತಾರೆ ಎಂಬ ಅಂಕಿ ಅಂಶಗಳನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸದನಕ್ಕೆ ಒದಗಿಸಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಅಂದರೆ 2023ರ ಮೇ 20ರಿಂದ 2023ರ ನವೆಂಬರ್ 1ರವರೆಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಹಾಗೂ ಶೇ. 3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಿತ್ತು. ಈ ಪೈಕಿ 5 ಲಕ್ಷ ರೂ.ವರೆಗಿನ ಅಲ್ಪಾವಧಿ ಕೃಷಿ ಸಾಲವನ್ನು 2,372 ರೈತರಿಗೆ ವಿತರಿಸಿತ್ತು ಎಂದು ಮಾಹಿತಿ ಒದಗಿಸಿದ್ದರು.

ಅಲ್ಪಾವಧಿ ಕೃಷಿ ಸಾಲ 10,38,085.94 ಲಕ್ಷ ರೂ., ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ 38,160.32 ಲಕ್ಷ ರೂ., ಸೇರಿ ಒಟ್ಟು ಕೃಷಿ ಸಾಲ10,76,246.00 ಲಕ್ಷ ರೂ. ಸಾಲ ವಿತರಿಸಿದೆ.

ರೈತರು ಪಡೆದಿರುವ 50 ಸಾವಿರ ಮತ್ತು 1 ಲಕ್ಷ ರೂ. ಸಾಲವನ್ನು ಮನ್ನಾ ಮಾಡುವ ಸಂಬಂಧ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ರೈತರಿಗೆ ಸಂಬಂಧಿಸಿದಂತೆ ನೀಡಿರುವ ಹಸಿರು ಪಟ್ಟಿಗೆ ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿದೆ. ಅಲ್ಲದೆ ಒಂದು ಲಕ್ಷ ರೂ. ಸಾಲ ಮನ್ನಾ ಯೋಜನೆ ಮುಂದುವರಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹೆಚ್ಚುವರಿ ಅನುದಾನ ಕೋರಿಕೆಯ ಪ್ರಸ್ತಾವವೂ ನನೆಗುದಿಗೆ ಬಿದ್ದಿದೆ. ಪ್ರಸ್ತುತ ಆರ್ಥಿಕ ನಿರ್ಬಂಧಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 2021ರ ಮಾರ್ಚ್ 6ರಂದು ತಳೆದಿದ್ದ ನಿಲುವಿಗೇ ಬದ್ಧವಾಗಿರಬೇಕು ಎಂದು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಆರ್ಥಿಕ ಇಲಾಖೆಯು ಪುನರುಚ್ಛರಿಸಿತ್ತು.

ಸಾಲಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ನಿಬಂಧಕರು ಸಲ್ಲಿಸಿರುವ ಪ್ರಸ್ತಾವ ಮತ್ತು ಆರ್ಥಿಕ ಇಲಾಖೆಯು 2021ರ ಆಗಸ್ಟ್‌ನಿಂದ ನವೆಂಬರ್ 29ರವರೆಗೆ ನಡೆಸಿರುವ ಪತ್ರ ವ್ಯವಹಾರ ಮತ್ತು ಟಿಪ್ಪಣಿ ಹಾಳೆ, ಈ ಸಂಬಂಧ ಸಹಕಾರ ಸಂಘಗಳ ನಿಬಂಧಕರು 2021ರ ನವೆಂಬರ್ 8ರಂದು ಬರೆದಿದ್ದರು.

1 ಲಕ್ಷ ರೂ. ಸಾಲ ಮನ್ನಾ ಯೋಜನೆಯನ್ನು 2021ರ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳಿಸಬೇಕು ಎಂದು ಆರ್ಥಿಕ ಇಲಾಖೆ ಹೇಳಿತ್ತು. ಆದರೆ ಸಹಕಾರ ಸಂಘಗಳ ನಿಬಂಧಕರು 2021-22ನೇ ಆರ್ಥಿಕ ವರ್ಷದಲ್ಲೂ ಇದೇ ಯೋಜನೆಯಡಿ ಹಲವು ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಅನುದಾನ ಒದಗಿಸಿದ್ದೇ ಆದಲ್ಲಿ ಮುಂದಿನ ವರ್ಷಗಳಲ್ಲೂ ಅನುದಾನ ಒದಗಿಸಬೇಕಾದ ಅನಿವಾರ್ಯತೆ ಬರಲಿದೆ. ಹೀಗಾಗಿ 2021ರ ಮಾರ್ಚ್ 6ರಂದು ತಳೆದಿರುವ ನಿಲುವನ್ನೇ ಮುಂದುವರಿಸಬೇಕು ಎಂದು ಆರ್ಥಿಕ ಇಲಾಖೆಯು ಲೆಕ್ಕಾಚಾರ ಮುಂದಿಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ. ಮಹಾಂತೇಶ್

contributor

Similar News