ಮಂಕಾಗಿರುವ ಏಕದಿನ ಕ್ರಿಕೆಟ್ : ಮಿಂಚುತ್ತಿರುವ ಕ್ರಿಕೆಟ್ ರಾಜಕೀಯ

Update: 2023-10-25 06:28 GMT
Editor : Naufal | By : ಆರ್. ಜೀವಿ

Photo : AFP

ಈ ಸಲ ವಿಶ್ವಕಪ್ ಕ್ರಿಕೆಟ್ ಯಾವ ವೈಭವವೂ ಇಲ್ಲದೆ, ಸಡಗರವೂ ಇಲ್ಲದೆ ಶುರುವಾಯಿತು. ಅಷ್ಟು ಮಾತ್ರವಲ್ಲ, ಅಭಿಮಾನಿಗಳು ತೋರಿಸುವ ಆಸಕ್ತಿಯೂ ತೀರಾ ಕುಗ್ಗಿರುವಂತೆ ಕಾಣಿಸುತ್ತಿದೆ. ವಿಶ್ವಕಪ್ ಆಯೋಜನೆಯಲ್ಲಿನ ಅವ್ಯವಸ್ಥೆಯೂ ಭಾರೀ ಟೀಕೆಗೆ ಗುರಿಯಾಗಿದೆ. ಏಕೆ ಹೀಗಾಗುತ್ತಿದೆ? ಏಕದಿನ ಕ್ರಿಕೆಟ್ ಬಗ್ಗೆಯೇ ಉತ್ಸಾಹ ಇಲ್ಲವಾಗುತ್ತಿದೆಯೇ? ಟಿ-ಟ್ವೆಂಟಿ, ಐಪಿಎಲ್ ಎದುರು ಈ ಮಾದರಿ ತೀರಾ ಮಂಕಾಗಿದೆಯೇ?

ಈಸಲದ ಐಸಿಸಿ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಭಾರತದಲ್ಲಿ ಶುರುವಾಗಿದೆ. ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಸಲದ ಪಂದ್ಯಾವಳಿಯನ್ನು ಆಯೋಜಿಸಿರುವುದು ಬಿಸಿಸಿಐ.

ವಿಶೇಷವೆಂದರೆ, 48 ವರ್ಷಗಳ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೇ ಭಾರತ ಪೂರ್ಣ ಪ್ರಮಾಣದಲ್ಲಿ ಆಯೋಜಿಸಿರುವುದು ಇದೇ ಮೊದಲ ಬಾರಿ. ಈ ಹಿಂದೆ ಕೂಡ ಮೂರು ಬಾರಿ ಭಾರತ ಟೂರ್ನಿಗಳ ಆತಿಥ್ಯ ವಹಿಸಿದ್ದಾಗ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾಗಳ ಸಹಭಾಗಿತ್ವ ಇತ್ತು.

ಭಾರತ ಮೊದಲ ಬಾರಿಗೆ ಆತಿಥ್ಯ ವಹಿಸಿದ್ದು 1987ರಲ್ಲಿ. ವಿಶ್ವಕಪ್ ಮೊದಲ ಬಾರಿಗೆ ಇಂಗ್ಲೆಂಡ್ನಿಂದ ಹೊರಗೆ ನಡೆದ ಆ ವರ್ಷ. ಭಾರತದ ಜೊತೆ ಪಾಕಿಸ್ತಾನದ ಸಹಭಾಗಿತ್ವವಿತ್ತು. ಎರಡನೇ ಬಾರಿ ಭಾರತ ವಿಶ್ವಕಪ್ ಆಯೋಜಿಸಿದ್ದು 1996ರಲ್ಲಿ. ಆಗ ಭಾರತ, ಪಾಕಿಸ್ತಾನ ಜೊತೆ ಶ್ರೀಲಂಕಾವೂ ಆತಿಥ್ಯಕ್ಕೆ ಕೈಜೋಡಿಸಿತ್ತು. ಮೂರನೇ ಬಾರಿ 2011ರಲ್ಲಿ ಭಾರತ ಆತಿಥ್ಯ ವಹಿಸಿದ್ದಾಗ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸಹಭಾಗಿತ್ವವಿತ್ತು.

ಈ ಬಾರಿ ಬಿಸಿಸಿಐ ವಿಶ್ವಕಪ್ ಆಯೋಜನೆಯ ಪೂರ್ಣ ಹೊಣೆ ಹೊತ್ತಿದೆ. ಆದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಏಕದಿನ ವಿಶ್ವಕಪ್ ನಿಜವಾಗಿಯೂ ಎತ್ತ ಸಾಗಿದೆ ಎಂದು ನೋಡಿದರೆ ನಿರಾಸೆ ಮೂಡುತ್ತದೆ.

2023ರ ವಿಶ್ವಕಪ್ ಅಕ್ಟೋಬರ್ 5ರಂದು ಶುರುವಾಯಿತು. ಉದ್ಘಾಟನಾ ಪಂದ್ಯ ನಡೆದದ್ದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ. ಆದರೆ, 1,32,000 ವೀಕ್ಷಕರಿಗೆ ಆಸನ ಸಾಮರ್ಥ್ಯವನ್ನು ಹೊಂದಿರುವ ಸ್ಟೇಡಿಯಂ ಬಿಕೋ ಎನ್ನುತ್ತಿತ್ತು. ಇಷ್ಟು ದೊಡ್ಡ ಕ್ರೀಡಾಕೂಟಕ್ಕೆ ಸೂಕ್ತ ಉದ್ಘಾಟನಾ ಸಮಾರಂಭವನ್ನೂ ಬಿಸಿಸಿಐ ನಡೆಸಿರಲಿಲ್ಲ. ನೇರವಾಗಿ ಮೊದಲ ಪಂದ್ಯದಿಂದಲೇ ವಿಶ್ವಕಪ್ ಶುರುವಾಯಿತು. ಕಡೆಗೆ ಪಂದ್ಯ ನೋಡುವುದಕ್ಕೆ ವೀಕ್ಷಕರೂ ಇರಲಿಲ್ಲ. ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದ ಉದ್ಘಾಟನಾ ಪಂದ್ಯದ ವೇಳೆ ಸಂಪೂರ್ಣ ಖಾಲಿ ಖಾಲಿಯಾಗಿದ್ದ ಸ್ಟೇಡಿಯಂನ ಫೋಟೋಗಳು ಎಲ್ಲೆಡೆ ವೈರಲ್ ಆಗಿ, ಬಿಸಿಸಿಐ ವೈಫಲ್ಯ ಭಾರೀ ಟೀಕೆಗೆ ತುತ್ತಾಯಿತು.

ಇದು ಉದ್ಘಾಟನೆಗೆ ಮಾತ್ರ ಸಂಬಂಧಿಸಿದ ಅವಾಂತರವಾಗಿರಲಿಲ್ಲ. ವಿಶ್ವಕಪ್ ಆಯೋಜನೆಯ ಉದ್ದಕ್ಕೂ ಬಿಸಿಸಿಐ ಮಾಡಿರುವ ಎಡವಟ್ಟು ಕಣ್ಣಿಗೆ ರಾಚುವಷ್ಟಿದೆ. ಸ್ಟೇಡಿಯಂ ಸಾಮರ್ಥ್ಯದ ಶೇ.10ರಷ್ಟು ಪ್ರೇಕ್ಷಕರು ಎಂದುಕೊಂಡರೂ, 13,200 ಮಂದಿ ಸ್ಟೇಡಿಯಂನಲ್ಲಿ ಇರಬೇಕಿತ್ತು. ಅಂತರ್ರಾಷ್ಟ್ರೀಯ ಪಂದ್ಯವೊಂದಕ್ಕೆ ಸೇರುವ ಸರಾಸರಿ ಪ್ರೇಕ್ಷಕರ ಸಂಖ್ಯೆ ಅದು. ಆದರೆ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯಕ್ಕೆ ಇದ್ದದ್ದು ಕೇವಲ 3ರಿಂದ 4 ಸಾವಿರ ಜನ, ಅಂದರೆ ಕೇವಲ ಶೇ.3ರಷ್ಟು ಮಂದಿ ಎಂದು ವರದಿಗಳು ಹೇಳುತ್ತಿದ್ದವು.

2023ರ ವಿಶ್ವಕಪ್ ಆರಂಭಕ್ಕೂ ಮೊದಲೇ ಬಿಸಿಸಿಐ ಹಲವು ವಿವಾದಗಳಿಗೆ ತುತ್ತಾಗಿತ್ತು. ಒಂದನೆಯದಾಗಿ, ವಿಶ್ವಕಪ್ ಆರಂಭಕ್ಕೆ ಸಾಮಾನ್ಯವಾಗಿ ಒಂದು ವರ್ಷ ಮೊದಲೇ ಪ್ರಕಟಗೊಳ್ಳುವ ಟೂರ್ನಿಯ ವೇಳಾಪಟ್ಟಿ ಈ ಬಾರಿ ಕೆಲವೇ ತಿಂಗಳುಗಳು ಬಾಕಿ ಇರುವಾಗಲೂ ಪ್ರಕಟಗೊಂಡಿರಲಿಲ್ಲ. ಆಯೋಜಕರು ಕಚ್ಚಾಟದಲ್ಲೇ ಮುಳುಗಿಹೋಗಿದ್ದರು.

ಎರಡನೆಯದಾಗಿ, ವಿಶ್ವಕಪ್ ಪಂದ್ಯಗಳ ಆತಿಥ್ಯ ಸಿಗದ ಕ್ರಿಕೆಟ್ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಬಿಸಿಸಿಐ ವಿಫಲವಾಗಿತ್ತು. ವಿಶ್ವಕಪ್ ಪಂದ್ಯಗಳ ಆತಿಥ್ಯ ಸಿಗದ್ದಕ್ಕೆ ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ಮೇಲೆ ಸಿಟ್ಟಾಗಿದ್ದವು. ಮೊಹಾಲಿ, ರಾಜ್ಕೋಟ್, ರಾಂಚಿ, ಇಂದೋರ್ ಸೇರಿ ಕೆಲ ಪ್ರಮುಖ ನಗರಗಳಿಗೆ ಪಂದ್ಯಗಳು ಕೈತಪ್ಪುತ್ತಿದ್ದಂತೆ ಆಯಾ ರಾಜ್ಯ ಸಂಸ್ಥೆಗಳು ಬಹಿರಂಗವಾಗಿಯೇ ಬಿಸಿಸಿಐ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದವು.

ಮೂರನೆಯದಾಗಿ, ಬಿಸಿಸಿಐ ಒಮ್ಮೆಯಲ್ಲ, ಹಲವು ಬಾರಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿತು. ಇದರಿಂದಾಗಿ, ತಂಡಗಳಿಗೆ ಮಾತ್ರವಲ್ಲ ಪಂದ್ಯ ವೀಕ್ಷಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಅಭಿಮಾನಿಗಳಿಗೂ ಸಮಸ್ಯೆಯಾಯಿತು. ಒಂದೋ ಎರಡೋ ಪಂದ್ಯಗಳಲ್ಲ, ಐದು ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬದಲಿಸಿತ್ತು.

ನಾಲ್ಕನೆಯದಾಗಿ, ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟ ಗೊಂದಲದ ಗೂಡಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಕಡೆಗೆ ಟಿಕೆಟ್ಗಳ ಆನ್ಲೈನ್ ಮಾರಾಟಕ್ಕೆ ಬಿಸಿಸಿಐ ಮುಂದಾಯಿತು. ವೆಂಕಟೇಶ್ ಪ್ರಸಾದ್ ಸೇರಿದಂತೆ ಕೆಲ ಮಾಜಿ ಹಿರಿಯ ಆಟಗಾರರು ಕೂಡ ಬಹಿರಂಗವಾಗಿಯೇ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೀಗೆಲ್ಲ ಒಂದರ ಬೆನ್ನಲ್ಲೊಂದು ಯಡವಟ್ಟು ಮಾಡಿಕೊಂಡಿದ್ದ ಬಿಸಿಸಿಐ ಮತ್ತು ಬಿಸಿಸಿಐ ಮೇಲೆ ಪರೋಕ್ಷ ಹಿಡಿತವಿರುವ ಬಿಜೆಪಿಯ ನಡೆಗಳು ಎಲ್ಲವನ್ನೂ ಹಾಸ್ಯಾಸ್ಪದವಾಗಿಸಿಬಿಟ್ಟವು. ಇದೆಲ್ಲಕ್ಕೂ ಅಮಿತ್ ಶಾ ಪುತ್ರ, ಬಿಸಿಸಿಐಯನ್ನು ಸಂಪೂರ್ಣ ನಿಯಂತ್ರಿಸುತ್ತಿರುವ ಅದರ ಕಾರ್ಯದರ್ಶಿ ಜಯ್ ಶಾ ದುರಾಡಳಿತವೇ ಕಾರಣ ಎಂದು ಅಭಿಮಾನಿಗಳು ಕಿಡಿ ಕಾರಿದ್ದರು. ಪ್ರಧಾನಿ ಮೋದಿ ಹಾಗೂ ಬಿಜೆಪಿಯವರು ಕ್ರೀಡೆಯಲ್ಲೂ ಹಸ್ತಕ್ಷೇಪ ಮಾಡಿದರೆ ಈ ರೀತಿಯ ಪರಿಣಾಮ ಉಂಟಾಗದೇ ಇರುತ್ತದೆಯೇ ಎಂದೂ ಕೆಲವರು ಪ್ರಶ್ನಿಸಿದ್ದರು. ಮೋದಿ ರಾಜಕಾರಣಕ್ಕೆ ವೇದಿಕೆಯಾಗುವ ಮೂಲಕವೇ ಹೆಸರು ಬದಲಿಸಿಕೊಂಡು ಉದ್ಘಾಟನೆಗೊಂಡಿದ್ದ ಸ್ಟೇಡಿಯಂನಲ್ಲಿ ವಿಶ್ವಕಪ್ ಪಂದ್ಯದ ಹೊತ್ತಲ್ಲೂ ಬಿಜೆಪಿಯ ಅದೇ ರಾಜಕಾರಣ ಮುಂದುವರಿದಿದೆ ಎಂಬ ಟೀಕೆಗಳು ವ್ಯಕ್ತವಾದವು.

ಇದೆಲ್ಲ ಒಂದು ಭಾಗವಾದರೆ, ಏಕದಿನ ಕ್ರಿಕೆಟ್ ಎಂಬುದೇ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆಯೇ, ಹೊಸ ಮಾದರಿಯ ಕ್ರಿಕೆಟ್ ಪಂದ್ಯಗಳ ಎದುರಲ್ಲಿ ಮಂಕಾಗಿಬಿಟ್ಟಿದೆಯೇ ಎಂಬ ಪ್ರಶ್ನೆಯೂ ಇರುವುದು ಮತ್ತೊಂದು ಮುಖ್ಯ ವಿಚಾರ.

20 ತಂಡಗಳು ಭಾಗವಹಿಸುತ್ತಿದ್ದ ಈ ಪಂದ್ಯಾವಳಿಯಲ್ಲಿ ಕಳೆದ ಪಂದ್ಯಾವಳಿ ಹೊತ್ತಿಗೆ 14 ತಂಡಗಳಷ್ಟೇ ಇದ್ದವು. ಈ ಬಾರಿಯಂತೂ 10 ತಂಡಗಳಿಗೆ ಸೀಮಿತವಾಗಿದೆ. ಆ 10 ತಂಡಗಳೆಂದರೆ, ಅಘ್ಘಾನಿಸ್ತಾನ, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ.

ಈ ಸಲ, ಭಾರತ-ಪಾಕಿಸ್ತಾನ ಪಂದ್ಯ ಸೇರಿದಂತೆ ಕೆಲವೇ ಪಂದ್ಯಗಳು ಮಾತ್ರವೇ ಅಭಿಮಾನಿಗಳನ್ನು ಸೆಳೆದಿರುವುದು ಬಿಟ್ಟರೆ, ಉಳಿದಂತೆ ನೀರಸ ಪ್ರತಿಕ್ರಿಯೆಯೇ ಕಾಣಿಸುತ್ತಿದೆ. ಆಘಾತಕಾರಿ ಎನ್ನುವಷ್ಟು ಮಟ್ಟಿಗೆ ಖಾಲಿ ಖಾಲಿ ಕ್ರೀಡಾಂಗಣಗಳ ದೃಶ್ಯಗಳು ಏಕದಿನ ಕ್ರಿಕೆಟ್ ಬಗ್ಗೆ ಆಸಕ್ತಿ ತಗ್ಗುತ್ತಿರುವುದರ ಸೂಚನೆಯ ಹಾಗಿದೆ.

ಕ್ರಿಕೆಟ್ ಬರಹಗಾರ ಡೇವಿಡ್ ಹಾಪ್ಸ್ ಮಾಡಿರುವ ಟೀಕೆಯನ್ನು ಗಮನಿಸಬೇಕು. ರಗ್ಬಿ ವಿಶ್ವಕಪ್ ವಿಶ್ವ ಉತ್ಸವದಂತೆ ಭಾಸವಾಗುತ್ತದೆ. ಆದರೆ ಕ್ರಿಕೆಟ್ ವಿಶ್ವಕಪ್ ಟಿವಿ ಮತ್ತು ಕೆಲ ಭಾರತೀಯ ಅಭಿಮಾನಿಗಳಿಗಾಗಿ ಮಾತ್ರ ಏರ್ಪಡಿಸಲಾದ ಪಂದ್ಯಾವಳಿಯಂತೆ ಭಾಸವಾಗುತ್ತಿದೆ. ಪಂದ್ಯಗಳ ವೇಳಾಪಟ್ಟಿಯನ್ನೂ ಕೆಲವೇ ವಾರಗಳ ಹಿಂದೆ ಖಚಿತಪಡಿಸಲಾಯಿತು ಎಂಬ ಅವರ ಟೀಕೆ, ಬಿಸಿಸಿಐನ ಹೊಣೆಗೇಡಿತನವನ್ನೂ ಲೇವಡಿ ಮಾಡಿದೆ.

50 ಓವರ್ಗಳ ಕ್ರಿಕೆಟ್ ವಿಶ್ವಕಪ್ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ನಡೆಯುವುದರಿಂದ ಅದು ಅಭಿಮಾನಿಗಳಲ್ಲಿ ಆಸಕ್ತಿ ಉಳಿಸಿಲ್ಲ ಎಂಬ ಮಾತುಗಳೂ ಇವೆ. ಕ್ರಿಕೆಟ್ನ ಹೊಸ ಮಾದರಿಗಳು ಬಂದಿರುವುದು ಕೂಡ ಏಕದಿನ ಕ್ರಿಕೆಟ್ಗೆ ದೊಡ್ಡ ಸವಾಲಾದಂತಿದೆ. ಟಿ 20ಯಂತಹ ಚುರುಕಾದ, ಹೆಚ್ಚಿನ ವೇಗ ಮತ್ತು ಅನಿರೀಕ್ಷಿತ ಸ್ವರೂಪದ ಮಾದರಿ ಅಭಿಮಾನಿಗಳನ್ನು ಸೆಳೆಯುತ್ತಿದೆ. ಭಾರತದಲ್ಲಿ ಐಪಿಎಲ್ ಪಂದ್ಯಗಳು ಹೊಸ ಆಕರ್ಷಣೆಯಾಗಿವೆ. ಐಪಿಎಲ್ ತಂಡಗಳಿಗೆ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಚೆನ್ನೈ, ಬೆಂಗಳೂರಿನಂತಹ ಐಪಿಎಲ್ ತಂಡಗಳ ಪಂದ್ಯಗಳಿಗೆ ರಾಷ್ಟ್ರೀಯ ತಂಡಕ್ಕಿಂತ ಹೆಚ್ಚು ಕ್ರೇಜ್ ಕಾಣಲು ಸಿಗುತ್ತದೆ. ಇವುಗಳ ನಡುವೆ ಏಕದಿನ ಕ್ರಿಕೆಟ್ ತನ್ನ ಮೋಡಿಯನ್ನು ಕಳೆದುಕೊಂಡಿದೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಇದನ್ನು ನೀರಸವಾದ, ಏಕತಾನತೆಯ ಮತ್ತು ಫಲಿತಾಂಶವನ್ನು ಊಹಿಸಬಹುದಾದ ಆಟ ಎಂದು ಹೇಳಿದ್ದಾರೆ. 50 ಓವರ್ ಕ್ರಿಕೆಟ್ ತುಂಬಾ ನೀರಸವಾಗಿದೆ. ವಿಶ್ವಕಪ್ ಪಂದ್ಯಗಳನ್ನು ನೋಡುವವರಿಲ್ಲ. ಅದನ್ನು ನಿಲ್ಲಿಸಿಬಿಡುವುದೇ ಒಳ್ಳೆಯದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.

ಕ್ರಿಕೆಟ್ ಹಾಗೂ ಕ್ರಿಕೆಟಿಗರು ಇಷ್ಟೊಂದು ಜನಪ್ರಿಯರಾಗಿರುವುದು ಅದರ ಜೊತೆ ಇರುವ ಆರ್ಥಿಕ ಲಾಭ ಹಾಗೂ ಗ್ಲಾಮರ್ ಕಾರಣಕ್ಕೆ. ಕ್ರಿಕೆಟ್ ಪಂದ್ಯಾಟಗಳಿಗೆ ಸಿಗುವ ಪ್ರಾಯೋಜಕತ್ವ, ಪಂದ್ಯಗಳ ಪ್ರಸಾರದಿಂದ ಬರುವ ಕೋಟಿ ಕೋಟಿ ರೂ. ಆದಾಯ ಹಾಗೂ ಕ್ರಿಕೆಟಿಗರಿಗೆ ಸಿಗುವ ದೊಡ್ಡ ಮೊತ್ತದ ಸಂಭಾವನೆ ಇವೆಲ್ಲವೂ ಕ್ರಿಕೆಟ್ನ ಆಕರ್ಷಣೆ ಹೆಚ್ಚಿಸಿವೆ.

2023ರಿಂದ 2028ರವರೆಗೆ ಭಾರತದಲ್ಲಿ ನಡೆಯುವ ಭಾರತ ಕ್ರಿಕೆಟ್ ತಂಡದ ಅಂತರ್ರಾಷ್ಟ್ರೀಯ ಪಂದ್ಯಗಳ ಟಿವಿ ಹಾಗೂ ಡಿಜಿಟಲ್ ಹಕ್ಕುಗಳನ್ನು ಮುಖೇಶ್ ಅಂಬಾನಿಯ ವಯಾಕಾಮ್ 18 ಖರೀದಿಸಿದ್ದು 5,963 ಕೋಟಿ ರೂಗೆ. ಅಂದರೆ, ಪ್ರತೀ ಪಂದ್ಯಕ್ಕೆ ಅದು ತೆರುವ ಬೆಲೆ 67.7 ಕೋಟಿ ರೂ.!

ಈಗ ನಡೆಯುತ್ತಿರುವ ವಿಶ್ವಕಪ್ ಪಂದ್ಯಗಳ ಪ್ರಸಾರದ ಹಕ್ಕು ಪಡೆದಿರುವ ಡಿಸ್ನಿ ಸ್ಟಾರ್, ಪ್ರಾಯೋಜಕತ್ವ ಹಾಗೂ ಜಾಹೀರಾತುಗಳ ಮೂಲಕ ಸಂಪಾದಿಸುವುದು ಸುಮಾರು 4,000 ಕೋಟಿ ರೂ. ಇದು ಈವರೆಗಿನ ಐಸಿಸಿ ಪಂದ್ಯಾವಳಿಗಳಲ್ಲೇ ಅತಿ ಹೆಚ್ಚು ಸಂಪಾದನೆ ಎಂದು ಹೇಳಲಾಗುತ್ತಿದೆ.

ಹಾಗಾಗಿ, ಈ ಪರಿ ಆದಾಯ ಬರುತ್ತಿರುವವರೆಗೆ ಐಸಿಸಿ ಹಾಗೂ ಐಸಿಸಿಯನ್ನೇ ನಿಯಂತ್ರಿಸಬಲ್ಲ ಭಾರತದ ಬಿಸಿಸಿಐ ಏಕದಿನ ಕ್ರಿಕೆಟ್ ಅನ್ನು ಹೇಗಾದರೂ ಉಳಿಸಿಕೊಳ್ಳುತ್ತವೆ. ಆ ಆದಾಯಕ್ಕೆ ತೊಂದರೆ ಬರುವವರೆಗೆ ಏಕದಿನ ಕ್ರಿಕೆಟ್ ಮುಂದುವರಿಯಲಿದೆ. 

ಕ್ರಿಕೆಟ್ ಅಭಿಮಾನಿಗಳು ಹೊಸ ಫಾರ್ಮ್ಯಾಟ್ ಬಗ್ಗೆ ಹೆಚ್ಚು ಆಕರ್ಷಿತರಾಗುವುದರಿಂದ ಏಕದಿನ ಕ್ರಿಕೆಟ್ ತನ್ನ ವೈಭವ ಕಳೆದುಕೊಂಡಿರುವುದು ನಿಜವೇ ಆದರೂ, ಕ್ರಿಕೆಟ್ ಇಂದು ಭಾರತದಂತಹ ದೇಶದಲ್ಲಿ ಬರೀ ಕ್ರೀಡೆಯಾಗಿ ಉಳಿಯದೆ ರಾಜಕಾರಣವೂ ಆಗಿರುವುದು ಒಂದು ಅಪಾಯದ ಹಾಗೆ ತೋರುತ್ತಿದೆ.

ಬಿಸಿಸಿಐ ಗಳಿಕೆ, ಅದರ ಭ್ರಷ್ಟಾಚಾರ ಮತ್ತು ದರ್ಪಗಳೆಲ್ಲವೂ ಕ್ರಿಕೆಟ್ ಜೊತೆ ಬೆರೆತು, ಭಾರತದ ಮಟ್ಟಿಗಂತೂ ಕ್ರಿಕೆಟ್ನ ಸೊಗಸನ್ನು ಸಂಪೂರ್ಣ ಹಾಳುಗೆಡವಿಬಿಟ್ಟಿವೆ ಎಂಬ ಮತ್ತೊಂದು ಮುಖವನ್ನು ಮರೆಮಾಚಲು ಸಾಧ್ಯವಿಲ್ಲ.

ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸ

► ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅನ್ನು ಮೊದಲ ಬಾರಿಗೆ 1975ರಲ್ಲಿ ಇಂಗ್ಲೆಂಡ್ನಲ್ಲಿ ಆಯೋಜಿಸಲಾಯಿತು.

► ಇದು ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪಂದ್ಯಾವಳಿ.

► ಮೊದಲ ಮೂರು ವಿಶ್ವಕಪ್ ಪಂದ್ಯಾವಳಿಗಳಲ್ಲಿ 60 ಓವರ್ಗಳ ಪಂದ್ಯ ನಡೆದಿತ್ತು. 1987ರಲ್ಲಿ ಮೊದಲ ಬಾರಿಗೆ ಅದನ್ನು 50 ಓವರ್ಗಳಿಗೆ ಇಳಿಸಲಾಯಿತು. 

► ಮೊದಲ ಮೂರು ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸಿದ್ದು ಇಂಗ್ಲೆಂಡ್. ಆನಂತರ ಇತರ ದೇಶಗಳೂ ಇದನ್ನು ಆಯೋಜಿಸುವುದು ಶುರುವಾದ ಮೇಲೆ 1999 ಮತ್ತು 2019ರಲ್ಲಿ ಮಾತ್ರವೇ ಇಂಗ್ಲೆಂಡ್ ಆತಿಥ್ಯ ವಹಿಸಿದೆ.

► ವಿಶ್ವಕಪ್ ಟ್ರೋಫಿಯನ್ನು ಅತಿ ಹೆಚ್ಚು ಬಾರಿ ಗೆದ್ದಿರುವುದು ಆಸ್ಟ್ರೇಲಿಯ. ಈವರೆಗೆ ಅದು 7 ಬಾರಿ ಫೈನಲ್ ಪ್ರವೇಶಿಸಿ, 5 ಬಾರಿ ಗೆದ್ದಿದೆ. ವೆಸ್ಟ್ ಇಂಡೀಸ್ 3 ಬಾರಿ ಫೈನಲ್ ಪ್ರವೇಶಿಸಿ, 2 ಬಾರಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಭಾರತ 3 ಬಾರಿ ಫೈನಲ್ ಪ್ರವೇಶಿಸಿ, 2 ಬಾರಿ ಗೆದ್ದಿದೆ. ಮೊದಲ ಸಲ 1983ರಲ್ಲಿ ವಿಶ್ವಕಪ್ ಗೆದ್ದಿತು. ಆನಂತರ 28 ವರ್ಷಗಳ ಬಳಿಕ 2011ರಲ್ಲಿ ಭಾರತದಲ್ಲೇ ಟ್ರೋಫಿ ಭಾರತದ ಪಾಲಾಯಿತು. ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ ಒಂದು ಬಾರಿ ಹಾಗೂ ಮೂರು ಸಲ ಫೈನಲ್ ಪ್ರವೇಶಿಸಿದ್ದ ಶ್ರೀಲಂಕಾ ಒಂದು ಬಾರಿ ವಿಶ್ವಕಪ್ ಗೆದ್ದಿವೆ. ಇಂಗ್ಲೆಂಡ್ ಕೂಡ ಒಮ್ಮೆ ಮಾತ್ರ, ಅದೂ ವಿಶ್ವಕಪ್ ಶುರುವಾಗಿ 44 ವರ್ಷಗಳ ಬಳಿಕ 2019ರಲ್ಲಿ ಗೆದ್ದಿತು. ನಾಲ್ಕು ಬಾರಿ ಅದು ಫೈನಲ್ ಪ್ರವೇಶಿಸಿತ್ತು.

► ಈವರೆಗೆ ಆತಿಥ್ಯ ವಹಿಸಿರುವ ಇತರ ದೇಶಗಳೆಂದರೆ, ಆಸ್ಟ್ರೇಲಿಯ, ನ್ಯೂಝಿಲೆಂಡ್, ವೇಲ್ಸ್, ಐರ್ಲ್ಯಾಂಡ್, ನೆದರ್ಲ್ಯಾಂಡ್ಸ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆ, ವೆಸ್ಟ್ ಇಂಡೀಸ್. ಈ ಸಲ ಭಾರತದಲ್ಲಿ ನಡೆಯುತ್ತಿರುವುದು 13ನೇ ಏಕದಿನ ವಿಶ್ವಕಪ್ ಪಂದ್ಯಾವಳಿ.

► ಏಕದಿನ ಕ್ರಿಕೆಟ್ ವಿಶ್ವಕಪ್ ವಿಶ್ವದ 4ನೇ ಅತಿ ದೊಡ್ಡ ಪಂದ್ಯಾವಳಿಯಾಗಿದೆ. ಮೊದಲ ಮೂರು ಸ್ಥಾನಗಳಲ್ಲಿ ಫಿಫಾ ವಿಶ್ವಕಪ್ ಫುಟ್ಬಾಲ್, ಒಲಿಂಪಿಕ್ ಗೇಮ್ಸ್, ಯುಇಎಫ್ಎ ಚಾಂಪಿಯನ್ಸ್ ಲೀಗ್ ಇವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಜೀವಿ

contributor

Similar News