ಹಿಂದುತ್ವದ ಬೋನಿಗೆ ಮತ್ತೆ ಬಿದ್ದ ಜೆಡಿಎಸ್

Update: 2023-10-11 05:38 GMT

ಪ್ರೊ. ಶಿವರಾಮಯ್ಯ, ಬೆಂಗಳೂರು

ಕಳೆದ ಕೆಲವು ವರ್ಷಗಳಿಂದ ನಾಲ್ಕಾರು ಸಲ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕೂಡುವಳಿ ಹಾಗೂ ತೀರುವಳಿ ನಡೆದಿದೆ. ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ‘‘ಜೆಡಿಎಸ್ ಇನ್ನುಮುಂದೆ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’’ ಎಂದು ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡರು ಮತ್ತು ಎಚ್. ಡಿ. ಕುಮಾರಸ್ವಾಮಿಯವರು ಹೇಳಿದ್ದುಂಟು. ಆದರೆ ಈಗ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದೆ. ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನೇ ನನೆಗುದಿಗೆ ಬಿಟ್ಟಿದೆ. ಅಂತಹದ್ದರಲ್ಲಿ ಜೆಡಿಎಸ್ ಅದರೊಂದಿಗೆ ಮೈತ್ರಿ ಮಾಡಿಕೊಂಡಿರುವುದು ವಿಪರ್ಯಾಸವೇ ಸರಿ. ಅಲ್ಲದೆ ಕೇವಲ ಒಬ್ಬ ಸಂಸದ ಇರುವ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ರಾಜ್ಯ ಬಿಜೆಪಿ ನಾಯಕರಲ್ಲೂ ಅಸಮಾಧಾನ ಎದ್ದು ಕಾಣುತ್ತಿದೆ.

ಇಂತಹದ್ದರಲ್ಲಿ ಕುಮಾರಸ್ವಾಮಿ ಮಾಡಿಕೊಂಡಿರುವ ಮೈತ್ರಿಯನ್ನು ಜೆಡಿಎಸ್ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡರು ಸಮ್ಮತಿಸಿ ಸಮರ್ಥಿಸಿಕೊಂಡಿರುವುದು ಕಾಲದ ಮಹಿಮೆಯೆಂದೇ ಹೇಳಬೇಕು. ರಾಜಕಾರಣದಲ್ಲಿ ಏನಾದರೂ ನಡೆಯಬಹುದು ಎಂಬ ಮಾತನ್ನು ಒಪ್ಪಿದರೂ ಇಂದಿನ ಬೆಳವಣಿಗೆಯಿಂದ ಜೆಡಿಎಸ್ ಬೆಂಬಲಿಸುವ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕಸಿವಿಸಿ ಆಗಿರುವುದಂತೂ ಖಂಡಿತ. ಈಗ ಬಾಯಿಬಿಟ್ಟು ಹೇಳದಿದ್ದರೂ ಸೂಕ್ತ ಕಾಲಕ್ಕಾಗಿ ಅವರು ಕಾಯುತ್ತಿರುತ್ತಾರೆೆ. ಇದೆಲ್ಲಾ ಹೇಳಬೇಕಾದ ಪ್ರಮೇಯ ಯಾಕೆಂದರೆ ಇದೇ ದೇವೇಗೌಡರು ಪ್ರಧಾನಿಯಾದ (1997) ಒಂದೇ ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಯುನೈಟೆಡ್ ಫ್ರಂಟ್ ಒಕ್ಕೂಟದಿಂದ ಕಳಚಿಕೊಂಡಿತು. ಸರಕಾರ ಅತಂತ್ರವಾಯಿತು. ದೇವೇಗೌಡರು ರಾಜೀನಾಮೆಗೆ ಮುಂದಾದರು. ಆಗ ಸ್ವತಃ ವಾಜಪೇಯಿ ಅವರೇ ತಮ್ಮ ಪಕ್ಷ ನಿಮಗೆ ಬೆಂಬಲ ಕೊಡುತ್ತದೆ ಎಂಬ ಸಂದೇಶವನ್ನು ರವಾನಿಸಿದರು. ಆದರೆ ಜಾತ್ಯತೀತ ಮೌಲ್ಯದ ಆರಾಧಕರಾಗಿದ್ದ ಗೌಡರು ಸಂಘಪರಿವಾರದ ಸಂದೇಶವನ್ನು ತಣ್ಣಗೆ ನಿರಾಕರಿಸಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ಅವರೇನಾದರೂ ಬಿಜೆಪಿ ಬೆಂಬಲದಿಂದ ಮುಂದುವರಿದಿದ್ದರೆ ತಮ್ಮ ಅವಧಿಯನ್ನು ಪೂರೈಸಬಹುದಾಗಿತ್ತು. ಆದರೆ ಅದಕ್ಕೆ ಮನಸೋಲಲಿಲ್ಲ. ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಇದೊಂದು ಮಾದರಿ.

ಹೀಗಿರುತ್ತ, 2006ರಲ್ಲಿ ಎಚ್. ಡಿ. ಕುಮಾರಸ್ವಾಮಿ ಇವರ ಒಪ್ಪಿಗೆ ಕೇಳದೆ ಬಿಜೆಪಿ ಜೊತೆ 20-20 ತಿಂಗಳ ಮೈತ್ರಿ ಸರಕಾರ ರಚಿಸಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಅಧಿಕಾರ ಹಂಚಿಕೊಂಡರು. ಮಾಧ್ಯಮಗಳು ‘‘ದೇವೇಗೌಡರ ಜಾತ್ಯತೀತ ಅಸ್ಮಿತೆಗೆ ಭಂಗ ಬರಲಿಲ್ಲವೆ?’’, ‘‘ಅವರದು ಕೇವಲ ಧೃತರಾಷ್ಟ್ರ ಮೋಹ’’ ಎಂದೆಲ್ಲ ಆಡಿಕೊಂಡವು. ಆಗ ದೇವೇಗೌಡರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಹೀಗಾಗಿಯೇ ಅವರ ಸದೃಢ ಆರೋಗ್ಯ ಹದಗೆಟ್ಟಿತ್ತು. ಈ ಕುರಿತು ಅವರ ಹಿರಿಯ ಅಳಿಯ ಹೃದಯ ತಜ್ಞ ಡಾ. ಸಿ. ಎನ್. ಮಂಜುನಾಥ್ ಹೀಗೆ ನೆನಪಿಸಿಕೊಳ್ಳುತ್ತಾರೆ:

‘ಇದು ನನ್ನ ಜೀವನದಲ್ಲಿ ಕರಾಳ ದಿನ’ (2006) ಎಂದು ಜೋರಾಗಿ ಕೂಗಾಡಿದರು. ಸುಮಾರು ಎರಡು ತಿಂಗಳ ಕಾಲ ಮೌನವಾಗಿ ಕುಗ್ಗಿಹೋದರು. ಬಂಧುಬಳಗದವರು ಹೆದರಿ ಕುಮಾರಸ್ವಾಮಿಯನ್ನು ಕರೆತಂದು ತಪ್ಪೊಪ್ಪಿಕೊಳ್ಳಲು ಪ್ರೇರೇಪಿಸುತ್ತಾರೆ. ಅವರು ಬಂದು ಕ್ಷಮೆ ಯಾಚಿಸಿ ‘ದೇಶಾಂತರ ಹೋಗುತ್ತೇನೆ’ ಎನ್ನುತ್ತಾರೆ. ‘‘ಆದರೆ ನೀನು ರಾಜೀನಾಮೆ ಕೊಟ್ಟು ದೇಶಾಂತರ ಹೋದರೆ ಸಮಸ್ಯೆ ಬಗೆಹರಿಯುವುದಿಲ್ಲ, ಹೇಗೂ ನೀನು ಮುಖ್ಯಮಂತ್ರಿ ಆಗಿರುವೆ- ಹೋಗಿ ಜನರಿಗೆ ಒಳ್ಳೆಯದು ಮಾಡು’’ ಎಂದು ಹೇಳಿ ಕಳಿಸಿದರು.’ (ಆಧಾರ: ಎಚ್.ಡಿ. ದೇವೇಗೌಡ ಬದುಕು ಮತ್ತು ದುಡಿಮೆ ಕುರಿತು ಸುಗತ ಶ್ರೀನಿವಾಸರಾಜು ಇಂಗ್ಲಿಷಿನಲ್ಲಿ ಬರೆದ ‘ಈuಡಿಡಿoತಿs iಟಿ ಈieಟಜ; ಕನ್ನಡ ಅನುವಾದ ‘ನೇಗಿಲ ಗೆರೆಗಳು’) ಹೀಗೆ ದೇವೇಗೌಡರು ಇತ್ತೀಚಿನ ವರೆಗೂ ತಾವು ನಂಬಿ ಆಚರಣೆಯಲ್ಲಿಟ್ಟುಕೊಂಡಿದ್ದ ಜಾತ್ಯತೀತ ಮೌಲ್ಯ ಸಿದ್ಧಾಂತಕ್ಕೆ ಬದ್ಧರಾಗಿ ರಾಜಕಾರಣ ನಡೆಸಿದ್ದಾರೆ.

ಇತ್ತೀಚಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಹ ‘‘ತಮಿಳುನಾಡಿನಂತೆ ಒಂದು ಪ್ರಬಲ ರಾಜಕೀಯ ಪಕ್ಷವನ್ನು ಕಟ್ಟಿಯೇ ತೀರುತ್ತೇನೆ. ಅಲ್ಲಿಯ ವರೆಗೆ ನನ್ನ ಪ್ರಾಣ ಹೋಗದು’’ ಎಂದು ಪ್ರಚಾರ ಸಂದರ್ಭದಲ್ಲಿ ಹೇಳಿದ್ದುಂಟು.

ಇಷ್ಟೆಲ್ಲಾ ಹೇಳಿದ ತಾತ್ಪರ್ಯವೇನೆಂದರೆ ಗೌಡರು ಲೆಕ್ಕಾಚಾರ ತಪ್ಪಿದ್ದೆಲ್ಲಿ? ಈಗ ಎಚ್.ಡಿ. ಕುಮಾರಸ್ವಾಮಿ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ದಿಲ್ಲಿಯವರೆಗೆ ಹೋಗಿ ಎನ್‌ಡಿಎ ಸೇರಿ ಮೈತ್ರಿ ಮಾಡಿಕೊಂಡಿರುವುದನ್ನು ದೇವೇಗೌಡರು ಸಮರ್ಥಿಸುತ್ತಾ ‘‘ಇಲ್ಲಿ ಯಾವ ಪಕ್ಷ ಪೂರ್ಣ ಜಾತ್ಯತೀತವಾಗಿದೆ. ಎಡಪಕ್ಷಗಳೂ ಕೂಡ ಹಿಂದೆ ಬಿಜೆಪಿಯೊಂದಿಗೆ ಕೈ ಜೋಡಿಸಿಲ್ಲವೆ?’’ ಎಂದು ಮಗನ ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ. ಇದು ಅವಕಾಶ ಸಿಂಧು ಸಿದ್ಧಾಂತವೆನಿಸುತ್ತದೆ.

ಒಂದು ಅನುಭವವಂತೂ ಸತ್ಯ. ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದಾಗ ಬ್ರಹ್ಮಾಂಡ ಭ್ರಷ್ಟಾಚಾರ, ನಕಲಿ ಗೋರಕ್ಷಕರ ಹಾವಳಿ, ಅನೈತಿಕ ಪೊಲೀಸ್‌ಗಿರಿ ಅವಾಂತರ, ಹಿಜಾಬ್, ಆಝಾನ್ ಇತ್ಯಾದಿ ಕಿರಿ ಕಿರಿ ಪ್ರತಿದಿನದ ಮಾತಾಗಿತ್ತು. ಆದರೆ ದುಡಿವ ವರ್ಗಕ್ಕೆ ಸಾಮಾಜಿಕ ನೆಮ್ಮದಿ ಮುಖ್ಯ. ಈಚೆಗೆ ರಾಜ್ಯದ ಮತದಾರರು ಕೇವಲ ‘ಕೈ’ನ ಐದು ಗ್ಯಾರಂಟಿಗಳಿಗಷ್ಟೇ ಬೆಂಬಲಿಸಿ ಮತ ನೀಡಲಿಲ್ಲ; ಸಮಾಜದ ನೆಮ್ಮದಿಗಾಗಿ ಕಾಂಗ್ರೆಸ್‌ನ ಕೈ ಹಿಡಿದ್ದಾರೆ. ಇಂತಹದ್ದರಲ್ಲಿ ಜೆಡಿಎಸ್ ತಮ್ಮ ಜಾತ್ಯತೀತ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿ ‘ಇರುಳು ಕಂಡ ಬಾವಿಗೆ ಹಗಲು ಬಿದ್ದರು’ ಎಂಬಂತೆ ಮತ್ತೆ ಬೀಳಲು ಹೊರಟಿರುವುದು ದುರ್ದೈವ. ಕೊನೆಗೆ ಶೂನ್ಯಕ್ಕಿಳಿದಿದ್ದರೂ ಚಿಂತೆಯಿಲ್ಲ; ಮುಂದೆ ಒಂದು ದಿನ ಚೇತರಿಸಿಕೊಂಡು ಜೆಡಿಎಸ್ ಎದ್ದು ಬರುತ್ತಿತ್ತು. ಮತದಾರನ ಸಹಾನುಭೂತಿ ಗಳಿಸುತ್ತಿತ್ತು. ಆದರೆ ಈಗ ಅದೇ ಹಿಂದುತ್ವದ ಬೋನಿಗೆ ಬಿದ್ದಿರುವುದು ವಿಪರ್ಯಾಸ.

ಮಹಾಭಾರತದಲ್ಲಿ ಶರಶಯ್ಯಾಗತನಾಗಿದ್ದ ಭೀಷ್ಮ ದೇವರ ಧ್ಯಾನದಲ್ಲಿದ್ದರೂ ಮೊಮ್ಮಗ ದುರ್ಯೋಧನನಿಗೆ ಯುದ್ಧಭೂಮಿಯಲ್ಲಿ ಏನಾಯಿತೋ ಎಂದು ಆಗಾಗ ವಿಚಲಿತನಾಗುತ್ತಿದ್ದನಂತೆ. ಹಾಗೆಯೇ ಸದ್ಯ ವಯೋವೃದ್ಧರೂ, ರಾಜಕಾರಣ ಮುತ್ಸದ್ದಿಯೂ ಆದ ದೇವೇಗೌಡರು ಈಗ ಪುತ್ರ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಅವರು ಎಷ್ಟೇ ಸಮರ್ಥಿಸಿಕೊಂಡರೂ ಜೆಡಿಎಸ್ ನಡೆ ಇದುವರೆಗಿನ ಅವರ ಸಿದ್ಧಾಂತಕ್ಕೆ ಹೊರತಾದುದು. ‘ಮಣ್ಣಿನ ಮಗ’ ಎಂದು ಕರೆಸಿಕೊಂಡ ಈ ಹಿರಿಯ ಜೀವ ದೇವೇಗೌಡರು ಇದುವರೆಗೆ ಗಳಿಸಿಕೊಂಡು ಬಂದ ಪ್ರಜಾಪ್ರಭುತ್ವ ಮೌಲ್ಯ ಸೌಂದರ್ಯ ಮುಂದೆಯೂ ಮಸುಕಾಗದಂತೆ ಕಾಪಾಡಿಕೊಳ್ಳಬೇಕೆಂಬುದು ಜನತೆಯ ಆಶಯ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News