ಸಮರ್ಪಕವಾಗಿ ನಡೆಯದ ಒತ್ತುವರಿ ತೆರವು ಕಾರ್ಯಾಚರಣೆ
‘ರಾಜ್ಯದಲ್ಲಿನ ಸರಕಾರಿ ಜಮೀನುಗಳನ್ನು ಒತ್ತುವರಿ, ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆಯಾಗಿರುವ ಪ್ರಕರಣಗಳಲ್ಲಿ ಸರಕಾರಿ ಜಮೀನುಗಳನ್ನು ಸರಕಾರದ ಮರು ವಶಕ್ಕೆ ಪಡೆಯುವ ಪ್ರಕ್ರಿಯೆಯು ಮಂದಗತಿಯಲ್ಲಿದೆ. ಹಾಗೂ ಈ ಸಂಬಂಧ ಕೆಪಿಎಲ್‌ಸಿಗೆ ನೀಡುತ್ತಿರುವ ಜಿ೮ ಸಿರಲ್ಲಿನ ಮಾಹಿತಿಯೂ ನಿಖರವಾಗಿಲ್ಲ. ಭೂ ಕಬಳಿಕೆದಾರರು ಹಾಗೂ ಇಂತಹ ಭೂ ಕಬಳಿಕೆದಾರರರಿಗೆ ಪ್ರೇರಣೆ ನೀಡಿದವರ ವಿರುದ್ಧ ಕಠಿಣ ಕ್ರಮಗಳಾಗದಿರುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿರುತ್ತದೆ,’ ಎಂದು ೨೦೨೩ರ ಸೆ.೨೬ರಂದು ಬರೆದ ಪತ್ರದಲ್ಲಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಎಚ್ಚರಿಕೆ ಸಂದೇಶ ರವಾನಿಸಿರುವುದು ಗೊತ್ತಾಗಿದೆ.
ಬೆಂಗಳೂರು, ಸೆ.28: ರಾಜ್ಯದಲ್ಲಿನ ಸರಕಾರಿ ಜಮೀನುಗಳನ್ನು ಗುರುತಿಸಿ ಒತ್ತುವರಿಯಾಗಿರುವ ಜಮೀನುಗಳನ್ನು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತವು ಸಮರ್ಪಕವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿಲ್ಲ. ಅಕ್ರಮ ಒತ್ತುವರಿಯನ್ನು ಅಧಿಕಾರಿಗಳೇ ಮುಂದೆ ನಿಂತು ಕಾನೂನುಬದ್ಧಗೊಳಿಸುತ್ತಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ಒತ್ತುವರಿ ತೆರವು ಸಂಬಂಧ ನೀಡುತ್ತಿರುವ ಜಿ 8 ಸಿ ರಲ್ಲಿನ ಮಾಹಿತಿಯೂ ನಿಖರವಾಗಿಲ್ಲ. ನಕಲಿ ದಾಖಲೆ ಸೃಷ್ಟಿಸುತ್ತಿರುವ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಂದಾಯ ಇಲಾಖೆಯು ಇದೀಗ ನೇರವಾಗಿ ಕರ್ನಾಟಕ ಸಾರ್ವಜನಿಕ ನಿಗಮಗಳ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಚಾಟಿ ಬೀಸಿದೆ. ಆದರೂ ಕೆಪಿಎಲ್‌ಸಿ ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಮೈ ಕೊಡವಿ ಸಮರ್ಪಕವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿಲ್ಲ.
ಸರಕಾರಿ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸದಿದ್ದರೇ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಮತ್ತು ಯಾವ ಮುಲಾಜಿಲ್ಲದೇ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದರೂ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮವು ವಹಿಸಿರುವ ನಿರ್ಲಕ್ಷ್ಯವು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಕೆಪಿಎಲ್‌ಸಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಎರಡು ಪತ್ರಗಳನ್ನು (ಅ. ಸ. ಪತ್ರ ಸಂಖ್ಯೆ; RD 188 LGB, 268 2023) ಬರೆದಿದ್ದಾರೆ. ಈ ಎರಡೂ ಪತ್ರಗಳ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿ, ಅಧಿಕಾರಿಗಳೊಂದಿಗೆ 2020ರ ಜನವರಿ 20ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ದೇಶನ ನೀಡಲಾಗಿತ್ತು. ಆದರೂ ಸಮರ್ಪಕವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸದಿರುವುದು ಕಂಡು ಬಂದಿರುತ್ತದೆ. ಇದನ್ನು ಕಂದಾಯ ಸಚಿವರು ಗಂಭೀರವಾಗಿ ಪರಿಗಣಿಸಿರುತ್ತಾರೆ.
ರಾಜ್ಯದಲ್ಲಿನ ಸರಕಾರಿ ಜಮೀನುಗಳನ್ನು ಗುರುತಿಸಿ ಒತ್ತುವರಿಯಾಗಿರುವ ಜಮೀನುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸಾರ್ವಜನಿಕ ಜಮೀನು ನಿಗಮವನ್ನು ಸ್ಥಾಪಿಸಲಾಗಿರುತ್ತದೆ. ಕೆಪಿಎಲ್‌ಸಿಗೆ ಒತ್ತುವರಿ ತೆರವು ಸಂಬಂಧ ನೀಡುತ್ತಿರುವ ಜಿ 8 ಸಿ ರಲ್ಲಿನ ಮಾಹಿತಿಯು ನಿಖರವಾಗಿಲ್ಲ. ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿರುತ್ತದೆ.
ಈ ಹಿನ್ನೆಲೆಯಲ್ಲಿ ಸರಕಾರಿ ಜಮೀನುಗಳ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕುರಿತಾಗಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸಬೇಕು.
ಸರಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿದ ಪ್ರಕರಣಗಳಲ್ಲಿ ಒತ್ತುವರಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಅಕ್ರಮ ಒತ್ತುವರಿಯನ್ನು ಕಾನೂನು ಬದ್ಧಗೊಳಿಸುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿರುವ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು. ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಸರಕಾರಿ ಜಮೀನಿನ ಲ್ಯಾಂಡ್ ಆಡಿಟ್ ಮಾಡುವ ಮೂಲಕ ಒತ್ತುವರಿ ತೆರವು ಪ್ರಕರಣಗಳನ್ನು ಖುದ್ದು ಮೇಲ್ವಿಚಾರಣೆ ನಡೆಸಬೇಕು ಎಂದು ರಾಜೇಂದರ್ ಕುಮಾರ್ ಕಟಾರಿಯಾ ಅವರು ಚಾಟಿ ಬೀಸಿರುವುದು ಪತ್ರದಿಂದ ಗೊತ್ತಾಗಿದೆ.
‘ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸಬೇಕು. ಸರಕಾರಿ ಜಮೀನಿನ ಲ್ಯಾಂಡ್ ಆಡಿಟಿಂಗ್ ಮಾಡಿ ಒಂದು ಕ್ರಿಯಾ ಯೋಜನೆಯನ್ನು 15 ದಿನದೊಳಗೆ ಸರಕಾರಕ್ಕೆ ಸಲ್ಲಿಸಬೇಕು. ಈ ಸಂಬಂಧ ನಡೆಯಲಿರುವ ಮುಂದಿನ ಸಭೆಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು,’ ಎಂದು ರಾಜೇಂದರ್ ಕುಮಾರ್ ಕಟಾರಿಯಾ ಅವರು ಪತ್ರದಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಅದೇ ರೀತಿ ರಾಜ್ಯದಲ್ಲಿ ಒತ್ತುವರಿಯಾಗಿರುವ ಸರಕಾರಿ ಜಮೀನುಗಳ ನಿಖರ ಮಾಹಿತಿಯನ್ನು ಕೆಪಿಎಲ್ಸಿಗೆ ನೀಡಬೇಕು. ಈ ಮಾಹಿತಿಯಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿ, ನೌಕರರ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತುಕ್ರಮ ಜರುಗಿಸಬೇಕು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿದ ಪ್ರಕರಣಗಳಲ್ಲಿ ಒತ್ತುವರಿದಾರರು ನಕಲಿ ದಾಖಲೆ ಸೃಷ್ಟಿಸುತ್ತಿದ್ದಾರೆ. ಅಕ್ರಮ ಒತ್ತುವರಿಯನ್ನು ಕಾನೂನುಬದ್ಧಗೊಳಿಸುತ್ತಿರುವುದರ ಕುರಿತು ಜಿಲ್ಲಾಡಳಿತವು ಸೂಕ್ಷ್ಮವಾಗಿ ಪರಿಶೀಲಿಸಬೇಕು. ನಕಲಿ ದಾಖಲೆ ಸೃಷ್ಟಿಸಿರುವ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಮತ್ತು ಇದಕ್ಕೆ ಸಹಕರಿಸಿದ ಅಧಿಕಾರಿ, ನೌಕರರ ವಿರುದ್ಧ ಕಾಲಮಿತಿಯೊಳಗೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದಾರೆ ಎಂದು ಗೊತ್ತಾಗಿದೆ.
ಒತ್ತುವರಿಯಾದ ಹಾಗೂ ಒತ್ತುವರಿ ತೆರವುಗೊಳಿಸಿದ ಕುರಿತು ನಿಖರವಾದ ವಿವರ, ಮಾಹಿತಿಗಳನ್ನು ಒದಗಿಸುವಲ್ಲಿ ವಿಫಲವಾದಲ್ಲಿ ಅಥವಾ ತಪ್ಪಿದ್ದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.