ಅಂತಿಮ ಸ್ಪರ್ಶವಿಲ್ಲದೆ ಅನಾಥವಾದ ದಾವಣಗೆರೆ ಜಿಲ್ಲಾ ರಂಗಮಂದಿರ
ದಾವಣಗೆರೆ, ನ.20: ನಗರದ ಹೃದಯ ಭಾಗದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ‘ಜಿಲ್ಲಾ ರಂಗಮಂದಿರ’ ಪೂರ್ಣಗೊಳ್ಳದೆ ಸಾರ್ವಜನಿಕರ ಬಳಕೆಗೆ ಉಪಯೋಗವಿಲ್ಲದಂತೆ ಆಗಿದೆ.
ಪಿ.ಬಿ.ರಸ್ತೆಯ ಮೀನು ಮಾರುಕಟ್ಟೆ ಪಕ್ಕದಲ್ಲಿರುವ ಮಹಾಲಿಂಗ ರಂಗ ಅವಧೂತರ ಮಠದ 120x180 ಅಡಿ ಅಳತೆಯ ಜಾಗದಲ್ಲಿ 4.34 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಜಿಲ್ಲಾ ರಂಗಮಂದಿರದ ಕಟ್ಟಡವೀಗ ಅಂತಿಮ ಸ್ಪರ್ಶವಿಲ್ಲದೆ ಅನಾಥವಾಗಿ ಗೋಚರಿಸುತ್ತಿದೆ.
2011ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ರಂಗಮಂದಿರ ನಿರ್ಮಾಣ ಮಾಡುವುದಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಮಂದಿರ ನಿರ್ಮಾಣಕ್ಕೆ ಲ್ಯಾಂಡ್ ಆರ್ಮಿಗೆ ವಹಿಸಿತ್ತು.
ಆಗ ರಂಗಮಂದಿರ ನಿರ್ಮಾಣಕ್ಕೆ ನಗರದ ಐಎಂಎ ಹಾಲ್ ಪಕ್ಕದ ಜಾಗ ಸೇರಿದಂತೆ ವಿವಿಧೆಡೆ ಗುರುತಿಸಲಾಗಿತ್ತು. ಆದರೆ ಐಎಂಎ ಹಾಲ್ ಪಕ್ಕದ ಜಾಗ ಕೊಡಲು ಮಹಾನಗರ ಪಾಲಿಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಬೇರೆಡೆ ಹುಡುಕಲಾಯಿತು ಎಂದು ತಿಳಿದು ಬಂದಿದೆ.
ಕೊನೆಗೆ ಎಲ್ಲೂ ಜಾಗ ಅಂತಿಮಗೊಳ್ಳದ ಕಾರಣ ಮಹಾಲಿಂಗ ರಂಗ ಅವಧೂತರ ಮಠದ ಜಾಗದಲ್ಲಿ ರಂಗಮಂದಿರ ನಿರ್ಮಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ.
ಇಲ್ಲಿ ರಂಗಮಂದಿರ ನಿರ್ಮಾಣ ಮಾಡಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳನ್ನು ಆಯೋಜಿಸಲು, ರಂಗ ಚಟುವಟಿಕೆ ನಡೆಸಲು ಮತ್ತು ಜನರಿಗೆ ಹೋಗಿ ಬರಲು ಸೂಕ್ತವಾದ ಸ್ಥಳ ಎಂದು ತೀರ್ಮಾನಿಸಿ 2013ರಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ಎ.ಎಚ್.ಶಿವಯೋಗಿಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಕಾಮಗಾರಿ ಕೈಗೆತ್ತಿಗೊಂಡ ಲ್ಯಾಂಡ್ ಆರ್ಮಿ ಜಿಲ್ಲಾ ರಂಗಮಂದಿರದ ಕಟ್ಟಡ ನಿರ್ಮಿಸುತ್ತಿದ್ದು, ಈಗಾಗಲೇ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಶೇ.30ರಷ್ಟು ಸಣ್ಣಪುಟ್ಟ ಕಾಮಗಾರಿ ಸೇರಿದಂತೆ ಅಂತಿಮ ಸ್ಪರ್ಶ ನೀಡಲು ಅನುದಾನದ ಕೊರತೆಯ ಕಾರಣ ಲ್ಯಾಂಡ್ ಆರ್ಮಿಯಿಂದ 4.02 ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಆದರೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿ ನಾಲ್ಕು ವರ್ಷ ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ.
ಒಂದು ವೇಳೆ ಸರಕಾರ ಅನುದಾನ ಬಿಡುಗಡೆ ಮಾಡಿದ್ದರೆ, ಇಷ್ಟೊತ್ತಿಗಾಗಲೇ ಜಿಲ್ಲಾ ರಂಗಮಂದಿರ ಪೂರ್ಣಗೊಂಡು ಸಾರ್ವಜನಿಕರಿಗೆ ಉಪಯೋಗ ಆಗುತ್ತಿತ್ತು ಎಂದು ರಂಗಾಸಕ್ತರ ಅಭಿಪ್ರಾಯವಾಗಿದೆ.
ಅವೈಜ್ಞಾನಿಕ ರಂಗ ಮಂದಿರ
ರಂಗ ಮಂದಿರ ನಿರ್ಮಾಣದ ಸ್ಥಳವೇ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ಪಕ್ಕದಲ್ಲಿ ರೈಲು ಹಳಿಯಿದೆ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಅಧಿಕಾರಿಗಳ ಅಸಡ್ಡೆತನ ಕಂಡು ಬರುತ್ತಿದೆ.
| ಮಲ್ಲಿಕಾರ್ಜುನ ಕಡಕೋಳ,
ರಂಗ ಸಮಾಜದ
ಮಾಜಿ ಸದಸ್ಯರು
ಜಿಲ್ಲಾ ರಂಗಮಂದಿರದ ಮುಂದುವರಿದ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮೂಲಕ ಅಗತ್ಯ ಅನುದಾನ ಬಿಡುಗಡೆ ಮಾಡಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರಕಾರದಿಂದ ಅನುದಾನ ಬಂದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು.
| ರವಿಚಂದ್ರ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ