ಜಾತಿ, ಮೆರಿಟೊಕ್ರಸಿ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ

Update: 2023-08-23 06:12 GMT

2014ರಿಂದ ಈಚೆಗೆ ದೇಶಾದ್ಯಂತ ಇರುವ ಐಐಟಿ, ಐಐಎಂ ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ೧೨೨ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದರು. ಅಕಾಡಮಿಕ್ ಒತ್ತಡವು ಅನೇಕ ವಿದ್ಯಾರ್ಥಿಗಳ ಸಾವಿಗೆ ಕಾರಣವಾದರೆ, ಅನೇಕ ದಲಿತ ಮತ್ತು ಬುಡಕಟ್ಟು ವಿದ್ಯಾರ್ಥಿಗಳು ತಮ್ಮ ಜಾತಿಗಳ ಕಾರಣಕ್ಕೆ, ತಾರತಮ್ಯ ಮತ್ತು ಕಿರುಕುಳಗಳ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದೇಶದ ಸಾಮಾಜಿಕ ಸ್ವಾಸ್ಥ್ಯದ ಹಿನ್ನೆಲೆಯಲ್ಲಿ ಅತ್ಯಂತ ಗಂಭೀರ ವಿಷಯವಾಗಿದೆ. ಐಐಟಿ ಬಾಂಬೆಯಲ್ಲಿನ ಬಿ.ಟೆಕ್. ವಿದ್ಯಾರ್ಥಿ ದರ್ಶನ್ ಸೋಲಂಕಿಯ ಆತ್ಮಹತ್ಯೆ, ವಾರಂಗಲ್‌ನ ವೈದ್ಯೆ ಪ್ರೀತಿಯ ಸಾವುಗಳು ಸಹ ಅವರುಗಳ ಜಾತಿಯ ಕಾರಣಕ್ಕೆ ಉಂಟಾಯಿತು ಎಂದು ಅಂಬೇಡ್ಕರ್ ಪೆರಿಯಾರ್ ಸಂಘಟನೆಯಂತಹ ಕೆಲ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಇದೇ ಬಗೆಯ ಕಾರಣಕ್ಕೆ ೨೦೧೬ರಲ್ಲಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಆತ್ಮಹತ್ಯೆಯಂತೂ ದೇಶದಾದ್ಯಂತ ಚರ್ಚೆ, ಚಳವಳಿಗಳನ್ನು ಹುಟ್ಟುಹಾಕಿತ್ತು.

ಇತ್ತೀಚೆಗೆ ಮದ್ರಾಸ್ ಐಐಟಿಯ ಸಹಾಯಕ ಪ್ರಾಧ್ಯಾಪಕರೊಬ್ಬರು ಜಾತಿ ಕಿರುಕುಳದ ಕಾರಣಕ್ಕೆ ರೋಸಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಕೇರಳದ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಸಂಶೋಧಕರೊಬ್ಬರು ತಮ್ಮ ವಿರುದ್ಧದ ತಾರತಮ್ಯವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದು, ವಿದ್ಯಾರ್ಥಿಗಳನೇಕರು ಜಾತಿ ನಿಂದನೆ ಅವಮಾನಗಳಿಗೆ ಈಡಾಗಿ, ತಮ್ಮ ಓದನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಿರುವುದು, ಖಿನ್ನತೆಗೆ ಒಳಗಾಗುತ್ತಿರುವುದು ಕೇಳಿಬರುತ್ತಲೇ ಇದೆ. ಆಧುನೀಕರಣ, ಜಾಗತೀಕರಣ, ಸಾಂವಿಧಾನಿಕ ರಕ್ಷಣೆಗಳು ಮೊದಲಾದವುಗಳೇನೇ ಇದ್ದರೂ ಭಾರತದ ಬಹುಸಂಖ್ಯಾತ ಕೆಳಜಾತಿಗಳ ಸದಸ್ಯರುಗಳಿಗೆ ಸಮಾಜದ ಎಲ್ಲಾ ಸ್ತರಗಳಲ್ಲೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಡುವ ಜಾತಿ ತರತಮವು ಭಾರತದ ಡಿಎನ್‌ಎ ಒಳಗೇ ಹರಿಯುತ್ತಿದೆಯೆನೋ ಅನಿಸುತ್ತದೆ.

ಭಾರತೀಯ ಸಮಾಜದಲ್ಲಿ ವಾಸಿಸುವ ಮನುಷ್ಯನ ಜೀವನದ ಪ್ರತೀ ಘಟ್ಟದಲ್ಲಿಯೂ ಕೆಲವರಿಗೆ ಜಾತಿಯು ಸಮಸ್ಯೆಯಾಗಿಯೋ, ಸವಾಲಾಗಿಯೋ ಮತ್ತು ಕೆಲವರಿಗೆ ಅವಕಾಶವಾಗಿಯೋ ಪಾತ್ರ ವಹಿಸುವುದನ್ನು ಗಮನಿಸಬಹುದು. ಜಾತಿ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅನುಭವಗಳನ್ನು ರೂಪಿಸುತ್ತದೆ. ಹಾಗೆಯೇ ಒಬ್ಬ ವ್ಯಕ್ತಿಯ ಜಾತಿಯು ಆತನಿಗೆ ಸಮಾಜದ ವಿವಿಧ ಸಂಪನ್ಮೂಲಗಳಿಗೆ ಅವಕಾಶವನ್ನು ನಿರ್ಧರಿಸುತ್ತದೆ. ಈ ಕಾರಣದಿಂದಾಗಿಯೇ ಜಾತಿಯು ಕೇವಲ ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನವಲ್ಲದೆ, ವ್ಯಕ್ತಿಯೊಬ್ಬನು ದೊರಕಿಸಿಕೊಳ್ಳಬಹುದಾದ ಅವಕಾಶಗಳನ್ನು ಮತ್ತು ಸಂಪನ್ಮೂಲಗಳನ್ನು ನಿರ್ಧರಿಸುವ ಕ್ರಮಬದ್ಧ ವ್ಯವಸ್ಥೆಯಾಗಿದೆ. ಜಾತಿ ಸಂಬಂಧಿತ ವಿಚಾರಗಳು ದಿನನಿತ್ಯದ ವಾಸ್ತವವೇ ಆದರೂ, ಜಾತಿ ಕಾರಣಕ್ಕೆ ಆತ್ಮಹತ್ಯೆಗಳು ನಡೆಯುತ್ತಿರುವ ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿ (ವಿಶೇಷವಾಗಿ ಐಐಟಿಗಳು, ಐಐಎಂಗಳು, ಐಐಎಸ್‌ಇಆರ್‌ಗಳು) ಜಾತಿ ತಾರತಮ್ಯಗಳ ಬಗ್ಗೆ ಯಾವುದೇ ಚರ್ಚೆಯನ್ನು ನಡೆಸದೆ ಇರುವುದು ಅಥವಾ ಮಹಿಳಾ ಕುಂದುಕೊರತೆ ವಿಭಾಗಗಳು ಇರುವಂತೆ ಜಾತಿ ತಾರತಮ್ಯದ ವಿರುದ್ಧ ಸಹಾಯ ಸೌಲಭ್ಯಗಳನ್ನು ಕಲ್ಪಿಸದೆ ಇರುವುದು ಕೂಡ ಆತಂಕಕಾರಿಯಾಗಿದೆ.

ಐಐಟಿಯಂತಹ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಜೆಇಇ ಸ್ಕೋರು ಕೇಳುವ ಮೂಲಕ ಅವರ ಜಾತಿಗಳನ್ನು ಅರಿತುಕೊಳ್ಳುತ್ತಾರೆ. ಪ್ರವೇಶ ಪರೀಕ್ಷೆಯಲ್ಲಿ ಯಾವ ಕೆಟಗರಿಗೆ ಎಷ್ಟು ಅಂಕಗಳಿಗೆ ಕಟ್ ಆಫ್ ಮಾರ್ಕ್ಸ್ ನಿಂತಿದೆ ಎಂಬುದನ್ನು ಅರಿತಿರುವ ಅವರಿಗೆ ಈ ಅಂಕಗಳ ಮೂಲಕವೇ ಆತನ ಜಾತಿ, ಸಾಮಾಜಿಕ, ಆರ್ಥಿಕ ಸ್ಥಾನಮಾನಗಳು ತಕ್ಷಣಕ್ಕೆ ಗೊತ್ತಾಗಿಬಿಡುತ್ತವೆ. ಇವನು ಕೆಟಗರಿಗೆ ಸೇರಿದವನು, ಕೋಟಾದಡಿ ಬಂದವನು ಎಂಬ ತಾರತಮ್ಯ ಅನೇಕರ ನಡವಳಿಕೆಗಳಲ್ಲಿ ಕಾಣತೊಡಗುತ್ತದೆ. ಕೆಲವೊಮ್ಮೆ ಅವು ಕಿರುಕುಳದ ಮಟ್ಟ ತಲುಪುತ್ತವೆ. ಮೇಲುಜಾತಿಗಳಲ್ಲಿ ಜನಿಸಿ, ನಗರಗಳಲ್ಲಿ ಉತ್ತಮ ಶಾಲೆಗಳಲ್ಲಿ ಕಲಿತು ಬಂದವರಿಗೂ, ತಮ್ಮ ತಲೆಮಾರುಗಳಲ್ಲಿ ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ, ಗ್ರಾಮೀಣ ಪ್ರದೇಶಗಳಿಂದ, ಕೆಳಸ್ತರಗಳಿಂದ ಬಂದವರಿಗೂ ಇರುವ ಸಾಮಾಜಿಕ, ಸಾಂಸ್ಕೃತಿಕ ಅಂತರಗಳು ಅಗಾಧ ಕಂದಕವನ್ನು ಸೃಷ್ಟಿಸುತ್ತವೆ. ಇದರ ಜೊತೆಗೆ ಎಲೀಟ್ ವಿದ್ಯಾರ್ಥಿಗಿರುವ ಇಂಗ್ಲಿಷ್ ಮೇಲಿನ ಹಿಡಿತ, ಹಾಡು, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳೆಲ್ಲಾ ಇತರ ಗ್ರಾಮೀಣ, ಕೆಳಸ್ತರದ ವಿದ್ಯಾರ್ಥಿಗಳ ನಡುವೆ ಸೃಷ್ಟಿಸುವ ಅಂತರವು ವಿದ್ಯಾರ್ಥಿಗಳ ಮೇಲೆ ಸಾಂಸ್ಕೃತಿಕ ಆಘಾತವನ್ನು ಉಂಟುಮಾಡುತ್ತದೆ.

ಸಮಾಜಶಾಸ್ತ್ರಜ್ಞ ಎಮಿಲಿ ಡರ್ಖೈಂ ಆತ್ಮಹತ್ಯೆಗೆ ಇರುವ ಸಾಮಾಜಿಕ ಕಾರಣಗಳನ್ನು ವಿವರಿಸುತ್ತ, ಒಬ್ಬ ವ್ಯಕ್ತಿಯನ್ನು ಆತನ ಸಮುದಾಯ ಮತ್ತು ಸಮಾಜ ಬಹಿಷ್ಕರಿಸಿದಾಗ ತಾನು ಇಲ್ಲಿಗೆ ಸಲ್ಲದವನು ಎಂಬ ತೀವ್ರ ನಿರಾಶೆ ಮತ್ತು ಖಿನ್ನತೆಯು ಆತ್ಮಹತ್ಯೆಗೆ ದೂಡುತ್ತದೆ ಎಂಬುದನ್ನು ಆತ್ಮಹತ್ಯೆಯ ಕುರಿತ ‘ಇಗೊಯಿಸ್ಟಿಕ್ ಸುಸೈಡ್’ ಸಿದ್ಧಾಂತದಲ್ಲಿ ವಿವರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಬಹುತೇಕರ ಆತ್ಮಹತ್ಯೆಗಳಿಗೆ ಅವರ ಸುತ್ತಲಿನ ಸಮಾಜವೇ ನೇರ ಹೊಣೆಯಾಗುತ್ತದೆ.

ದೇಶದ ಸಾಮಾಜಿಕ ಪರಿಸ್ಥಿತಿಗಳ, ಜಾತಿ ಮತ್ತು ಅವಕಾಶಗಳಿಗಿರುವ ಸಂಬಂಧವನ್ನು, ಸಾಮಾಜಿಕ ಸಮಾನತೆಯ ಸಾಂವಿಧಾನಿಕ ಮಹತ್ವವನ್ನು ಅರಿಯದ ನಗರದ ಮತ್ತು ಮೇಲ್ಜಾತಿಯ ಮಕ್ಕಳು ಮೀಸಲಾತಿಯನ್ನು ತಮಗಾದ ವಂಚನೆಯೆಂದೂ, ಬಡತನಕ್ಕೂ ಮೀಸಲಾತಿಗೂ ಸಂಬಂಧ ಇದೆಯೆಂತಲೂ, ಮೀಸಲಾತಿ ತಮ್ಮ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದೆ ಎಂತಲೂ ಭಾವಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರನ್ನು ಸಾಮಾಜೀಕರಣಗೊಳಿಸಿದ ಕುಟುಂಬ ವ್ಯವಸ್ಥೆ, ಶಾಲೆ ಮತ್ತು ಸಹಪಾಠಿಗಳೇ ಆಗಿದ್ದಾರೆ. ಇದೇ ಬಗೆಯ ಎಲೀಟ್ ಮಕ್ಕಳೇ ತಮ್ಮ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡುವ ನಾಟಕ ಮಾಡಬಲ್ಲರು ಮತ್ತು ಈ ಮನಸ್ಥಿತಿಯನ್ನು ಬೆಂಬಲಿಸುವ ಕೆಲ ಶಾಲಾ/ಕಾಲೇಜುಗಳು ಇಂತಹ ನಡವಳಿಕೆಯನ್ನು ಪೋಷಿಸಬಲ್ಲವು.

ಪೋಷಕರು ವಿದ್ಯಾವಂತರೂ, ಶ್ರೀಮಂತರೂ, ಉದ್ಯೋಗಸ್ಥರೂ ಆಗಿದ್ದಾಗ ಅವರ ಮಕ್ಕಳಿಗೆ ಸಿಗುವ ಶೈಕ್ಷಣಿಕ ಅವಕಾಶಗಳಿಗೂ ಮೊದಲ ಬಾರಿಗೆ ಸ್ವಪ್ರಯತ್ನದಿಂದ ಮೇಲೆ ಬರುತ್ತಿರುವ, ಅವಿದ್ಯಾವಂತರಾದ, ಕೆಳಸ್ತರದ ದುಡಿಮೆಯಲ್ಲಿರುವ, ಕೆಳಜಾತಿಗೆ ಸೇರಿದ ಪೋಷಕರ ಮಕ್ಕಳಿಗೆ ಸಿಗುವ ಶೈಕ್ಷಣಿಕ ಅವಕಾಶಗಳಿಗೂ ಅಜಗಜಾಂತರವಿರುತ್ತದೆ. ಈ ಮಕ್ಕಳ ಶ್ರಮ ಅನುಕೂಲಸ್ಥ ಮಕ್ಕಳ ಶ್ರಮಕ್ಕಿಂತ ಅತ್ಯಂತ ಕಠಿಣವಾದುದು. ಆದರೆ ಈ ಕುರಿತು ಸಮಾಜದ ಅನೇಕ ವರ್ಗಗಳು ಅಸಹನೆಯನ್ನು ವ್ಯಕ್ತಪಡಿಸುವುದು, ಶತಮಾನಗಳ ಕಾಲ ಶೋಷಣೆಗೊಳಪಟ್ಟು, ಸಾಮಾಜಿಕ ಸ್ತರದಲ್ಲಿ ಅತ್ಯಂತ ಕೆಳಗಿದ್ದ ಜಾತಿಗಳ ಮಕ್ಕಳು ತಮ್ಮ ಸಮಕ್ಕೆ ಬರುವುದನ್ನು ಸಹಿಸಲಾರದ ಜಾತಿಗ್ರಸ್ಥ ಮನಸ್ಥಿತಿಯನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವುದು ದೇಶಕ್ಕೆ ಸ್ವಾತಂತ್ರ್ಯ ಬಂದರೂ ಸಮಾಜದ ಜಾತಿ ಕಲುಷಿತ ಮನಸ್ಥಿತಿ ಬದಲಾಗದ್ದನ್ನು ತೋರುತ್ತದೆ. ತಾವು ಕಲಿಯುತ್ತಿರುವ ಸಂಸ್ಥೆಗಳಲ್ಲಿ ಅಘೋಷಿತ ಸಾಮಾಜಿಕ ಬಹಿಷ್ಕಾರಕ್ಕೆ, ಬಹಿರಂಗ ಜಾತಿ ನಿಂದನೆಗಳಿಗೆ ಒಳಗಾದ ಮಕ್ಕಳು ಪ್ರಾಧ್ಯಾಪಕರ, ಸಹಪಾಠಿಗಳ ಬೆಂಬಲವೂ ಇಲ್ಲದೆ, ಪೋಷಕರಿಗೂ ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳಲಾಗದ ಸೂಕ್ಷ್ಮ ಮನಸ್ಥಿತಿಯಲ್ಲಿ ಆತ್ಮಹತ್ಯೆಯಂತಹ ದುರಂತಮಯ ನಿರ್ಧಾರಕ್ಕೆ ಬಂದುಬಿಡುತ್ತಾರೆ.

ಇದನ್ನೇ ‘ದ ಟೈರನಿ ಆಫ್ ಮೆರಿಟ್’ ಪುಸ್ತಕವನ್ನು ಬರೆದ ಹಾರ್ವರ್ಡ್ ವಿವಿ ಪ್ರಾಧ್ಯಾಪಕ ಮೈಕೆಲ್ ಜೆ. ಸಾಂಡೆಲ್ ಅವರು ‘‘ಆನುವಂಶಿಕವಾಗಿ ಅಪಾರ ಸಂಪತ್ತು ಮತ್ತು ಸವಲತ್ತುಗಳು ಇರುವವರು ತಮ್ಮ ಅನುಕೂಲಗಳನ್ನು ಮೆರಿಟ್ ಹೆಸರಿನಲ್ಲಿ ತಮ್ಮ ಮುಂದಿನ ಪೀಳಿಗೆಗೆ ಮುಂದುವರಿಸುತ್ತಾರೆ’’ ಎಂದು ಹೇಳಿರುವುದು ಭಾರತದ ಸಂದರ್ಭದಲ್ಲಿಯೂ ವಾಸ್ತವವೇ ಆಗಿದೆ. ಮೆರಿಟನ್ನು ಸಮರ್ಥಿಸುತ್ತಾ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಪಹಾಸ್ಯಕ್ಕೀಡುಮಾಡುವವರು ಆಳದಲ್ಲಿ ಸ್ವಾರ್ಥಿಗಳು, ತಾರತಮ್ಯವನ್ನು ಪೋಷಿಸುವವರು ಆಗಿರುತ್ತಾರೆ ಎಂದು ಸಂಶೋಧನೆಗಳು ಸ್ಪಷ್ಟಪಡಿಸಿವೆ. ಆಸಕ್ತರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮ್ಯಾನೇಜ್‌ಮೆಂಟ್ ವಿದ್ವಾಂಸರಾದ ಎಮಿಲಿಯೊ ಕ್ಯಾಸ್ಟಿಲ್ಲಾ ಮತ್ತು ಇಂಡಿಯಾನಾ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರಜ್ಞ ಸ್ಟೀಫನ್ ಬೆನಾರ್ಡ್ ಅವರು ಖಾಸಗಿ ಕಂಪೆನಿಗಳಲ್ಲಿ ‘ಕಾರ್ಯಕ್ಷಮತೆ ಆಧಾರಿತ ಪರಿಹಾರ’ದಂತಹ ಮೆರಿಟೋಕ್ರಾಟಿಕ್ ಅಭ್ಯಾಸಗಳನ್ನು ಅಳವಡಿಸುವ ಪ್ರಯತ್ನಗಳನ್ನು ಅಧ್ಯಯನ ಮಾಡಿರುವುದನ್ನು ಗಮನಿಸಬಹುದು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್ ೨೦೦೬ರಲ್ಲಿ ಒಬಿಸಿ ಕೋಟಾವನ್ನು ಪರಿಚಯಿಸಿದ ನಂತರ ದಲಿತ, ಒಬಿಸಿ ಮತ್ತು ಬುಡಕಟ್ಟು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ, ಭಾರತ ಸರಕಾರವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯದ ಆರೋಪಗಳ ಕುರಿತು ತನಿಖೆ ನಡೆಸಲು ಸಮಿತಿಯನ್ನು ರಚಿಸಿತು. ಬಹುಶಃ ಇದು ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತಿ ತಾರತಮ್ಯವನ್ನು ತನಿಖೆ ಮಾಡಲು ಸ್ವತಂತ್ರ ಭಾರತದಲ್ಲಿ ನಡೆಸಿದ ಮೊದಲ ಪ್ರಯತ್ನವಾಗಿದೆ.

ತಾವು ಕಲಿಯುತ್ತಿರುವ ಸಂಸ್ಥೆಗಳಲ್ಲಿ ಅಘೋಷಿತ ಸಾಮಾಜಿಕ ಬಹಿಷ್ಕಾರಕ್ಕೆ, ಬಹಿರಂಗ ಜಾತಿ ನಿಂದನೆಗಳಿಗೆ ಒಳಗಾದ ಮಕ್ಕಳು ಪ್ರಾಧ್ಯಾಪಕರ, ಸಹಪಾಠಿಗಳ ಬೆಂಬಲವೂ ಇಲ್ಲದೆ, ಪೋಷಕರಿಗೂ ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳಲಾಗದ ಸೂಕ್ಷ್ಮ ಮನಸ್ಥಿತಿಯಲ್ಲಿ ಆತ್ಮಹತ್ಯೆಯಂತಹ ದುರಂತಮಯ ನಿರ್ಧಾರಕ್ಕೆ ಬಂದುಬಿಡುತ್ತಾರೆ.

ಅಂದಿನ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷ ಎಸ್.ಕೆ. ಥೋರಟ್ ಅವರು ಸಿದ್ಧಪಡಿಸಿದ ವರದಿ, ಈ ಉನ್ನತ ಸಂಸ್ಥೆಗಳ ವಿದ್ಯಾರ್ಥಿಗಳು ಮಾತ್ರವಲ್ಲದೆ ಅಲ್ಲಿನ ಎಸ್‌ಸಿ ಮತ್ತು ಎಸ್‌ಟಿ ಅಧ್ಯಾಪಕರು ಸಹ ಪ್ರತೀ ಹಂತದಲ್ಲೂ ಅನುಭವಿಸುತ್ತಿರುವ ಅತಿರೇಕದ ಜಾತಿ ತಾರತಮ್ಯದ ಬಗ್ಗೆ ಬಲವಾದ ಪುರಾವೆಗಳನ್ನು ನೀಡಿತು. ಈ ವರದಿಯನ್ನು ೨೦೦೭ರಲ್ಲಿ ಸರಕಾರಕ್ಕೆ ಸಲ್ಲಿಸಲಾಯಿತು. ಆದರೆ ವರದಿಯ ಯಾವುದೇ ಪ್ರಮುಖ ಶಿಫಾರಸುಗಳನ್ನು ಇದುವರೆಗೆ ಕಾರ್ಯಗತಗೊಳಿಸಲಿಲ್ಲ.

ಆತ್ಮಹತ್ಯೆಗೆ ಒಳಗಾದ ಬಹುತೇಕ ದಲಿತ/ಬುಡಕಟ್ಟು ವಿದ್ಯಾರ್ಥಿಗಳು ತಮ್ಮ ಜಾತಿಯ ಕಾರಣಕ್ಕೆ ನಾಚಿಕೆಪಡುವ ಮತ್ತು ಕೋಟಾ ವಿದ್ಯಾರ್ಥಿಗಳು ಎಂದು ಅಪಹಾಸ್ಯಕ್ಕೆ ಒಳಗಾಗುವ, ತಮ್ಮ ಸಾಮರ್ಥ್ಯಗಳನ್ನು ಅನುಮಾನಿಸುವ ಸನ್ನಿವೇಶವನ್ನು ಎದುರಿಸುತ್ತಾರೆ. ವಿಶ್ವವಿದ್ಯಾನಿಲಯ/ಸಂಸ್ಥೆಗಳಲ್ಲಿ ಪರಿಣಾಮಕಾರಿಯಾದ ವಿದ್ಯಾರ್ಥಿ ಬೆಂಬಲ ಗುಂಪುಗಳು ಅಥವಾ ಒಳಗೊಳ್ಳುವಿಕೆ ಕ್ರಮಗಳ ಅನುಪಸ್ಥಿತಿಯಲ್ಲಿ, ತಾರತಮ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಈ ಬಗೆಯಲ್ಲಿ ಜೀವ ಕಳೆದುಕೊಳ್ಳುತ್ತಿರುವುದು ಭಾರತೀಯ ಸಮಾಜದಲ್ಲಿ ಜಾತಿ ತಾರತಮ್ಯವು ಮತ್ತೂ ಬಲವಾಗುತ್ತಿರುವುದರ ಎಚ್ಚರಿಕೆಯ ಸಂಕೇತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಡಾ. ಸಂತೋಷ್ ನಾಯಕ್ ಆರ್.

contributor

Similar News