ಪಠ್ಯಪುಸ್ತಕ ಪರಿಷ್ಕರಣೆಗೆ ತಜ್ಞರ ಸಮಿತಿ ನೇಮಕ

Update: 2023-09-26 07:27 GMT

ಬೆಂಗಳೂರು, ಸೆ.25: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ಅವರಿಂದ ಆರರಿಂದ ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಪಠ್ಯ ಪರಿಶೀಲಿಸಿ ಮರು ಪರಿಷ್ಕರಿಸಿದ್ದ ಪಠ್ಯ ಪುಸ್ತಕಗಳ ಸಂಬಂಧ ಈಗಾಗಲೇ ತಿದ್ದುಪಡಿ ತಂದು ತಿದ್ದೋಲೆಗಳನ್ನು ರವಾನಿಸಿರುವ ಕಾಂಗ್ರೆಸ್ ಸರಕಾರವು ಇದೀಗ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು 2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದ ಪಠ್ಯ ಪುಸ್ತಕಗಳ ಪರಿಷ್ಕರಣೆ ಕಾರ್ಯಕ್ಕೆ ತಜ್ಞರ ಸಮಿತಿ ಮತ್ತು ಸಂಯೋಜಕರನ್ನು ನೇಮಿಸಿ ಆದೇಶಿಸಿದೆ.

ರಾಜ್ಯದಲ್ಲಿ ಎನ್‌ಸಿಎಫ್ 2005 ಆಧಾರಿತವಾಗಿ ರಚನೆಗೊಂಡು ಜಾರಿಯಲ್ಲಿರುವ 1ರಿಂದ 10ನೇ ತರಗತಿವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು ಮತ್ತು 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಸಂಬಂಧ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಲಹೆ ನೀಡಲು ಉತ್ತರ ಕನ್ನಡ ಜಿಲ್ಲೆಯ ಡಾ. ಮಂಜುನಾಥ ಜಿ. ಹೆಗಡೆ ಅವರನ್ನು ಮುಖ್ಯ ಸಂಯೋಜಕರನ್ನಾಗಿ ನೇಮಿಸಿ 2023ರ ಸೆ.25ರಂದು ಆದೇಶ ಹೊರಡಿಸಿದೆ. ಈ ಆದೇಶದ (ಇಪಿ 270 ಪಿಎಂಸಿ 2023,ದಿನಾಂಕ 25-09-2023) ಪ್ರತಿಯು the-file.inಗೆ ಲಭ್ಯವಾಗಿದೆ.

2024-25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಪಠ್ಯ ಪುಸ್ತಕಗಳು ಶಾಲಾ ಹಂತಕ್ಕೆ ತಲುಪಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕರಣೆ ಕಾರ್ಯವನ್ನು ತುರ್ತಾಗಿ ನಿರ್ವಹಿಸಿ ವರದಿ ಸಲ್ಲಿಸಲು ಕಾಲಾವಧಿ ನಿಗದಿಪಡಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ಕೋರಿತ್ತು. ಅದರಂತೆ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು 2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯ ಕ್ರಮದಲ್ಲಿ ಪಠ್ಯ ಪುಸ್ತಕಗಳ ಪರಿಷ್ಕರಣೆ ನಡೆಸಲು ಸಮಿತಿ ರಚಿಸಿದೆ. ಈ ಸಮಿತಿಯು ಮುಂದಿನ 3 ತಿಂಗಳ ಅವಧಿಗೆ ನೇಮಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಡಾ.ಮಂಜುನಾಥ ಜಿ. ಹೆಗಡೆ ಅವರು ಮುಖ್ಯ ಸಂಯೋಜಕರಾಗಿರುವ ಪಠ್ಯಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನೊಳಗೊಂಡಂತೆ 37 ಸದಸ್ಯರನ್ನು ನೇಮಿಸಲಾಗಿದೆ.

2023-24ನೇ ಸಾಲಿನ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ. ಆಂಜನಪ್ಪ, ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಚಿಕ್ಕಮಗಳೂರಿನ ಬಸವನಹಳ್ಳಿಯ ಸರಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಚ್.ಎಸ್. ಸತ್ಯನಾರಾಯಣ್, ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ದಾವಣಗೆರೆಯ ಸರಕಾರಿ ಮಹಿಳಾ ಪ್ರಥಮ ದರ್ಜೆಯ ಉಪನ್ಯಾಸಕ ಡಾ. ಮಂಜಣ್ಣ, 6 ಮತ್ತು 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಕಲಬುರಗಿಯ ಕೇಂದ್ರೀಯ ವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ ಎಂ., 8 ಮತ್ತು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಸಮಿತಿಯ ಸಮಿತಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಡಾ. ಅಶ್ವತ್ಥನಾರಾಯಣ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿರುವುದು ಗೊತ್ತಾಗಿದೆ.

ಕನ್ನಡ ಪ್ರಥಮ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ: ಡಾ.ಬಿ.ಸಿ. ನಾಗೇಂದ್ರ ಕುಮಾರ್, ಚಿಕ್ಕದೇವೇಗೌಡ, ಅಜಮೀರ್ ನಂದಾಪುರ, ನರಸಿಂಹಮೂರ್ತಿ ಬಿ.ಕೆ. ಸುಶೀಲಾ, ವಿಶ್ವನಾಥ್ ಜಿ.ಎಸ್., ಅಕ್ಷತಾ, ನೇತ್ರಾವತಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ: ಸಹ ಪ್ರಾಧ್ಯಾಪಕ ಡಾ.ಬಿ. ಪಾಪಣ್ಣ, ಡಾ. ಗಣೇಶ್ ಜಿ.ಎಂ., ಡಾ. ಗಜಾನಂದ್ ಸೊಗಲನ್ನವರ, ಅನಿತಾ, ಈರಪ್ಪ ಮಹಾಲಿಂಗಪುರ, ರವೀಶ್ ಕುಮಾರ್, ರಶ್ಮಿ, ಪವಿತ್ರ ಅವರನ್ನು ಸಮಿತಿ ಸದಸ್ಯರನ್ನಾಗಿಸಲಾಗಿದೆ.

ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ: ಶಿವಣ್ಣ ಹೆಂದೋರೆ, ಮಮತಾ ಭಾಗವತ್ ಅವರು ಸದಸ್ಯರಾಗಿದ್ದಾರೆ.

ಸಮಾಜ ವಿಜ್ಞಾನ (6-7 ನೇ ತರಗತಿ) ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ: ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಕೃಷ್ಣ ಹೊಂಬಾಳೆ, ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಪ್ರದೀಪ್ ಕೆಂಚನೂರು, ನಿವೃತ್ತ ಪ್ರಾಂಶುಪಾಲ ಡಾ. ಕೋಡಿ ರಂಗಪ್ಪ, ಉಪ ಪ್ರಾಂಶುಪಾಲರಾದ ದಾನಮ್ಮ ಜಳಕಿ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವಸೀಮ್ ಅನ್ವರ್ ಅವರನ್ನು ಸದಸ್ಯರನ್ನಾಗಿಸಲಾಗಿದೆ.

ಸಮಾಜ ವಿಜ್ಞಾನ (8-9 ನೇ ತರಗತಿ) ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ: ಚಿತ್ರದುರ್ಗ ಜಿಲ್ಲೆಯ ಸರಕಾರಿ ಕಲಾ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಂಗಾಧರ ಪಿ.ಎಸ್., ತುಮಕೂರು ವಿವಿಯ ಪ್ರೊ.ಬಿ. ಶೇಖರ್, ಬೆಳಗಾವಿಯ ಡಾ.ಎ.ಬಿ. ವಗ್ಗರ, ಬೆಂಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳ ಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಯಡವಾಣಿ, ಕನಕಪುರ ಪಟ್ಟಣದ ಉರ್ದು ಪ್ರೌಢಶಾಲೆಯ ಸಹ ಶಿಕ್ಷಕಿ ತಬಸ್ಸುಮ್ ಫಾತಿಮ, ಮಧುಗಿರಿ ಪಬ್ಲಿಕ್ ಶಾಲೆಯ ಪಿ ಎಂ ಕಾಗಿನಕರ್, ನೆಲಮಂಗಲದ ಸರಕಾರಿ ಶಾಲೆಯ ಸಹ ಶಿಕ್ಷಕಿ ಶಾಹಿನಾ ಅಲ್ಲಾಪುರ, ಬೆಂಗಳೂರು ದಕ್ಷಿಣ ವಲಯದ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮೋಹನಕುಮಾರಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಜಿ.ಮಹಾಂತೇಶ್

contributor

Similar News