ಕೂತ ಕೊಂಬೆ ಕಡಿಯುವ ಸಾಧ್ಯತೆ ದೂರ?

Update: 2023-09-02 07:21 GMT

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನಾದಿನ, ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ವಿವೇಕ್ ದೇಬರಾಯ್ ಬರೆದ ಬರಹವೊಂದು ಭಾರೀ ಸುದ್ದಿ ಮಾಡಿತು. ಲೇಖನದಲ್ಲಿ ಅವರು ಪ್ರಸಕ್ತ ಭಾರತೀಯ ಸಂವಿಧಾನದ ಬದಲಿಗೆ ಹೊಸದನ್ನು ರಚಿಸುವಂತೆ ಆಗ್ರಹಿಸಿದ್ದರು.

ದೇಬರಾಯ್ ವಾದಗಳು ತೀವ್ರ ವಿವಾದವನ್ನು ಸೃಷ್ಟಿಸಿದವು. ಅವರನ್ನು ‘ಜಾತಿವಾದಿ’ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಟೀಕಿಸಿದರು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೋದಿ ಸರಕಾರವನ್ನು ಒತ್ತಾಯಿಸಿದರು. ಸ್ವತಃ ಆರ್ಥಿಕ ಸಲಹಾ ಮಂಡಳಿ ಕೂಡ ದೇಬರಾಯ್ ಅವರ ಅಭಿಪ್ರಾಯಗಳಿಂದ ದೂರವನ್ನು ಕಾಯ್ದುಕೊಂಡಿತು.

ಹೊಗೆ ಕಾಣಿಸಿಕೊಂಡ ಪ್ರಕಾರವೇ ದೇಬರಾಯ್ ಲೇಖನದಲ್ಲಿ ಸ್ವಲ್ಪ ಬೆಂಕಿಯೂ ಇಲ್ಲದೆ ಇರಲಿಲ್ಲ. ಹೊಸ ಸಂವಿಧಾನ ಬೇಕೆಂಬ ಪ್ರತಿಪಾದನೆ ಮಾಡಿದರೆಂಬುದನ್ನು ಹೊರತುಪಡಿಸಿ, ಏಕೆ ಬೇಕು ಎಂಬ ಕುರಿತ ಕೆಲವು ವಾದಗಳನ್ನು ಅವರು ಮಾಡಿದ್ದರು. ಈಗಿನ ಸಂವಿಧಾನ ನಿಜವಾಗಿಯೂ ಕೇಂದ್ರಕ್ಕೆ ತನಗೆ ಬೇಕಾದಂತೆ ರಾಜ್ಯಗಳ ಮೇಲೆ ಅಧಿಕಾರ ಸಾಧಿಸಲು ಮುಕ್ತ ಅವಕಾಶ ನೀಡುತ್ತದೆ ಎಂಬ ವಾಸ್ತವದ ಬಗ್ಗೆ ಬಹಳಷ್ಟು ರಾಜ್ಯಗಳಿಗೆ ತಿಳಿದೇ ಇಲ್ಲ ಎಂದೂ ಅವರು ತಮ್ಮ ಬರಹದಲ್ಲಿ ದೂರಿದ್ದರು.

ಇನ್ನೂ ಹೆಚ್ಚು ವಿಚಿತ್ರವೆಂದರೆ, ಹೆಚ್ಚಿನ ರಾಷ್ಟ್ರಗಳ ಸಂವಿಧಾನಗಳ ಸರಾಸರಿ ಜೀವಿತಾವಧಿ ಕೇವಲ 17 ವರ್ಷಗಳು ಎಂದು ಅಧ್ಯಯನವು ತೋರಿಸಿದೆ ಎಂಬ ವಾದವನ್ನೂ ದೇಬರಾಯ್ ಮುಂದಿಟ್ಟಿದ್ದರು. ಇದೊಂದು ರೀತಿಯಲ್ಲಿ, ತರಗತಿಗೆ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗೆ ತರಗತಿಯ ಸರಾಸರಿ ಸಮದೂಗಿಸುವುದಕ್ಕಾಗಿ ಮುಂದಿನ ಬಾರಿ ಕಡಿಮೆ ಓದಲು ಹೇಳುವಂತಿತ್ತು. ರಾಜಕೀಯ ಅಸ್ಥಿರತೆಯಿರುವ ಪಾಕಿಸ್ತಾನದಂಥ ದೇಶಗಳು ಆಗಾಗ ಸಂವಿಧಾನವನ್ನು ಬದಲಿಸುತ್ತಲೇ ಇವೆ. ಭಾರತೀಯ ಒಕ್ಕೂಟ ಅಂಥ ಸ್ಥಿತಿಯನ್ನು ತಂದುಕೊಂಡಿಲ್ಲವೆಂಬುದು ಸಮಾಧಾನಕರ ಸಂಗತಿ.

ಅಂತಿಮವಾಗಿ, ಈಗಿನ ಸಂವಿಧಾನ 1935ರ ಭಾರತ ಸರಕಾರದ ಕಾಯ್ದೆ ಎಂದು ಕರೆಯಲ್ಪಡುತ್ತಿದ್ದ ಬ್ರಿಟಿಷ್ ರಾಜ್ ವ್ಯವಸ್ಥೆ ರೂಪಿಸಿದ್ದ ಅಂತಿಮ ಸಂವಿಧಾನವನ್ನು ಬಹುತೇಕ ಆಧರಿಸಿದೆ ಎಂದು ದೇಬರಾಯ್ ವಾದಿಸುತ್ತಾರೆ. ಆದ್ದರಿಂದ, ‘‘ಆ ಅರ್ಥದಲ್ಲಿ, ಇದು ವಸಾಹತುಶಾಹಿ ಪರಂಪರೆ’’ ಎಂಬ ವಾದ ಅವರದು. ಇದು ತಾಂತ್ರಿಕವಾಗಿ ನಿಜ. ಪ್ರಸ್ತುತ ಸಂವಿಧಾನ ಹೆಚ್ಚಾಗಿ ಭಾರತ ಸರಕಾರದ ಕಾಯ್ದೆ 1935 ಅನ್ನು ಆಧರಿಸಿದೆ. ಆದರೆ ಇದು ಬಹಳ ಹಿಂದಿನಿಂದಲೂ ತಿಳಿದಿದೆ. ಸಂವಿಧಾನ ರಚನಾ ಸಭೆಯ ಸದಸ್ಯರೊಬ್ಬರು ಕೂಡ ಅದರ ಬಗ್ಗೆ ಆಕ್ಷೇಪವೆತ್ತಿದ್ದರು.

ಆದರೆ, ಬ್ರಿಟಿಷ್ ರಾಜ್ ವ್ಯವಸ್ಥೆಯ ಎಲ್ಲವನ್ನೂ ‘ವಸಾಹತುಶಾಹಿ’ ಎಂದು ಬದಿಗೆ ತಳ್ಳಬೇಕು ಎಂಬ ವಾದ ಅವಿವೇಕದ್ದು ಮಾತ್ರವಲ್ಲ, ಅಪಾಯಕಾರಿಯೂ ಹೌದು. ಪ್ರಸಕ್ತ ಭಾರತೀಯ ವ್ಯವಸ್ಥೆ ಸ್ವತಃ ಕಾನೂನುಬದ್ಧವಾಗಿ ಬ್ರಿಟನ್‌ನ ಭಾರತೀಯ ಸಾಮ್ರಾಜ್ಯದ ಉತ್ತರಾಧಿಕಾರಿ ವ್ಯವಸ್ಥೆಯಾಗಿದೆ ಮತ್ತು ಅದರ ಎಲ್ಲಾ ಪ್ರಮುಖ ಸಂಸ್ಥೆಗಳು - ಕೇಂದ್ರ ಸರಕಾರದಿಂದ ಭಾರತೀಯ ಸೇನೆಯವರೆಗೆ -ಬ್ರಿಟಿಷ್ ರಾಜ್ ಮೂಲಕವೇ ರಚಿತವಾಗಿವೆ.

ವಾಸ್ತವವಾಗಿ, ಭಾರತದ ಪ್ರಸ್ತುತ ರಾಜಕೀಯ ಗಡಿಗಳು ಸ್ವತಃ ರಾಜ್ ವ್ಯವಸ್ಥೆಯ ಅಡಿಯಲ್ಲಿಯೇ ರೂಪುಗೊಂಡವು.

ಸಂವಿಧಾನದಂತೆಯೇ, ಭಾರತದ ಗಡಿಗಳು ಸಾರ್ವಭೌಮತ್ವದ ಅಂಶವನ್ನು ನಿರೂಪಿಸುತ್ತವೆ.

ದೇಬರಾಯ್ ಬರಹದಲ್ಲಿ ಉಲ್ಲೇಖವಿಲ್ಲದೇ ಹೋದರೂ, ಬಿಜೆಪಿ ಈಗಿನ ಸಂವಿಧಾನವನ್ನು ಬದಲಿಸಲು ಮತ್ತು ಅದರ ಸ್ಥಳದಲ್ಲಿ ಹಿಂದೂ ರಾಷ್ಟ್ರ ಅಥವಾ ಹಿಂದೂ ರಾಜ್ಯದ ದೃಷ್ಟಿಕೋನವನ್ನು ಪ್ರತಿಪಾದಿಸುವ ಮತ್ತೊಂದನ್ನು ತರಲು ಬಯಸುತ್ತದೆ ಎಂಬ ಆತಂಕದಿಂದ ಆ ಲೇಖನಕ್ಕೆ ತೀವ್ರ ವಿರೋಧದ ಪ್ರತಿಕ್ರಿಯೆಗಳು ಬಂದವು.

ಈ ಪ್ರತಿಕ್ರಿಯೆ ಸದುದ್ದೇಶದಿಂದ ಕೂಡಿದ್ದರೂ, ಬಿಜೆಪಿಯ ಪ್ರಸಕ್ತ ಶಕ್ತಿ ನಿಖರವಾಗಿ ಈಗಿನ ಸಂವಿಧಾನದ ಕಾರಣದಿಂದಲೇ ಸಾಧ್ಯವಾಗಿರುವುದಾಗಿದೆ ಎಂಬ ರಾಜಕೀಯ ವಾಸ್ತವವನ್ನು ಕೂಡ ಗಮನಿಸಬೇಕು. ಬಿಜೆಪಿ ಮತ್ತು ಅದರ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ‘ಹಿಂದೂ ರಾಜ್ಯ’ ಎಂಬುದರ ಅರ್ಥವನ್ನು ನಿಖರವಾಗಿ ವ್ಯಾಖ್ಯಾನಿಸದಿದ್ದರೂ, 2023ರಲ್ಲಿ ಭಾರತ ಈಗಾಗಲೇ ಒಂದು ರೀತಿಯ ಹಿಂದೂ ರಾಷ್ಟ್ರವಾಗುವತ್ತ ಹೊರಳಿದೆ ಎಂಬ ವಾದವೂ ಇದೆ.

ಧರ್ಮಾಧಾರಿತ ದೇಶದ ಅತ್ಯಂತ ಪ್ರಮುಖ ವಿರೋಧಿಯನ್ನು ನೋಡೋಣ: ಜಾತ್ಯತೀತತೆಯ ಕಲ್ಪನೆ. ಭಾರತದಲ್ಲಿ, ಎಲ್ಲಾ ಪ್ರಮುಖ ನಂಬಿಕೆಗಳಿಂದ ಸಮಾನ ದೂರವನ್ನು ಕಾಯ್ದುಕೊಳ್ಳುವುದು ಎಂದು ಇದನ್ನು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದರೆ ಇದು ಇಂದು ಭಾರತದಲ್ಲಿ ಸ್ಪಷ್ಟವಾಗಿ ಅನುಸರಿಸದ ಪರಿಕಲ್ಪನೆಯಾಗಿದೆ. ದೇಶದಲ್ಲಿ ಹಿಂದೂ ಧರ್ಮ ಪ್ರಮುಖ ಸ್ಥಾನವನ್ನು ಆಕ್ರಮಿಸುತ್ತದೆ. ಹಿಂದೂ ಧಾರ್ಮಿಕ ಹಬ್ಬಗಳು, ಚಿಹ್ನೆಗಳು ಮತ್ತು ಕಾನೂನುಗಳಿಗೆ ಸರಕಾರಗಳು ಆದ್ಯತೆ ನೀಡುತ್ತಿವೆ.

ಇದು ಸಾಂಕೇತಿಕವಲ್ಲ. ಬದಲಾಗಿ, ಆಳವಾದ ಚೌಕಟ್ಟೊಂದು ರೂಪುಗೊಂಡಿದೆ. ಉದಾಹರಣೆಗೆ, ದೇಶದ ನಗರಗಳು ತಮ್ಮ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಅಮೆರಿಕ ತನ್ನ ಆಫ್ರಿಕನ್ ಅಮೆರಿಕನ್ನರ ವಿಚಾರದಲ್ಲಿ ಮಾಡುವಂತೆಯೇ ತಾರತಮ್ಯದಿಂದ ನೋಡುತ್ತವೆ. ಅದೇ ಮಟ್ಟದಲ್ಲಿ ಪ್ರತ್ಯೇಕಿಸುತ್ತವೆ.

ಮೇಲಾಗಿ, ಈ ನಿಜವಾದ ಜಾತ್ಯತೀತತೆಯ ಕೊರತೆಯನ್ನು ನ್ಯಾಯಾಲಯಗಳು ಅನುಮೋದಿಸಿವೆ. ಗೋಹತ್ಯೆ ನಿಷೇಧದಂಥ ಕಾನೂನುಗಳ ಪರವಾಗಿ ನಿಲ್ಲಲಾಗಿದೆ. ಇತ್ತೀಚೆಗೆ, ಬಿಜೆಪಿ ಸರಕಾರಗಳು ಇರುವಲ್ಲಿ ಮುಸ್ಲಿಮರ ವಿರುದ್ಧದ ಸಾಮೂಹಿಕ ಹಿಂಸಾಚಾರಗಳು ಮಿತಿ ಮೀರಿವೆ. ನ್ಯಾಯಾಲಯಗಳು ಮೂಕವಾಗಿ ನೋಡುತ್ತಿವೆ. ಜಾತ್ಯತೀತತೆ ಎಂಬುದು ಅರ್ಥ ಕಳೆದುಕೊಂಡಿದೆ ಮತ್ತು ಹಿಂದೂ ರಾಷ್ಟ್ರ ಪ್ರಸಕ್ತ ಕಾನೂನು ಚೌಕಟ್ಟಿನ ಅಡಿಯಲ್ಲಿ ಸಾಧಿಸಬಹುದಾದುದಕ್ಕಿಂತ ಹೆಚ್ಚಿನದಾಗಿದೆ.

ಬಿಜೆಪಿಯ ಪ್ರಸಕ್ತ ರಾಜಕೀಯ ರೀತಿಯನ್ನು ಗಮನಿಸಿದರೆ, ಪಕ್ಷ ವ್ಯಕ್ತಿಗತ, ಕೇಂದ್ರೀಕೃತ ರಾಜಕೀಯ ಅಧಿಕಾರವನ್ನು ಹೊಂದಿದ್ದು, ನಿರಂಕುಶಾಧಿಕಾರದ ಸ್ವರೂಪವನ್ನು ಬಳಸಲು ಬಯಸುತ್ತದೆ. ಇದರಲ್ಲಿ ಈಗಿನ ಸಂವಿಧಾನ ಅಡ್ಡಿಯಾಗಿಲ್ಲ ಎಂಬುದು ಮಾತ್ರವಲ್ಲ, ಅನುಕೂಲಕಾರಿಯೂ ಹೌದು. ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಆಧುನಿಕ ಭಾರತೀಯ ಸಂವಿಧಾನವನ್ನು ಆಧರಿಸಿದ ಭಾರತ ಸರಕಾರದ ಕಾಯ್ದೆ, 1935ರ ಸಂದರ್ಭವನ್ನು ಗಮನಿಸಬೇಕು.

1937ರಿಂದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರಗಳನ್ನು ಹೊಂದಿದ್ದ ಪ್ರಾಂತೀಯ ಮಟ್ಟದಲ್ಲಿ ಭಾರತೀಯರಿಗೆ ರಾಜಕೀಯ ಅಧಿಕಾರ ನೀಡುವ ಸಮಯದಲ್ಲಿ ಬ್ರಿಟಿಷ್ ರಾಜ್ ಈ ದಾಖಲೆಯನ್ನು ರಚಿಸಿತು. ಇದನ್ನು ಸಮತೋಲನಗೊಳಿಸಲು, ಕೆಲವು ಒಕ್ಕೂಟಗಳು ಹೊಂದಿದ್ದ ನಂಬಲಾಗದ ಅಧಿಕಾರಗಳೊಂದಿಗೆ ದಿಲ್ಲಿಯನ್ನು ಬಲಪಡಿಸಲಾಯಿತು. ಅತಿಯಾದ ಹಣಕಾಸಿನ ಅಧಿಕಾರಗಳು, ಕೇಂದ್ರವು ರಾಜ್ಯಗಳನ್ನು ನಿಯಂತ್ರಿಸಬಹುದಾದ ಅಧಿಕಾರ, ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಚುನಾಯಿತ ಸರಕಾರವನ್ನು ವಜಾಗೊಳಿಸುವ ಸಾಮರ್ಥ್ಯ ಎಲ್ಲವನ್ನೂ ಒದಗಿಸಿತು.

ಈ ಎಲ್ಲಾ ಅಧಿಕಾರಗಳನ್ನು ಅಂದಿನಿಂದ, ಎಲ್ಲ ಸರಕಾರಗಳು ಗಮನಾರ್ಹವಾಗಿ ಬಳಸಿವೆ. ಸಂವಿಧಾನವನ್ನು ಇನ್ನಷ್ಟು ಕೇಂದ್ರೀಕೃತಗೊಳಿಸಿವೆ. ಪಕ್ಷಾಂತರ ವಿರೋಧಿ ನಡೆಗಳಂತೂ ಎಲ್ಲವನ್ನೂ ಇನ್ನಷ್ಟು ಹದಗೆಡಿಸಿವೆ.

ಭಾರತ ಸರಕಾರದ ಕಾಯ್ದೆ, 1935ರಲ್ಲಿನ ಆರ್ಥಿಕ ಒಕ್ಕೂಟದ ಸ್ಥೂಲ ರೂಪ ಸರಕು ಮತ್ತು ಸೇವಾ ತೆರಿಗೆಯ ಕಾರಣದಿಂದಾಗಿ ಮತ್ತಷ್ಟು ದುರ್ಬಲಗೊಂಡಿದೆ. ಇದು ಸ್ವತಂತ್ರವಾಗಿ ಆದಾಯ ಸಂಗ್ರಹಿಸುವ ರಾಜ್ಯಗಳ ಹಕ್ಕನ್ನು ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ.

1950ರ ಸಂವಿಧಾನದ ಏಕೀಕೃತ ನ್ಯಾಯಾಂಗವನ್ನು ಕೊಲಿಜಿಯಂನ ನಾವೀನ್ಯತೆಯನ್ನು ಬಳಸಿಕೊಂಡು ಇನ್ನಷ್ಟು ಕಠಿಣಗೊಳಿಸಲಾಗಿದೆ. ಇದು ನ್ಯಾಯಾಧೀಶರ ಆಯ್ಕೆಯಲ್ಲಿ ಕೇಂದ್ರಕ್ಕೆ ಗಮನಾರ್ಹ ಅಧಿಕಾರವನ್ನು ನೀಡುತ್ತದೆ. ಪರಿಣಾಮವಾಗಿ, ಕೇಂದ್ರದಲ್ಲಿನ ಸರಕಾರಗಳನ್ನು ನ್ಯಾಯಾಲಯ ಗಳು ವಿರಳವಾಗಿ ಪ್ರಶ್ನಿಸುತ್ತವೆ ಮತ್ತು ಹಾಗೆ ಮಾಡುವ ವೈಯಕ್ತಿಕ ನ್ಯಾಯಾಧೀಶರು ಕೂಡ ನ್ಯಾಯಾಂಗದಿಂದ ತ್ವರಿತವಾಗಿ ಬದಲಾಗುತ್ತಾರೆ.

ಈ ಎಲ್ಲವೂ ಭಾರತದ ರಾಜಕೀಯದ ಪ್ರಸಕ್ತ ಸ್ಥಿತಿಯಲ್ಲಿ ಕಾಣಿಸುತ್ತಿವೆ. ದೇಶದಲ್ಲೀಗ ಪ್ರಧಾನ ಮಂತ್ರಿಯ ವ್ಯಕ್ತಿತ್ವವನ್ನು ಆಧರಿಸಿದ ಜನಪ್ರಿಯ, ಸರ್ವಾಧಿಕಾರಿ ಮತ್ತು ಹೆಚ್ಚು ಕೇಂದ್ರೀಕೃತ ರಾಜಕೀಯದ ಪ್ರಾಬಲ್ಯ ಇದೆ. ಬಿಜೆಪಿ ತನಗೆ ಹೆಚ್ಚಿನ ಅಧಿಕಾರವನ್ನು ನೀಡಿದ ಕಾನೂನು ಚೌಕಟ್ಟನ್ನು ಬಿಟ್ಟುಕೊಡುವುದು ಅಸಂಭವವಾಗಿದೆ. ಏಕೆಂದರೆ ಅದು ತಾನು ಕುಳಿತಿರುವ ಕೊಂಬೆಯನ್ನೇ ಕತ್ತರಿಸುವಂಥ ದಡ್ಡತನವಾದೀತು ಎಂಬುದು ಅದಕ್ಕೆ ಗೊತ್ತು.

(ಕೃಪೆ:scroll.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಶುಐಬ್ ದಾನಿಯಾಲ್

contributor

Similar News