ಹರ್ಯಾಣ ಗಲಭೆಯ ಹಿಂದಿರುವ ಮೋನು ಮನೆಸರ್
ಮನೆಸರ್ ಥರದವರ ಉಪಸ್ಥಿತಿ, ದೇಶದಲ್ಲಿ ಹಿಂದುತ್ವ ಸಂಚಲನದ ಹೊಸ ಮುಖಗಳ ಬಗ್ಗೆ ಗಮನ ಸೆಳೆಯುತ್ತದೆ. ಸರಕಾರವೇ ಕೋಮುಗಲಭೆಯನ್ನು ಬೆಂಬಲಿಸುವುದು ದೇಶದಲ್ಲಿ ಹೊಸದಲ್ಲ. ವಾಸ್ತವವಾಗಿ, ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರ ಹೆಚ್ಚು ವ್ಯವಸ್ಥಿತವಾಗಿದೆ. ರಾಜಕೀಯ ತಜ್ಞ ಪಾಲ್ ಬ್ರಾಸ್ ಅವರು ಇದನ್ನು ‘ಸಾಂಸ್ಥಿಕ ಗಲಭೆ ವ್ಯವಸ್ಥೆ’ ಎಂದು ವಿವರಿಸುತ್ತಾರೆ. ಈ ಇತಿಹಾಸದ ಹೊರತಾಗಿಯೂ, ಅಂತಹ ಘೋರ ಅಪರಾಧಗಳ ಆರೋಪಿಗೆ ಸರಕಾರದ ಬೆಂಬಲವಿರುವುದು ವಿಚಿತ್ರವಾಗಿದೆ.
ಮೋನು ಮನೆಸರ್ ಎಂಬ ಯೂಟ್ಯೂಬರ್ 1 ಲಕ್ಷ ಚಂದಾದಾರರನ್ನು ದಾಟಿದ್ದಕ್ಕಾಗಿ ಗೂಗಲ್ನಿಂದ ‘‘ಸಿಲ್ವರ್ ಪ್ಲೇ ಬಟನ್’’ ಪಡೆಯುತ್ತಾನೆ. ಈತನ ಯೂಟ್ಯೂಬ್ ಚಾನೆಲ್ನಲ್ಲಿ ಇರುತ್ತಿದ್ದುದಾದರೂ ಏನು? ಹರ್ಯಾಣ ಮೂಲದ ಮೋನು ಮನೆಸರ್ ಮತ್ತವನ ಸ್ನೇಹಿತರು ಈ ಚಾನೆಲ್ನಲ್ಲಿ ಪೋಸ್ಟ್ ಮಾಡುತ್ತಿದ್ದುದು, ಮಾಂಸಕ್ಕಾಗಿ ದನಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಜನರನ್ನು ಬೆನ್ನಟ್ಟಿ ಹಲ್ಲೆ ಮಾಡುವ ವೀಡಿಯೊಗಳನ್ನು.
ಮನೆಸರ್ ಬಜರಂಗದಳದ ಸದಸ್ಯ. ೨೦೧೫ರಲ್ಲಿ ಹರ್ಯಾಣದಲ್ಲಿ ಬಿಜೆಪಿ ನೇತೃತ್ವದ ಸರಕಾರ ಜಾರಿಗೊಳಿಸಿದ ಗೋಮಾಂಸ ವಿರೋಧಿ ಕಾನೂನಿನ ಬೆಂಬಲದೊಂದಿಗೆ ಮನೆಸರ್ ಥರದ ಸ್ವಯಂಘೋಷಿತ ಗೋರಕ್ಷಕರು ಪೊಲೀಸರ ರಕ್ಷಣೆಯಲ್ಲಿ ಕೆಲಸ ಮಾಡುವುದು ಶುರುವಾಯಿತು.
ಮನೆಸರ್ ಮುಖ್ಯವಾಗಿ ಗುರಿ ಮಾಡುವುದೇ ಹರ್ಯಾಣದ ಸಣ್ಣ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶವಾದ ನೂಹ್ ನಿವಾಸಿಗಳನ್ನು. ಜನವರಿಯಲ್ಲಿ ಆತ ಮತ್ತವನ ಜೊತೆಗಾರರು ನೂಹ್ನಿಂದ ಮೂವರು ಮುಸ್ಲಿಮರನ್ನು ಅಪಹರಿಸಿ ಹಲ್ಲೆ ಮಾಡುವ ವೀಡಿಯೊ ಅಪ್ಲೋಡ್ ಮಾಡಿದರು. ನಂತರ ಮೂವರಲ್ಲಿ ಒಬ್ಬರಾದ ವಾರಿಸ್ ಖಾನ್ ಶವವಾಗಿ ಪತ್ತೆಯಾಗಿದ್ದರು.
ವೀಡಿಯೊ ಸಾಕ್ಷ್ಯಗಳ ಹೊರತಾಗಿಯೂ, ಪೊಲೀಸರು ದಾಳಿಯಲ್ಲಿ ಮನೆಸರ್ ಪಾತ್ರ ಇಲ್ಲವೆಂದರು. ಬದಲಿಗೆ ಖಾನ್ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಕಥೆ ಕಟ್ಟಿದರು. ಅವರ ಬಳಿ ದನಗಳೂ ಇರಲಿಲ್ಲ ಎಂದು ಮೂವರ ಸಂಬಂಧಿಕರು ಹೇಳಿದ್ದು, ಕೊಲೆಯಲ್ಲಿ ಪೊಲೀಸರು ಮನೆಸರ್ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದರು.
ಒಂದು ತಿಂಗಳ ನಂತರ, ರಾಜಸ್ಥಾನದ ಜುನೈದ್ ಮತ್ತು ನಾಸಿರ್ ಎಂಬವರು ಹರ್ಯಾಣದಲ್ಲಿ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದರು. ಖಾನ್ ಪ್ರಕರಣದಲ್ಲಿ ಆದಂತೆ ಸಂಬಂಧಿಕರು ಮನೆಸರ್ ವಿರುದ್ಧ ದೂರಿದರು ಮತ್ತು ಪೊಲೀಸರು ಶಾಮೀಲಾಗಿರುವ ಶಂಕೆಯನ್ನೂ ವ್ಯಕ್ತಪಡಿಸಿದರು. ಪೊಲೀಸರು ಆತನನ್ನು ಬಂಧಿಸಲಿಲ್ಲ. ಇನ್ನೊಂದೆಡೆ ಹಿಂದುತ್ವ ಗುಂಪುಗಳಿಂದ ಸಾಮೂಹಿಕ ಬೆಂಬಲ ದೊರೆಯಿತು. ಆತನನ್ನು ಬೆಂಬಲಿಸಲು ಸಮುದಾಯ ಪಂಚಾಯತ್ ನಡೆಸಲಾಯಿತು. ರಾಜಸ್ಥಾನ ಪೊಲೀಸರು ಬಂಧಿಸಲು ಬಂದರೆ ಅವರು ಹಿಂದಿರುಗುವುದಿಲ್ಲ ಎಂದು ಬೆದರಿಕೆಯೊಡ್ಡಲಾಯಿತು.
ಈ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗದ ಆತ ಮೊನ್ನೆ ಜುಲೈ ೩೦ರಂದು, ಮಾರನೇ ದಿನ ನೂಹ್ನಲ್ಲಿ ನಡೆಯುವ ಬಜರಂಗದಳದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಾಗಿ ವೀಡಿಯೊ ಮೂಲಕ ಹೇಳಿದ್ದ. ಅದು ವೈರಲ್ ಆಯಿತು. ಮೆರವಣಿಗೆ ವೇಳೆ ಕೋಮುಗಲಭೆ ನಡೆದೇಬಿಟ್ಟಿತು. ಮಸೀದಿಯ ಧರ್ಮಗುರುವನ್ನು ಕೊಲ್ಲಲಾಯಿತು. ಎಷ್ಟೋ ಅಮಾಯಕರ ಬದುಕು ಅತಂತ್ರವಾಯಿತು.
ಹಿಂಸಾಚಾರದಲ್ಲಿ ಮನೆಸರ್ ಪಾತ್ರದ ಬಗ್ಗೆ ಹರ್ಯಾಣ ಸರಕಾರ ತನಿಖೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಮೇವಾತ್ನ ಒಬ್ಬ ಮುಸ್ಲಿಮ್ ವ್ಯಕ್ತಿ ಹೇಳುವುದು ಹೀಗೆ: ‘‘ಅವನು ಇಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದ್ದರೂ, ಪೊಲೀಸರು ಅವನನ್ನು ಹಿಡಿಯಲು ಸಾಧ್ಯವಿಲ್ಲ ಎನ್ನುತ್ತಾರೆ. ಅವನು ನಮ್ಮನ್ನು ಬೆದರಿಸುವ ವೀಡಿಯೊ ಮಾಡುತ್ತಾನೆ ಮತ್ತು ಸಂದರ್ಶನ ನೀಡುತ್ತಾನೆ ಮತ್ತು ನಾವು ಕೋಪವನ್ನೂ ವ್ಯಕ್ತಪಡಿಸಬಾರದೆ?’’
ಮನೆಸರ್ ಥರದವರ ಉಪಸ್ಥಿತಿ, ದೇಶದಲ್ಲಿ ಹಿಂದುತ್ವ ಸಂಚಲನದ ಹೊಸ ಮುಖಗಳ ಬಗ್ಗೆ ಗಮನ ಸೆಳೆಯುತ್ತದೆ. ಸರಕಾರವೇ ಕೋಮುಗಲಭೆಯನ್ನು ಬೆಂಬಲಿಸುವುದು ದೇಶದಲ್ಲಿ ಹೊಸದಲ್ಲ. ವಾಸ್ತವವಾಗಿ, ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರ ಹೆಚ್ಚು ವ್ಯವಸ್ಥಿತವಾಗಿದೆ. ರಾಜಕೀಯ ತಜ್ಞ ಪಾಲ್ ಬ್ರಾಸ್ ಅವರು ಇದನ್ನು ‘ಸಾಂಸ್ಥಿಕ ಗಲಭೆ ವ್ಯವಸ್ಥೆ’ ಎಂದು ವಿವರಿಸುತ್ತಾರೆ. ಈ ಇತಿಹಾಸದ ಹೊರತಾಗಿಯೂ, ಅಂತಹ ಘೋರ ಅಪರಾಧಗಳ ಆರೋಪಿಗೆ ಸರಕಾರದ ಬೆಂಬಲವಿರುವುದು ವಿಚಿತ್ರವಾಗಿದೆ.
ಹರ್ಯಾಣದಂತಹ ರಾಜ್ಯಗಳಲ್ಲಿ ಉಗ್ರ ಹಿಂದುತ್ವ ಗುಂಪುಗಳಿಗೆ ಇಂತಹ ಸ್ಪಷ್ಟ ಬೆಂಬಲ ಮೋದಿ ಅಧಿಕಾರ ಶುರುವಾಗುವುದರ ಜೊತೆಗೇ ಪ್ರಾರಂಭವಾಯಿತು. ೨೦೧೬ರಲ್ಲಿ ‘ಕಾರವಾನ್’ ವರದಿಗಾರ ಇಶಾನ್ ಮಾರ್ವೆಲ್ ಅವರು, ರಾಜ್ಯ ಸರಕಾರದ ಸಂಪೂರ್ಣ ಬೆಂಬಲದೊಂದಿಗೆ ನಂಬಲಾಗದ ರೀತಿಯಲ್ಲಿರುವ ಮುಸ್ಲಿಮ್ ವಿರೋಧಿ ಹಿಂಸಾಚಾರದ ಬಗ್ಗೆ ಬಹಳ ವಿವರವಾಗಿ ಬರೆದಿದ್ದಾರೆ. ವಾಸ್ತವವಾಗಿ, ಹೆಚ್ಚಿನ ಮುಸ್ಲಿಮ್ ವಿರೋಧಿ ಹಿಂಸಾಚಾರವನ್ನು ಪೊಲೀಸರು ಮತ್ತು ಹಿಂದುತ್ವ ಗುಂಪುಗಳು ಜಂಟಿಯಾಗಿ ನಡೆಸುತ್ತಿದ್ದವು ಎಂಬುದನ್ನು ಮಾರ್ವೆಲ್ ಪತ್ತೆ ಮಾಡಿದರು. ಮೋನು ಮನೆಸರ್ ಈಗ ಆರೋಪಿಯಾಗಿರುವ ಕೊಲೆ ಪ್ರಕರಣಗಳಲ್ಲಿ ಈ ಮಾದರಿ ಸ್ಪಷ್ಟವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉಗ್ರ ಹಿಂದುತ್ವ ಗುಂಪುಗಳು ಆಳವಾಗಿ ಬೇರೂರಿವೆ.
ಇಂಥ ಹಿಂಸಾಚಾರಗಳಲ್ಲಿ ಇರುವುದು ಒಬ್ಬ ಮನೆಸರ್ ಮಾತ್ರವಲ್ಲ. ಇತ್ತೀಚೆಗೆ ಬಿಜೆಪಿ ಕಪಿಲ್ ಮಿಶ್ರಾ ಅವರನ್ನು ದಿಲ್ಲಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಿತು. ೨೦೨೦ರಲ್ಲಿ ಮಿಶ್ರಾ ದಿಲ್ಲಿ ಪೊಲೀಸರಿಗೆ, ಅವರು ನಗರದಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ನಿಲ್ಲಿಸದಿದ್ದರೆ ಕಾನೂನನ್ನು ಕೈಗೆತ್ತಿಕೊಳ್ಳುವುದಾಗಿ ಬೆದರಿಸಿದ್ದರು. ಇದು ಹಿಂಸಾಚಾರಕ್ಕೆ ಕಾರಣವಾಯಿತು. ಈಶಾನ್ಯ ದಿಲ್ಲಿಯಾದ್ಯಂತ ಗಲಭೆಗಳು ನಡೆದವು. ದಿಲ್ಲಿಯಲ್ಲಿ ಗಲಭೆಕೋರರಿಗೆ ಮಿಶ್ರಾ ಬೆಂಬಲವಿದೆ ಎಂಬುದನ್ನು ವರದಿಗಳು ಹೇಳುತ್ತವೆ.
ಜುಲೈ ೩೦ರಂದು, ಕಪಿಲ್ ಗುರ್ಜರ್ ಎಂಬ ವ್ಯಕ್ತಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರನ್ನು ಭೇಟಿಯಾದ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ೨೦೨೦ರಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರತಿಭಟಿಸುವ ಜನರ ಮೇಲೆ ಗುಜ್ಜರ್ ಗುಂಡು ಹಾರಿಸಿದ್ದರು. ಆದರೆ ಅಷ್ಟೇ ಬೇಗ ಜಾಮೀನು ಸಿಕ್ಕಿತ್ತು.
ಇಂತಹ ಅಂಶಗಳಿಗೆ ಬಿಜೆಪಿ ಬೆಂಬಲ ನೀಡುವುದು ಕಾನೂನು ಮತ್ತು ಸುವ್ಯವಸ್ಥೆಗೆ ಮತ್ತು ನಿರ್ದಿಷ್ಟವಾಗಿ ಮುಸ್ಲಿಮರಿಗೆ ಅಪಾಯಕಾರಿ. ಕೋಮು ಅರಾಜಕತೆ ಮೋದಿ ಕಾಲದ ಪುನರಾವರ್ತಿತ ವಿದ್ಯಮಾನವಾಗಿದ್ದರೂ, ಪಕ್ಷ ಅದನ್ನು ಬೆಂಬಲಿಸದೆ ಇರುವ ಸಾಧ್ಯತೆಯಿಲ್ಲ. ಮೊದಲ ಕಾರಣವೆಂದರೆ, ಅದರ ಸಿದ್ಧಾಂತ. ಉಗ್ರ ಹಿಂದುತ್ವ ಗುಂಪುಗಳನ್ನು ಬೆಂಬಲಿಸುವ ಮೂಲಕವೇ ಬಿಜೆಪಿ ಪ್ರಬಲವಾಗುವುದು. ಎರಡನೆಯದು, ಚುನಾವಣೆಯಲ್ಲಿ ಇದು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಲಾಭ ತರುತ್ತದೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್ ತಮ್ಮ ರಾಜ್ಯದಲ್ಲಿನ ಕೊಲೆಗಳಿಗಾಗಿ ಮನೆಸರ್ ಬಂಧನಕ್ಕೆ ನಿರಾಕರಿಸಿದ್ದರೂ, ರಾಜಸ್ಥಾನ ಪೊಲೀಸರು ಅವನನ್ನು ಬಂಧಿಸಲು ಸ್ವತಂತ್ರರು ಎಂದು ಹೇಳಿದ್ದಾರೆ. ವಾಸ್ತವವಾಗಿ, ರಾಜಸ್ಥಾನ ಪೊಲೀಸರು ಈ ಹಿಂದೆ ಮನೆಸರ್ ಬಂಧನಕ್ಕೆ ಯತ್ನಿಸಿದಾಗ, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಇವೆಲ್ಲದರ ನಡುವೆಯೇ, ಮುಂಬರುವ ರಾಜಸ್ಥಾನ ಚುನಾವಣೆಯನ್ನು ಧ್ರುವೀಕರಣಗೊಳಿಸಲು ಬಿಜೆಪಿ ಉದ್ದೇಶಿಸಿದೆ ಎಂಬುದು ನಿಜ. ೨೦೨೪ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಇನ್ನೂ ಹಲವು ಕೋಮು ಘಟನೆಗಳು ನಡೆದರೆ ಅಚ್ಚರಿಯಿಲ್ಲ. ಮತ್ತು ಮನೆಸರ್ ಥರದವರು ಬಿಜೆಪಿಗೆ ಬೇಕಾಗಬಹುದು.
(ಕೃಪೆ: scroll.in)