ದಾವಣಗೆರೆ: ನಿರ್ವಹಣೆ ಇಲ್ಲದೆ ಪಾಳುಬಿದ್ದ ಇ-ಸ್ಮಾರ್ಟ್ ಶೌಚಾಲಯಗಳು

Update: 2023-11-28 07:10 GMT

ದಾವಣಗೆರೆ,ನ.27: ಸಾರ್ವಜನಿಕರ ಉಪಯೋಗಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅನುಷ್ಠಾನಗೊಳಿಸಿದ್ದ ಇ-ಸ್ಮಾರ್ಟ್ ಶೌಚಾಲಯ ಯೋಜನೆ ವಿಫಲಗೊಂಡಿದ್ದು, ಬಳಕೆಯಿಲ್ಲದೆ ಪಾಳು ಬಿದ್ದು ನಿಂತಿವೆ ಎಂದು ಸಾರ್ವಜನಿಕರ ಆರೋಪವಾಗಿದೆ.

ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್‌ಸಿಟಿ ಯೋಜನೆ ಜಾರಿಗೊಳಿಸಿ ಆಯ್ಕೆ ಮಾಡಿದ ದೇಶದ ಪ್ರಮುಖ ಮಹಾನಗರಗಳಲ್ಲಿ ದಾವಣಗೆರೆಯೂ ಒಂದು.

ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೈಗೊಂಡ ಇ-ಶೌಚಾಲಯವೂ ಒಂದಾಗಿದೆ. ಸ್ಮಾರ್ಟ್‌ಸಿಟಿಯ ಕಲ್ಪನೆ ಹೊಸದಾದರೂ ಜನರಿಗೆ ಇ-ಶೌಚಾಲಯ ಇಷ್ಟವಾಯಿತೋ ಗೊತ್ತಿಲ್ಲ, ಸರಿಯಾದ ನಿರ್ವಹಣೆ, ಸಾರ್ವಜನಿಕ ಬಳಕೆ ಇಲ್ಲದೆ ತುಕ್ಕು ಹಿಡಿದಿವೆ. ಗಿಡಗಳು ಬೆಳೆದು ಪಾಚಿ ಕಟ್ಟಿದ ಶೌಚಾಲಯಗಳಾಗಿವೆ.

ಮೊದಲ ಹಂತದಲ್ಲಿ ಅನುಷ್ಠಾನ: ಮೊದಲ ಹಂತದಲ್ಲಿ ಭಾರತೀಯ ಶೈಲಿಯ ಮತ್ತು ಪಾಶ್ಚಾತ್ಯ ಶೈಲಿಯ ಪ್ರತಿ ಇ-ಶೌಚಾಲಯ ನಿರ್ಮಾಣಕ್ಕೆ 12,59,540 ರೂ. ನಂತೆ ಒಟ್ಟು 2,26,71, 720 ರೂ.ಗೆ ತಮಿಳುನಾಡು ಮೂಲದ ಈರಂ ಕಂಪನಿ ಟೆಂಡರ್ ಪಡೆದು ನಗರದ 18 ಸಾರ್ವಜನಿಕ ಪಾರ್ಕ್‌ಗಳಲ್ಲಿ ಇ.ಶೌಚಾಲಯ ನಿರ್ಮಾಣ ಮಾಡಲಾಗಿದೆ.

ಎರಡನೇ ಹಂತದಲ್ಲಿ ಅನುಷ್ಠಾನ: ಎರಡನೇ ಹಂತದಲ್ಲಿ ತಮಿಳುನಾಡು ಮೂಲದ ಕುಬೇಂದ್ರನ್ ಕಂಪನಿಗೆ ಟೆಂಡರ್ ನೀಡಿ 10,72,000 ರೂ.ನ ಪ್ರತಿ ಇ-ಶೌಚಾಲಯಗಳನ್ನು ನಗರದ 40 ಸಾರ್ವಜನಿಕ ಪಾರ್ಕ್‌ಗಳಲ್ಲಿ ನಿರ್ಮಾಣ ಮಾಡಲಾಗಿದೆ. ಮೊದಲ ಮತ್ತು ಎರಡನೇ ಹಂತಗಳಲ್ಲಿ ಒಟ್ಟು 4,28,80,000 ರೂ. ಖರ್ಚು ಮಾಡಿ ಇ-ಶೌಚಾಲಯ ನಿರ್ಮಾಣ ಮಾಡಲಾಗಿದೆ.

ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಇ-ಶೌಚಾಲಯಗಳು ತುಕ್ಕು, ಧೂಳು ಹಿಡಿದು ಉಪಯೋಗಕ್ಕೆ ಬಾರದೆ ಸಾರ್ವಜನಿಕರ ಹಣ ಪೋಲಾಗುವಂತೆ ಆಗಿದೆ. ಪ್ರತಿ ಇ-ಶೌಚಾಲಯದಲ್ಲಿ ‘ಕೊನೆಗೂ ನಿಮ್ಮ ನಿರೀಕ್ಷೆಗೂ ಮೀರಿ ಶುಚಿಯಾಗಿರುವ ಶೌಚಾಲಯ ಕಾಣಬಹುದು’ ಎಂದು ಟ್ಯಾಗ್ ಲೈನ್ ಹಾಕಲಾಗಿದೆ. ಆದರೆ ಇಲ್ಲಿ ಎಲ್ಲವೂ ವಿರುದ್ಧವಾಗಿದೆ. ನಗರದ 58 ಸಾರ್ವಜನಿಕ ಪಾರ್ಕ್‌ಗಳಲ್ಲಿ ನಿರ್ಮಿಸಿರುವ ಬಹುತೇಕ ಶೌಚಾಲಯಗಳು ಉಪಯೋಗಕ್ಕೆ ಬಾರದಾಗಿವೆ. ಈ ಶೌಚಾಲಯಗಳಿಗೆ ಹೋಗಿ ಬಾಗಿಲು ತೆರೆದರೆ ಸಾಕು ದುರ್ವಾಸನೆ ಬೀರುತ್ತವೆ. ಶೌಚಾಲಯಗಳ ಸುತ್ತ ಕಸದ ರಾಶಿ, ಶೌಚಾಲಯಗಳಲ್ಲಿ ಕಿತ್ತು ಬಿದ್ದಿರುವ ವೈರ್‌ಗಳು, ನೀರಿನ ಬಾಟಲ್‌ಗಳು ಬಿದ್ದಿರುವುದೇ ಕಂಡು ಬರುತ್ತಿವೆ.

ಒಟ್ಟಾರೆ ಸಾರ್ವಜನಿಕರ ಉಪಯೋಗಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಇ-ಶೌಚಾಲಯ ನಿರ್ಮಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸಾರ್ವಜನಿಕರು ಗಂಭೀರವಾಗಿ ಆರೋಪಿಸಿದ್ದಾರೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಇ-ಶೌಚಾಲಯ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಇ-ಶೌಚಾಲಯ ಅನುಷ್ಠಾನದಿಂದ ಉಪಯೋಗವಿಲ್ಲ, ಸರಿಯಾಗಿ ನಿರ್ವಹಣೆ ಇರುವುದಿಲ್ಲ, ಇದಕ್ಕೆ ಹಾಕುವ ಹಣದಿಂದ ಒಬ್ಬ ವ್ಯಕ್ತಿಗೆ ಉದ್ಯೋಗ ಕೊಡಬಹುದಿತ್ತು. ನಾಗರಿಕ ಶೌಚಾಲಯಗಳನ್ನು ನಿರ್ಮಿಸಿ ಒಬ್ಬನಿಗೆ ಉದ್ಯೋಗ ಕೊಟ್ಟಿದ್ದರೆ, ಸೂಕ್ತವಾಗಿ ನಿರ್ವಹಣೆ ಮಾಡುತ್ತಿದ್ದ. ಈಗ ನೀವು ಕೆಲಸ ಕಿತ್ತುಕೊಂಡು ಹಣ ಪೋಲು ಮಾಡಿದ್ದೀರಿ ಎಂದು ನಡೆದ ಸ್ಮಾರ್ಟ್‌ಸಿಟಿ ಸಭೆಯಲ್ಲಿ ಹೇಳಿದ್ದೆ. ಇದು ವಿಫಲಗೊಂಡ ಯೋಜನೆಯಾಗಿದೆ.

► ಪ್ರಸನ್ನಕುಮಾರ್,

ವಿಪಕ್ಷ ನಾಯಕ, ಮಹಾನಗರಪಾಲಿಕೆ.

ಕೋಟ್ಯಂತರ ರೂ. ವೆಚ್ಚದಲ್ಲಿ ಇ-ಶೌಚಾಲಯ ನಿರ್ಮಿಸಿ ಸಾರ್ವಜನಿಕ ಬಳಕೆಗೆ ನೀಡುತ್ತಾರೆ. ಅವುಗಳ ಶಾಶ್ವತ ನಿರ್ವಹಣೆ ಇಲ್ಲದೆ ಯೋಜನೆ ಅನುಷ್ಠಾನಗೊಳಿಸಿ ಕೇವಲ ಒಂದೆರಡು ವರ್ಷದಲ್ಲಿ ಆ ಯೋಜನೆ ವಿಫಲವಾಗಿ ಸಾರ್ವಜನಿಕ ಹಣ ಪೋಲಾಗುತ್ತಿದೆ. ಈ ಬಗ್ಗೆ ಯಾವ ಸರಕಾರಗಳೂ ಕ್ರಮ ತೆಗೆದುಕೊಳ್ಳುವುದಿಲ್ಲ.

► ಹನುಮಂತಪ್ಪ,

ಆಟೊ ಚಾಲಕ, ದಾವಣಗೆರೆ.

ಈಗ ಇರುವ ಶೌಚಾಲಯಗಳೇ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಇಂತಹ ವೇಳೆ ಇ-ಶೌಚಾಲಯ ಅಗತ್ಯವಿರಲಿಲ್ಲ. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿ ಇ-ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಆದರೆ ಜನರ ಬಳಕೆಯಾಗದೇ ಪಾಳು ಬಿದ್ದಿದೆ.

► ಎಲ್.ಎಚ್.ಅರುಣಕುಮಾರ್, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ

ಕಂಪೆನಿಯ ವಿರುದ್ಧ ಕ್ರಮ

ಸ್ಮಾರ್ಟ್‌ಸಿಟಿ ಯೋಜನೆಯಡಿ ಸಾರ್ವಜನಿಕ ಪಾರ್ಕ್‌ಗಳಲ್ಲಿ ಮೊದಲ ಹಂತದಲ್ಲಿ 18, ಎರಡನೇ ಹಂತದಲ್ಲಿ 40 ಸ್ಮಾರ್ಟ್ ಇ-ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳ ಸರಿಯಾದ ನಿರ್ವಹಣೆ ಇಲ್ಲದೆ ಸಾರ್ವಜನಿಕ ಬಳಕೆಗೆ ಬಾರದಾಗಿವೆ. ಹೀಗಾಗಿ ಸರಿಯಾಗಿ ನಿರ್ವಹಣೆ ಮಾಡದ ತಮಿಳುನಾಡು ಮೂಲದ ಈರಂ ಕಂಪನಿಗೆ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೇ ಡಿಪಾಜಿಟ್ ಮಾಡಿರುವ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.

ಎರಡನೇ ಹಂತದಲ್ಲಿ ತಮಿಳುನಾಡು ಮೂಲದ ಕುಬೇಂದ್ರನ್ ಕಂಪನಿ ಟೆಂಡರ್ ಪಡೆದಿತ್ತು. ಅವರು ಕೂಡ ಇ-ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಆ ಕಂಪನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ತಿಳಿಸಿದ್ದಾರೆ.

ಹೊರ ಗುತ್ತಿಗೆ ನೀಡಲಿ

ಇ-ಶೌಚಾಲಯ ನಿರ್ವಹಣೆ ಸರಿಯಾಗಿಲ್ಲ. ಇದರಿಂದ ಪಾಳು ಬಿದ್ದಿರಬಹುದು. ಆದ್ದರಿಂದ ಸ್ಮಾರ್ಟ್ ಸಿಟಿಯವರು ಹೊರಗುತ್ತಿಗೆ ನೀಡಿ ಸಮರ್ಪಕ ನಿರ್ವಹಣೆ ಮಾಡಿದರೆ ಜನರು ಬಳಕೆ ಮಾಡಲಿದ್ದಾರೆ ಎಂದು ದಾವಣಗೆರೆ ಪಾಲಿಕೆ ಸದಸ್ಯ ಗಡಿಗುಡಾಳ ಮಂಜುನಾಥ ಅವರ ಅಭಿಪ್ರಾಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರಕಾಶ್ ಎಚ್. ಎನ್.

contributor

Similar News