ಬೆಳೆ ವಿಮಾ ಪರಿಹಾರದಲ್ಲಿ ನಡೆದ ಅವ್ಯವಹಾರ ಪ್ರಕರಣವನ್ನು ಸಾಮಾನ್ಯ ರೈತರು ನಿರ್ವಹಿಸಿದ ಬಗೆ!
ಯಾವುದೇ ಒಂದು ಯೋಜನೆ ಜನರ ಹಿತಕ್ಕಾಗಿಯೇ ಜಾರಿಗೊಂಡಿರುತ್ತದೆ. ಅದು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲಾಗದ ಪಕ್ಷದಲ್ಲಿ ಆ ಯೋಜನೆ ಇದ್ದು ಪ್ರಯೋಜನವೇನು ಎಂಬ ಪ್ರಶ್ನೆ ಮೂಡುವುದು ಸಹಜ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು, ಪರಶುರಾಂಪುರ ಹೋಬಳಿ, ಪಿ.ಮಹದೇವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ರೈತರು ಕಳೆದ 2022-23ನೇ ಸಾಲಿನಲ್ಲಿ ಸುಮಾರು 1,200ಕ್ಕೂ ಹೆಚ್ಚು ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಬೆಳೆ ವಿಮೆ ಪಾವತಿಸಿದ ಅಷ್ಟೂ ಜನ ರೈತರಲ್ಲಿ ಕೇವಲ 161 ಜನ ರೈತರಿಗಷ್ಟೇ ಬೆಳೆ ವಿಮಾ ಪರಿಹಾರದ ಮೊತ್ತ ದೊರೆತಿದೆ. ಉಳಿದ ರೈತರಿಗೆ ಬೆಳೆ ವಿಮಾ ಪರಿಹಾರದ ಮೊತ್ತ ಸಿಗದೆ ಅನ್ಯಾಯವಾಗಿತ್ತು. ಬೆಳೆ ಪರಿಹಾರದ ಹಿನ್ನೆಲೆಯಲ್ಲಿ ಇದು ಪಡೆದುಕೊಂಡ ಪ್ರಕರಣದ ವ್ಯಾಪ್ತಿಯಿಂದಾಗಿ ಮತ್ತು ಸಾಮಾನ್ಯ ರೈತರು ಪ್ರಕರಣವನ್ನು ಕೊಂಡೊಯ್ದ ಬಗೆಯಿಂದಾಗಿ ಇದು ಗಮನಾರ್ಹವಾದುದಾಗಿದೆ.
ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ತಮ್ಮ ಬೆಳೆ ಉತ್ಪಾದನೆಯನ್ನು ನಿರ್ದಿಷ್ಟ ವಿಮಾ ಕಂಪೆನಿಗೆ ಪೂರ್ವನಿರ್ಧರಿತ ಮಟ್ಟದಲ್ಲಿ ವಿಮೆ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. 2022-23ನೇ ಸಾಲಿನಲ್ಲಿ ಅತಿಯಾದ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ಹಾನಿಯಾದವು. ಆದ್ದರಿಂದ ಪ್ರಕೃತಿ ವಿಕೋಪದಡಿ ಬೆಳೆ ನಷ್ಟಕ್ಕೆ ವಿಮೆಯನ್ನು ಕ್ಲೈಮ್ ಮಾಡಲು ಅವಕಾಶವಿರುತ್ತದೆ. ಇದನ್ನು ಗೊತ್ತುಮಾಡಿಕೊಂಡ ಕೆಲವರು ಸೇರಿ ವಿಮೆ ಕಟ್ಟಿದವರ ಪಟ್ಟಿ ಸಿದ್ಧಪಡಿಸಿ ವಿಮಾ ಹಣವನ್ನು ಪಡೆದುಕೊಳ್ಳಲು ಷಡ್ಯಂತ್ರ ಮಾಡಿ ದೊಡ್ಡ ಮೊತ್ತದ ಅವ್ಯವಹಾರ ನಡೆಸಿದ್ದಾರೆ. ಇದನ್ನು ಅಧಿಕೃತ ತನಿಖಾ ವರದಿಗಳಲ್ಲಿಯೇ ನೋಡಬಹುದು.
ಪರಿಹಾರದ ಮೊತ್ತ ಪಡೆದ 161 ಜನ ರೈತರಲ್ಲಿ ಬಹುಪಾಲು ರೈತರ ಪರಿಹಾರದಲ್ಲಿ ವಂಚನೆ ನಡೆದಿರುತ್ತದೆ. ಈ ವಂಚನೆಯಲ್ಲಿ ವಿಮಾ ಕಂಪೆನಿಯ ಅಧಿಕಾರಿಗಳು, ಸ್ಥಳೀಯ ಕಂದಾಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಹಾಗೂ ಗ್ರಾಮಗಳ ಬಲಾಢ್ಯ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ ಎಂದು ರೈತರೇ ಆರೋಪಿಸಿದ್ದಾರೆ. ವಂಚನೆಗೆ ಒಳಗಾದ ರೈತರು ಜಿಲ್ಲಾಧಿಕಾರಿಯವರಿಗೆ, ಲೋಕಾಯುಕ್ತರಿಗೆ, ಕೃಷಿ ಜಂಟಿ ನಿರ್ದೇಶಕರಾದಿಯಾಗಿ ಅಧಿಕಾರದಲ್ಲಿರುವ ತಮ್ಮ ಪ್ರತಿನಿಧಿ ರಾಜಕಾರಣಿಗಳ ಮುಂದೆ ಸಭೆಗಳಲ್ಲಿ, ದೂರು/ಮನವಿ ಪತ್ರಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಹಾಗೂ ತಮಗೆ ಸಿಗಬೇಕಾದ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ಯಾವ ರೈತ ಮುಖಂಡನಿಗೂ ಕಾಯದೆ ರೈತರೇ ಸ್ವತಃ ಸಂಘಟಿತರಾಗಿ ಮನವಿಗಳನ್ನು ಕೊಟ್ಟು, ಮನವಿಗೆ ಸ್ಪಂದಿಸದೇ ಇದ್ದಾಗ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇದರ ನಡುವೆ, ಇವರ ಹೋರಾಟವನ್ನು ಹತ್ತಿಕ್ಕುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರಾದಿಯಾಗಿ ಬಲಾಢ್ಯರಿಂದ ಪ್ರಯತ್ನಗಳು ನಡೆದಿವೆ. ಸ್ವಾಭಿಮಾನಿಗಳಾದ ರೈತರು ಯಾವುದಕ್ಕೂ ಜಗ್ಗದೆ ಮುನ್ನಡೆದಿದ್ದಾರೆ. ಇದರ ಪರಿಣಾಮ ಎಂಬಂತೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಇವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸರಕಾರದಿಂದ ರೈತರಿಗೆ ನೀಡಲಾಗಿರುವ ಬೆಳೆ ಪರಿಹಾರ ನಿಧಿ ಮತ್ತು ಬೆಳೆ ವಿಮೆ ಪರಿಹಾರದಲ್ಲಿ ಅವ್ಯವಹಾರ ನಡೆದಿರುವ ಕುರಿತು ವಿವರವಾದ ತನಿಖೆ ನಡೆಸಿ ಕ್ರಮವಹಿಸುವಂತೆ ಸೂಚಿಸಲಾಗಿದೆ. ಅದರಂತೆ ತನಿಖಾ ತಂಡ ರಚಿಸಿ ತನಿಖೆಯನ್ನು ನಡೆಸಲಾಗಿದೆ. ಇದರಲ್ಲಿ ವಿಮಾ ಸಂಸ್ಥೆಯಿಂದ ಮಾರ್ಗಸೂಚಿಗಳ ಉಲ್ಲಂಘನೆಯಾಗಿರುವುದು ಕಂಡುಬಂದಿರುತ್ತದೆ. ವಿಮಾ ಸಂಸ್ಥೆಯವರು ಸ್ಥಳ ನಿರ್ದಿಷ್ಟ ವಿಕೋಪ ಹಾಗೂ ಬೆಳೆ ಕಟಾವು ನಂತರ ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟದ ಪರಿಹಾರವನ್ನು ನೀಡಿರುವ ಪಟ್ಟಿಯನ್ನು ಸಭೆಗೆ ಹಾಜರುಪಡಿಸಿದ್ದಾರೆ. ರೈತರ ಪಟ್ಟಿಯಲ್ಲಿ ಶೇಂಗಾ ಬೆಳೆಗೆ ಪರಿಹಾರ ನೀಡಿರುವುದಾಗಿ ಯೂನಿವರ್ಸಲ್ ಸೋಂಪೋ ಕಂಪೆನಿ ಲಿಮಿಟೆಡ್ ಅವರು ಮಾಹಿತಿ ನೀಡಿದ್ದಾರೆ. ಆದರೆ ಪರಿಹಾರ ನೀಡಲಾಗಿರುವ ರೈತರ ಜಮೀನಿನಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ವಿವರಗಳನ್ನು ಬೆಳೆ ದರ್ಶಕ್ ತಂತ್ರಾಂಶದಲ್ಲಿ (ಬೆಳೆ ಸಮೀಕ್ಷೆ ಪ್ರಕಾರ) ಪರಿಶೀಲನೆ ಮಾಡಿದಾಗ ಹಾಗೂ ಸಭೆಯಲ್ಲಿ ಸೇರಿದ ರೈತರ ಹೇಳಿಕೆಯ ಪ್ರಕಾರ ಸಾಕಷ್ಟು ಜಮೀನುಗಳಲ್ಲಿ ಶೇಂಗಾ ಬೆಳೆ ಇಲ್ಲದೆ ಬೇರೆ ಬೆಳೆಗಳಿರುವುದು ಹಾಗೂ ಪಾಳು ಭೂಮಿ ಇರುವುದು ಕಂಡು ಬಂದಿರುತ್ತದೆ.
ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಿದ ತನಿಖಾ ತಂಡದ ಪರಿಶೀಲನೆಯಲ್ಲಿ ಕಂಡು ಬಂದ ಅಂಶಗಳು:
1.ಶೇಂಗಾ ಬೆಳೆಯ ಬದಲಾಗಿ ತೆಂಗು, ಅಡಿಕೆ, ಟೊಮೆಟೊ, ಇತರ ಬೆಳೆಗಳಿರುವುದು ಕಂಡುಬಂದಿರುತ್ತದೆ.
2.ಯಾವುದೇ ಬೆಳೆ ಇಲ್ಲದೆ ಪಾಳು/ಬೀಳು ಜಮೀನಿಗೆ ಪಾವತಿಯಾಗಿರುವುದು ಕಂಡು ಬಂದಿರುತ್ತದೆ.
3.ಖಾತೆದಾರರ ಬದಲಾಗಿ ಬೇರೆಯವರು ಬೆಳೆವಿಮೆ ನೊಂದಣಿ ಮಾಡಿಸಿರುತ್ತಾರೆ ಹಾಗೂ ವಿಮಾ ಪರಿಹಾರ ಮೊತ್ತವನ್ನು ಪಡೆದಿರುತ್ತಾರೆ.
4.ಕೆಲವು ಫಲಾನುಭವಿಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ವಿಮಾ ಪರಿಹಾರ ಪಾವತಿಯಾಗಿರುವುದು ಕಂಡು ಬಂದಿರುತ್ತದೆ.
5.ಸ್ಥಳ ನಿರ್ದಿಷ್ಟ ವಿಕೋಪಗಳು ಹಾಗೂ ಬೆಳೆ ಕಟಾವು ನಂತರ ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟಗಳಿಗೆ ವೈಯಕ್ತಿಕವಾಗಿ ದೂರು ನೀಡಿರುವ ರೈತರ ಜಮೀನುಗಳಿಗೆ ವಿಮಾಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಬೆಳೆ ನಷ್ಟ ನಿರ್ಧರಣೆ ಮಾಡಿರುವ ಬಗ್ಗೆ ದಾಖಲೆಗಳನ್ನು ವಿಮಾ ಸಂಸ್ಥೆಯವರು ಹಾಜರುಪಡಿಸಿರುವುದಿಲ್ಲ.
ವಿಮಾ ಸಂಸ್ಥೆಯವರು ವಿಮಾ ಪರಿಹಾರವನ್ನು ಪಾವತಿ ಮಾಡುವಲ್ಲಿ ಮಾರ್ಗಸೂಚಿಗಳನ್ನು ಅನುಸರಿಸದೆ ಇರುವುದು ಕಂಡುಬಂದಿರುತ್ತದೆ.
ಈ ಪ್ರಕರಣದಲ್ಲಿ ಸ್ಥಳೀಯ ರಾಜಕೀಯ ಮುಖಂಡರು, ಪ್ರಭಾವಿ ವ್ಯಕ್ತಿಗಳು, ಕಂದಾಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ವಿಮಾ ಕಂಪೆನಿಯ ಅಧಿಕಾರಿಗಳೊಂದಿಗೆ ಸೇರಿ ಅವ್ಯವಹಾರ ನಡೆಸಿರುತ್ತಾರೆ ಎಂದು ರೈತರು ಆರೋಪಿಸಿದ್ದರು. ಇನ್ನು ಪ್ರಕರಣದ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ತನಿಖಾ ತಂಡವನ್ನು ರಚಿಸಿ, ವರದಿಯನ್ನು ಸಲ್ಲಿಸಲಾಗಿದೆ. ಆದರೆ ತನಿಖಾ ತಂಡದಲ್ಲಿ ರೈತರು ಆರೋಪಿಸಿದ ವ್ಯಕ್ತಿಗಳೇ ತನಿಖಾ ತಂಡದಲ್ಲೂ ಇದ್ದು ವಿಮಾ ಸಂಸ್ಥೆಯವರು ವಿಮಾ ಪರಿಹಾರವನ್ನು ಪಾವತಿ ಮಾಡುವಲ್ಲಿ ಮಾರ್ಗಸೂಚಿಗಳನ್ನು ಅನುಸರಿಸದೆ ಇರುವ ಅಂಶಗಳನ್ನು ದಾಖಲಿಸಿರುತ್ತಾರೆ ಹಾಗೂ ಜಿಲ್ಲಾಧಿಕಾರಿಯವರು ಕೃಷಿ ಆಯುಕ್ತರಿಗೆ ನೀಡಿದ ಮತ್ತು ತಹಶೀಲ್ದಾರ್‌ರವರು ಜಿಲ್ಲಾಧಿಕಾರಿಯವರಿಗೆ ನೀಡಿದ ಒಟ್ಟು ಎರಡು ತನಿಖಾ ವರದಿಗಳು ಇದ್ದು, ಪ್ರಕರಣದ ವಿವರ, ಪ್ರಕರಣಗಳ ಸಂಖ್ಯೆ ಹಾಗೂ ಮೊತ್ತದಲ್ಲಿ ತುಂಬಾ ವ್ಯತ್ಯಾಸ ಕಂಡುಬಂದಿರುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕಾಗಿತ್ತು.
ಈ ಅಂಶಗಳನ್ನು ಆಧರಿಸಿ ಕ್ರಮ ವಹಿಸಬೇಕಾಗಿತ್ತು. ಆದರೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಕಂದಾಯ ಮತ್ತು ಕೃಷಿ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಇರಲೇಬೇಕು ಎಂಬುದು ರೈತರ ವಾದ. ರೈತರು ತಮ್ಮ ಪಟ್ಟನ್ನು ಸಡಿಲಿಸದೆ 7-8 ತಿಂಗಳುಗಳಿಂದ ತಮ್ಮ ಮಿತಿಗಳಲ್ಲಿ ಸಭೆಗಳನ್ನು ಸೇರಿ ತೀರ್ಮಾನ ತೆಗೆದುಕೊಂಡು ಹೋರಾಟ ನಡೆಸುತ್ತಾರೆ. ಈ ಅವ್ಯವಹಾರದಲ್ಲಿ ಭಾಗಿಯಾಗಿರುವವರೆಲ್ಲರೂ ಪ್ರಭಾವಿಗಳು ಎಂಬ ಸಂಗತಿಯೇ ಪ್ರಕರಣ ಮುಚ್ಚಿ ಹೋಗುವಲ್ಲಿ ಪ್ರಮುಖವಾದರೂ, ಯಾವುದೇ ರೈತ ಮುಖಂಡರ, ನಾಯಕರ, ಸಂಘಟನೆಗಳ, ರಾಜಕಾರಣಿಗಳ ಬೆಂಬಲವಿಲ್ಲದೆ ಸ್ವತಃ ರೈತರೇ ತಮ್ಮ ಖರ್ಚಿನಲ್ಲಿ ತಾವು ಕಚೇರಿಗಳನ್ನು ಎಡತಾಕಿ ಪ್ರಕರಣದ ಕಾವನ್ನು ಉಳಿಸಿಕೊಂಡಿರುತ್ತಾರೆ.
ರೈತರೇ ಹೇಳುವ ಹಾಗೆ, ಸ್ಥಳೀಯ ಪೊಲೀಸರು ಕೂಡ ರೈತರ ದನಿಯನ್ನು ಹತ್ತಿಕ್ಕುವ ಮಟ್ಟಿಗೆ ಮುಂದಾದದ್ದನ್ನು ನಾವು ಗಮನಿಸಬೇಕು. ಸದ್ಯ ಇದಾವುದನ್ನು ಲೆಕ್ಕಿಸದೆ ಅಂದರೆ, ಸುಮಾರು 20 ಜನ ರೈತರು ದಿನಾಂಕ: 3-11-23ರಂದು ತಮ್ಮ ಹೆಗಲ ಮೇಲೆ ಹಸಿರು ಶಾಲನ್ನು ಹಾಕಿಕೊಂಡು ಆಯುಕ್ತರನ್ನು ಭೇಟಿಯಾಗಿದ್ದರು. ಕಚೇರಿಯಿಂದ ನೇರ ರೈತರಲ್ಲಿಗೆ ಬಂದ ಆಯಕ್ತ ವೈ.ಎಸ್. ಪಾಟೀಲ್‌ರವರು ರೈತರ ಸಮಸ್ಯೆಗಳನ್ನು ಕೂಲಂಕಷವಾಗಿ ಆಲಿಸಿದರು. ಜೊತೆಗೆ ಬಗೆಹರಿಸುವ ಭರವಸೆಯಿಂದಾಗಿ ಮತ್ತು ಅವರು ರೈತ ಸ್ನೇಹಿಯಾಗಿ ನಡೆದುಕೊಂಡ ನಡೆಯಿಂದಾಗಿ ರೈತರಲ್ಲಿ ಇದುವರೆಗೂ ಇಲ್ಲದ ಉತ್ಸಾಹವಂತೂ ಮೂಡಿತ್ತು. ಅಂದರಂತೆ, ಮಾನ್ಯ ಆಯುಕ್ತರು 18-11-2023ರಂದು 93 ಪ್ರಕರಣಗಳಿಗೆ ಸಂಬಂಧಿಸಿದಂತೆ ರೂ. 83.10 ಲಕ್ಷ ಮೊತ್ತ ವನ್ನು ವಿಮಾ ಸಂಸ್ಥೆಯವರಿಂದ ವಸೂಲಿ ಮಾಡಿಸಿ ಸರಕಾರಕ್ಕೆ ಮರುಪಾವತಿಸುವಂತೆ ಕ್ರಮಕೈಗೊಂಡಿದ್ದಾರೆ.
ಅಂತೂ ರೈತರೇ ಪ್ರಕರಣವನ್ನು ಕೃಷಿ ಆಯುಕ್ತರವರೆಗೂ ತಂದು ನಿಲ್ಲಿಸಿ, ಮುಖ್ಯ ಮಂತ್ರಿಯವರ ಗಮನವನ್ನು ಸೆಳೆದಿದ್ದಾರೆ. ಈ ಮೂಲಕ ಒಂದು ಹಂತದ ಜಯವೆಂದೇ ಹೇಳಬೇಕು. ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಯವರು ರೈತರ ಕುರಿತಾಗಿ ಹೇಳುತ್ತಿದ್ದ, ‘‘ಒಂದು ಚಳವಳಿ ಬೆಳೀತ ಬೆಳೀತಾ ಚಳವಳಿಯ ಅನುಭವ ದಿಂದಾನೆ ಹೊಸ ಮಾರ್ಗ ಹುಟ್ಟುತ್ತೆ’’ ಮತ್ತೊಂದು ‘‘ನಮ್ಮ ರೈತರು ಸ್ವಾಭಿಮಾನಿಗಳು’’ ಎಂಬ ಮಾತುಗಳು ಇಲ್ಲಿ ನಿಜಕ್ಕೂ ಅನ್ವಯಿಸುತ್ತದೆ. ಅದಕ್ಕಾಗಿ ರೈತರು ಅಭಿನಂದನಾರ್ಹರು.