ಮೌಢ್ಯದ ವಿಷವರ್ತುಲದಲ್ಲಿ ಜಾಗೃತಿಯ ಬೀಜ ಬಿತ್ತಿದ ನಾರಾಯಣ ಗುರು

‘‘ಜಾತಿ ವಿಷಮತೆಯ ಅಂಧಕಾರದಿಂದ ಕೆಳಜಾತಿಯವರನ್ನು ಮೇಲೆತ್ತಲು ಶಿಕ್ಷಣ ಒಂದೇ ದಾರಿ. ಶಿಕ್ಷಣದ ಮೂಲಕ ಅವರ ಆತ್ಮವಿಶ್ವಾಸ ಮತ್ತು ಕೇವಲ ಶಿಕ್ಷಣ ಮಾತ್ರ ಬಡವರನ್ನು ಪ್ರಬಲರನ್ನಾಗಿ ಮಾಡಬಲ್ಲದು. ಹಾಗಾಗಿ, ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ, ಉದ್ಯಮದಿಂದ ಅಭಿವೃದ್ಧಿ ಹೊಂದಿರಿ’’ ಎಂದು ಸಾರ್ವಕಾಲಿಕವಾದಂತಹ ಕರೆ ಕೊಟ್ಟವರು ನಾರಾಯಣ ಗುರು.

Update: 2023-08-31 05:56 GMT

ಅದು ಹತ್ತೊಂಬತ್ತನೇ ಶತಮಾನದ ಆದಿ ಭಾಗ. ಕೇರಳದಲ್ಲಿ ಸವರ್ಣೀಯರು ಕಾಯಾ ವಾಚಾ ಮನಸಾ ಪಾಲಿಸುತ್ತ ಬಂದಿರುವ ವರ್ಣ ವ್ಯವಸ್ಥೆ ತಾಂಡವವಾಡುತ್ತಿದ್ದು; ಕಂದಾ ಚಾರ, ಮೌಢ್ಯಾಚರಣೆ, ದಬ್ಬಾಳಿಕೆ ಚರಮಸೀಮೆಯಲ್ಲಿದ್ದ ಕಾಲಘಟ್ಟ. ಸವರ್ಣೀಯರ ಮೇಲೆ ಅವರ್ಣೀಯರ ನೆರಳೂ ಬೀಳುವಂತಿಲ್ಲ; ಕೆಳಜಾತಿಯವರು ದೇವಸ್ಥಾನದ ವಠಾರದಲ್ಲೂ ಸುಳಿಯುವಂತಿಲ್ಲ; ದಲಿತರ ಹೆಂಗಸರು ರವಕೆ ತೊಡುವಂತಿಲ್ಲ; ಕೆಲವೊಂದು ಪ್ರದೇಶಗಳಲ್ಲಿ ಅವರು (ಮುಲಕ್ಕರಮ್) ಮೊಲೆ ತೆರಿಗೆಯನ್ನು ನೀಡಬೇಕಾದ ನೀಚ ಪದ್ಧತಿಯಿದ್ದ ಕರಾಳ ಕಾಲ. (ತಿರುವನಂತಪುರದ ಚೇರ್ಕಾಲದಲ್ಲಿ ನಂಗೆಲ್ ಎಂಬ ಸ್ವಾಭಿಮಾನಿ ದಲಿತ ಮಹಿಳೆ ಬಂಡೆದ್ದು ತೆರಿಗೆ ವಸೂಲಿಗೆ ಬಂದವರಿಗೆ ತನ್ನ ಎರಡೂ ಮೊಲೆಗಳನ್ನು ಕತ್ತರಿಸಿ ಕೊಟ್ಟು, ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟ ಕರುಣಾಜನಕ ಕಥೆ ದಿಗ್ಭ್ರಾಂತಗೊಳಿಸುವಂತಹದ್ದು!)

ಇಂತಹ ಅಮಾನುಷ ಕೃತ್ಯಗಳನ್ನು ಗಮನಿಸಿಯೇ ಸ್ವಾಮಿ ವಿವೇಕಾನಂದರು ಆ ದಿನಗಳ ಕೇರಳವನ್ನು, ‘ಹುಚ್ಚರ ಆಸ್ಪತ್ರೆ’ ಎಂದು ಸಂಬೋಧಿಸಿದ್ದರಬೇಕು. ವಿವೇಕಾನಂದರನ್ನು ಕೇರಳಕ್ಕೆ ಬಂದು ಈ ದೌರ್ಜನ್ಯಗಳಿಂದ ದೀನ ದಲಿತರನ್ನು ಬಿಡುಗಡೆಗೊಳಿಸಬೇಕೆಂದು ಸಂಘಟರೋರ್ವರು ಕೋರಿಕೊಂಡಾಗ, ‘‘ನಿಮ್ಮಲ್ಲಿ ನಾರಾಯಣ ಗುರುಗಳು ಇರುವರಲ್ಲ, ಅವರನ್ನು ಭೇಟಿ ಮಾಡಿ’’ ಎಂದು ವಿವೇಕಾನಂದರು ಹೇಳಲು ಕಾರಣ, ಅದಾಗಲೇ ನಾರಾಯಣ ಗುರುಗಳ ಸಾಮಾಜಿಕ ಕಾಳಜಿ, ಧಾರ್ಮಿಕ ಚಿಂತನೆ, ಶೈಕ್ಷಣಿಕ ಕಾರ್ಯವೈಖರಿ ಸುತ್ತೆಲ್ಲ ಪ್ರಚಲಿತವಾಗಿತ್ತು.

ನಾಣುವಿನ ಜನನ, ಬಾಲ್ಯ, ವಿದ್ಯಾಭ್ಯಾಸ

1856ರ ಆಗಸ್ಟ್ ತಿಂಗಳಲ್ಲಿ ಕೇರಳದ ಚೆಂಬಳಂತಿ ಎಂಬಲ್ಲಿ ನಾಣುವಿನ ಜನನವಾಗುತ್ತದೆ. ಈಳವ ಜಾತಿಯ ತಂದೆ ಮಾದನ್ ಆಶಾನ್ ಮತ್ತು ತಾಯಿ ಕುಟ್ಟಿಯಮ್ಮ (ಚಿಕ್ಕಿ) ದಂಪತಿಗೆ ನಾಣುವಿನ ಜೊತೆಗೆ ಮೂವರು ಹೆಣ್ಣು ಮಕ್ಕಳು. ನಾಣುವಿನ ಅಜ್ಜ ಮತ್ತು ಇಬ್ಬರು ಮಾವಂದಿರು ವೈದ್ಯರಾಗಿದ್ದರು.

ಬಾಲ್ಯದಲ್ಲಿ ನಾಣು ಮಾತುಕತೆ, ಆಲೋಚನೆ, ನಡವಳಿಕೆಗಳಲ್ಲಿ ಇತರರಿಗಿಂತ ಭಿನ್ನನಾಗಿ ಏಕಾಂತಪ್ರಿಯರಾಗಿದ್ದನು. ಕಲಿಕೆಯಲ್ಲಿ ಅಪಾರ ಪ್ರತಿಭಾವಂತನಾಗಿದ್ದು ಮಲಯಾಳಂ, ಸಂಸ್ಕೃತ ಮತ್ತು ತಮಿಳು ಭಾಷೆಯಲ್ಲಿ ಪಾಂಡಿತ್ಯ ಗಳಿಸುವಂತಾಯಿತು. ವಿದ್ಯಾಭ್ಯಾಸ ಮುಗಿಸಿ ಮನೆಗೆ ಹಿಂದಿರುಗಿ ಬಂದಾಗ ನಾಣುವಿನ ಮನಸ್ಸು ಆಗಲೇ ಭಕ್ತಿ, ಅಧ್ಯಾತ್ಮದತ್ತ ವಾಲಿತ್ತು. ಈಳವ ಜನಾಂಗದವರ ಮದುವೆ ಸಂಪ್ರದಾಯದಂತೆ ನಾಣುವಿನ ಅನುಪಸ್ಥಿತಿಯಲ್ಲಿ ಸೋದರ ಸಂಬಂಧಿ ಕಾಳಿಯಮ್ಮನೊಂದಿಗೆ ವಿವಾಹ ಶಾಸ್ತ್ರವಾಗಿತ್ತು. ಆದರೆ ನಾಣುವಿನ ದೃಷ್ಟಿ ಅದಾಗಲೇ ಸ್ವಹಿತ ತ್ಯಜಿಸಿ ಲೋಕಹಿತದತ್ತ ನೆಟ್ಟಿರಬೇಕು. ಈ ಮದುವೆಯನ್ನು ಒಪ್ಪದೆ ನಾಣು ಮನೆ ಬಿಟ್ಟು ಮರುತ ಮಲೈ ಬೆಟ್ಟವೇರಿದರು. ಅಲ್ಲಿ ಆರು ವರ್ಷ ಯೋಗ, ಧ್ಯಾನ ತಪಗೈದು ಪ್ರಕೃತಿ ಪ್ರಾಣಿ ಪಕ್ಷಿ ಸಂಕುಲದೊಂದಿಗೆ ಸಂವಹನಿಸುತ್ತ ದೈವಿಕ ಜ್ಞಾನಾರ್ಜನೆಯಲ್ಲಿ ನಿರತರಾದರು.

ನಾರಾಯಣನಾದ ನಾಣು

ಆನಂತರ ನಾಣು, ನಾರಾಯಣ ಗುರುವಾಗಿ ನಾಡಿಗೆ ಮರಳಿ ಸಮಾಜದಲ್ಲಿ ಬಲವಾಗಿ ಬೇರು ಬಿಟ್ಟಿರುವ ಅಮಾನವೀಯ ಅಸ್ಪಶ್ಯತೆಯೇ ಎಲ್ಲಾ ತಾರತಮ್ಯಕ್ಕೆ ಕಾರಣವೆಂದರಿತು ಆ ಬಗ್ಗೆ ಜನ ಜಾಗೃತಿ ಮೂಡಿಸಲು ಪಣತೊಟ್ಟರು. ಮೇಲ್ಜಾತಿಯವರ ವಿರೋಧ ಬೆದರಿಕೆ ಬಹಿಷ್ಕಾರಕ್ಕೆ ಎದೆಗುಂದದ ಸಂತ ಕೆಳಜಾತಿಯವರನ್ನು ಕೈಹಿಡಿದು ನಡೆಸಲು ಮುನ್ನಡಿಯಿಟ್ಟರು.

ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ (ಎಸ್.ಎನ್.ಡಿ.ಪಿ.) ಸಂಘಮ್ ಸ್ಥಾಪಿಸಿ ಅಜ್ಞಾನ, ಮೌಢ್ಯ, ದಬ್ಬಾಳಿಕೆ ವಿರುದ್ಧ ಕೇರಳದಾದ್ಯಂತ ಜನಜಾಗೃತಿಯ ಕಹಳೆ ಊದಿದರು. ಕಾಲಕ್ರಮೇಣ ಡಾ. ಪಲ್ಪು ಮತ್ತು ಮಹಾಕವಿ ಕುಮಾರನ್ ಆಶಾನ್ ಅಂತಹವರು ಗುರುಗಳ ಸುಧಾರಣಾ ಹಾದಿಯಲ್ಲಿ ಜೊತೆಯಾಗುವರು.

ಶಿಕ್ಷಣದಿಂದ ಮಾತ್ರ ಕೆಳಜಾತಿಯವರ ಉದ್ಧಾರ

‘‘ಜಾತಿ ವಿಷಮತೆಯ ಅಂಧಕಾರದಿಂದ ಕೆಳಜಾತಿಯವರನ್ನು ಮೇಲೆತ್ತಲು ಶಿಕ್ಷಣ ಒಂದೇ ದಾರಿ. ಶಿಕ್ಷಣದ ಮೂಲಕ ಅವರ ಆತ್ಮವಿಶ್ವಾಸ ಮತ್ತು ಕೇವಲ ಶಿಕ್ಷಣ ಮಾತ್ರ ಬಡವರನ್ನು ಪ್ರಬಲರನ್ನಾಗಿ ಮಾಡಬಲ್ಲದು. ಹಾಗಾಗಿ, ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ, ಉದ್ಯಮದಿಂದ ಅಭಿವೃದ್ಧಿ ಹೊಂದಿರಿ’’ ಎಂದು ಸಾರ್ವಕಾಲಿಕವಾದಂತಹ ಕರೆ ಕೊಟ್ಟರು.

‘‘ಯಾರೂ ಇನ್ನೊಬ್ಬರ ಜಾತಿ ಕೇಳಬಾರದು, ತಮ್ಮ ಜಾತಿ ಹೇಳಬಾರದು ಮತ್ತು ಜಾತಿ ಬಗ್ಗೆ ಯೋಚಿಸಲೂ ಬಾರದು’’ ಎಂದು ಎಚ್ಚರಿಸಿದರು.

ಸೇಂದಿ ತೆಗೆಯುವ ಉದ್ಯೋಗದಲ್ಲಿ ನಿರತರಾಗಿರುವ ಈಳವರಿಗೆ; ‘‘ಮದ್ಯವೆನ್ನುವುದು ವಿಷವಾಗಿದೆ. ಅದನ್ನು ತಯಾರಿಸಬಾರದು, ಮಾರಬಾರದು ಕುಡಿಯಲೂ ಬಾರದು’’ ಎಂದು ಬಲವಾಗಿ ಪ್ರತಿಪಾದಿಸಿದರು. ‘‘ಮದ್ಯ ಕೇವಲ ವಿಷ ಅಲ್ಲ. ವಿಷ ಕುಡಿದವರನ್ನು ಮಾತ್ರ ಕೊಲ್ಲುತ್ತದೆ. ಆದರೆ ಮದ್ಯ ಇಡೀ ಸಂಸಾರದ ಸೊಬಗನ್ನು ನಾಶ ಮಾಡುತ್ತದೆ’’ ಎಂದು ಜಾಗೃತಿಯ ಬೀಜ ಬಿತ್ತಿದರು.

ಅರವೀಪ್ಪುರದಲ್ಲಿ ಮಹಾ ಕ್ರಾಂತಿ! ಶೂದ್ರ ಶಿವನ ಪ್ರತಿಷ್ಠಾಪನೆ!

ಜನರು ಸದಾ ಮೊರೆಹೋಗುವುದು ದೇವರನ್ನು ಮತ್ತು ಅವರ ಚಟುವಟಿಕೆಗಳಿಗೆ ದೇವಸ್ಥಾನವೇ ಕೇಂದ್ರ ಬಿಂದುವಾಗಿರುವುದನ್ನು ಅರಿತ ಗುರುಗಳು, ಶೋಷಣೆಯಿಂದ ಜರ್ಜರಿತವಾದವರಲ್ಲಿ ಆತ್ಮ ಜ್ಞಾನದ ಅರಿವನ್ನು ಮೂಡಿಸಲು ದೇವಸ್ಥಾನಗಳ ನಿರ್ಮಾಣದಂತಹ ಕ್ರಾಂತಿಕಾರಿ ಹೆಜ್ಜೆ ಇಟ್ಟರು.

1888ರಲ್ಲಿ ಅರವೀಪ್ಪುರದಲ್ಲಿ ಶಿವರಾತ್ರಿಯಂದು ದೃಢ ಸಂಕಲ್ಪ ಬದ್ಧರಾಗಿದ್ದ ಗುರುಗಳು ಅಲ್ಲೇ ಪ್ರಶಾಂತ ಸ್ಥಳದಲ್ಲಿ ಝುಳು ಝುಳು ಹರಿಯುತ್ತಿದ್ದ ನದಿಗಿಳಿವರು. ಮೇಲೆ ಬರುವಾಗ ಗುರುಗಳ ಬೊಗಸೆಯಲ್ಲಿ ನುಣುಪಾದ ಶಿವಲಿಂಗದಂತಹ ಶಿಲೆ!

ಶತ ಶತಮಾನಗಳಿಂದ ದೇವಸ್ಥಾನ ಪ್ರವೇಶ ನಿಷಿದ್ಧವಾಗಿ, ತಮ್ಮಿಷ್ಟ ದೇವರನ್ನು ಪೂಜಿಸಿ ಕಣ್ತುಂಬಿಕೊಳ್ಳುವ ಪರಮಾನಂದದ ದೈವೀ ಸುಖದಿಂದ ವಂಚಿತರಾದವರಿಗೆಲ್ಲ ಇನ್ನು ಇವನೇ ಶಿವ, ಇವನೇ ಸತ್ಯ! ಅಂತಹ ಘನ ಗಂಭೀರ ಮೌನ ಸಾಮ್ರಾಜ್ಯದಲ್ಲಿ ಸತತ ಮೂರು ತಾಸು, ಆ ಶಿಲೆಯನ್ನು ಅಪ್ಪಿದ ದೀನ ಸಂತನ ಕಣ್ಣುಗಳಲ್ಲಿ ಮೌನವಾಗಿ ಹರಿದದ್ದು ಬರೀ ಕಣ್ಣೀರೇ...!?

ಅಬ್ಬಾ! ಎಂತಹ ನಿರ್ಧಾರವದು! ಮತಿಹೀನತೆಗೆ, ಕಂದಾಚಾರಕ್ಕೆ, ಮಡಿವಂತಿಕೆಗೆ ನೀಡಿದ ಮೊದಲ ಮರ್ಮಾಘಾತ!

ಜೀವ ಬೆದರಿಕೆ ನೀಡಿದ ಕೋಪೋದ್ರಿಕ್ತ ಮೇಲ್ಜಾತಿಯವರಿಗೆ, ‘‘ಇದು ನಿಮ್ಮ ಶಿವನಲ್ಲ. ಇವ ಶೂದ್ರ ಶಿವ’’ ಎಂದುತ್ತರಿಸಿ ಮೌನವಾಗಿಯೇ ಧಾರ್ಮಿಕ ಮಹಾಕ್ರಾಂತಿಯ ಕಹಳೆ ಊದಿದರು. ಹೀಗೆ ಜಾತಿ ಮತ ಧರ್ಮ ಭೇದ, ದ್ವೇಷ ಯಾವುದೂ ಇಲ್ಲದೆ ಎಲ್ಲರೂ ಸೋದರತ್ವದಿಂದ ಬಾಳುವಂತಹ ಮಾದರಿ ಸ್ಥಾನ ಇದೆಂದು ಸಾರುವ ಉದಾತ್ತ ಆಶಯದ ಬೀಜ ಬಿತ್ತಿದರು.

ಮುಂದೆ ಕೆಳಜಾತಿಯವರಿಗಾಗಿ ವಿವಿಧೆಡೆಗಳಲ್ಲಿ ಶಿವಾಲಯ, ಶಾರದಾ ಮಠ ಪ್ರತಿಷ್ಠಾಪಿಸಿದರು. ಒಂದು ಕಡೆ ಮೂರ್ತಿಯ ಸ್ಥಾನದಲ್ಲಿ ಬೆಳಗುವ ದೀಪ, ಇನ್ನೊಂದು ಕಡೆ ಕೇವಲ ಕನ್ನಡಿ ಪ್ರತಿಷ್ಠಾಪಿಸಿ ಜ್ಞಾನದೇಗುಲದ ಕಲ್ಪನೆಯನ್ನು ಸಾಕಾರಗೊಳಿಸಿದರು. (ಮಂಗಳೂರಿನಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಶಿಲಾನ್ಯಾಸ).

‘‘ಮನುಷ್ಯರಿಗೆ ಒಂದೇ ಜಾತಿ, ಒಂದೇ ಮತ, ಒಂದೇ ದೈವ’’

ಎಂಬ ಮಹಾಮಂತ್ರ ಪಾಲಿಸುತ್ತ, ದೇವಸ್ಥಾನದ ವಠಾರದಲ್ಲಿ ಸನ್ಯಾಸಿ ಮಠ, ಶಾಲೆ, ಗ್ರಂಥಾಲಯ, ಉಪನ್ಯಾಸ ಗೃಹ, ಸಭಾಗೃಹ, ದವಾಖಾನೆ, ವಿಶ್ರಾಂತಿ ಗೃಹ ನಿರ್ಮಾಣ ಮಾಡಿದರು. ವಠಾರದೊಂದಿಗೆ ಗರ್ಭಗುಡಿಯೂ ಶುಚಿಯಾಗಿರಬೇಕೆಂದು ಪೂಜೆಗೆ ಕೇವಲ ಹೂವುಗಳನ್ನು ಮಾತ್ರ ಉಪಯೋಗಿಸಿದರು. ಇಂತಹ ಪರಿಸರದಲ್ಲಿ ಬಡ ಬಗ್ಗರು ಅಧ್ಯಾತ್ಮ, ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜೀಕವಾಗಿ ಸದೃಢರಾಗಿ ಸರ್ವೋದಯ ಸಾಧಿಸುವಂತಾಗಬೇಕೆಂಬ ಆಲೋಚನೆಯಿರಿಸಿಕೊಂಡು ಕಾರ್ಯ ನಿರ್ವಹಿಸಿದರು.

ಮೊದಲ ವಿಶ್ವಧರ್ಮ ಸಮ್ಮೇಳನ

ಕೇರಳದ ಆಗಿನ ಧಾರ್ಮಿಕ ವಾತಾವರಣವು ಪರಧರ್ಮ ನಿಂದೆ, ಕಲಹ, ಮತಾಂತರ ಹಾವಳಿಗಳಿಂದ ಹದಗೆಟ್ಟು ಹೋದ ಸಂದರ್ಭ. ಸ್ವತಃ ವೇದೋಪನಿಷತ್ ಗ್ರಂಥ ಪಾರಂಗತ, ಬೈಬಲ್, ಕುರ್‌ಆನ್ ಮುಂತಾದ ಧರ್ಮಗ್ರಂಥಗಳ ಪಠಣ ಮಾಡಿರುವ ಗುರುಗಳಿಗೆ ಧಾರ್ಮಿಕ ಅಸಹಿಷ್ಣುತೆಯಿಂದ ಸರ್ವಜನರ ಕಲ್ಯಾಣ ಅಸಾಧ್ಯವೆಂದರಿವಾಗುವುದು. 1924ರ ಸುಮಾರಿಗೆ ತಮ್ಮ ಅದ್ವೈತ ಆಶ್ರಮದ ಮೂಲಕ ಸರ್ವಧರ್ಮ ಸಮ್ಮೇಳನ ಆಯೋಜಿಸಿದರು. ‘‘ಈ ಸಮ್ಮೇಳನ ವಾದ ಮಾಡಲಿಕ್ಕಾಗಲಿ, ವಾದ ಮಾಡಿ ಗೆಲ್ಲಲಿಕ್ಕಾಗಲಿ ಅಲ್ಲ. ವಿವಿಧ ಧರ್ಮಗಳ ತಿರುಳನ್ನು ತಿಳಿಯಲು ಮತ್ತು ತಿಳಿಯಪಡಿಸಲು’’ ಎಂದು ಸಾರಿದರು. ಇದು ವಿಶ್ವದ ಎರಡನೇ ಮತ್ತು ಏಶ್ಯದ ಮೊದಲ ವಿಶ್ವಧರ್ಮ ಸಮ್ಮೇಳನವಾಗಿ ಬಹು ಚರ್ಚಿತವಾಯಿತು.

ವೈಕಂ ಸತ್ಯಾಗ್ರಹ ಮಹಾತ್ಮಾ ಗಾಂಧೀಜಿಯ ಭೇಟಿ

1924-25ರಲ್ಲಿ ದೀರ್ಘವಾಗಿ ನಡೆದ ವೈಕಂ ಸತ್ಯಾಗ್ರಹ ಸಂದರ್ಭದಲ್ಲಿ ನಾರಾಯಣ ಗುರುಗಳನ್ನು ಗಾಂಧೀಜಿ ಶಿವಗಿರಿಯಲ್ಲಿ ಭೇಟಿಯಾಗುವರು. ಮೇಲ್ಜಾತಿಯವರು ಕೆಳಜಾತಿಯವರಿಗೆ ದೇವಸ್ಥಾನದ ಪರಿಸರದಲ್ಲಿ ನಡೆದಾಡುವುದನ್ನು ನಿಷೇಧಿಸುವ ಜಾತಿ ವೈಷಮ್ಯದ ವಿರುದ್ಧ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ಸತ್ಯಾಗ್ರಹಕ್ಕೆ ನಾರಾಯಣ ಗುರುಗಳು ಸಂಪೂರ್ಣವಾಗಿ ಸಹಕರಿಸುತ್ತಾರೆ. ಸವರ್ಣೀಯರ ಮನಪರಿವರ್ತನೆ ಮಾಡುವುದು ಗಾಂಧೀಜಿಯ ಉದ್ದೇಶವಾದಂತೆ, ಮೌಢ್ಯ ನಿರ್ಮೂಲನೆ ಮೂಲಕ ಕೆಳವರ್ಗದವರ ಆತ್ಮೋನ್ನತಿಯು ನಾರಾಯಣ ಗುರುಗಳ ಗುರಿಯಾಗಿತ್ತು. ನಾರಾಯಣ ಗುರುಗಳು ಸಾರಿದ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಸಂದೇಶದ ಬಗ್ಗೆ ಹಿಂದೆ ಸಂದೇಹ ವ್ಯಕ್ತ ಪಡಿಸುತ್ತಿದ್ದ ಗಾಂಧೀಜಿ ಗುರುಗಳ ಭೇಟಿಯ ನಂತರದ ದಿನಗಳಲ್ಲಿ ಪೂರ್ಣವಾಗಿ ಒಪ್ಪಿಕೊಂಡರೆಂದು ಪ್ರತೀತಿ. ಗುರುಗಳ ಭೇಟಿಯ ಹಿನ್ನೆಲೆಯಲ್ಲಿ ಗಾಂಧೀಜಿ ಹೀಗೆ ಹೇಳುತ್ತಾರೆ:

‘‘ನಾರಾಯಣ ಗುರುಗಳಿಗೇ ವೈಕಂನ ದೇವಸ್ಥಾನದ ಮಾರ್ಗಗಳಲ್ಲಿ ನಡೆದಾಡುವ ಸ್ವಾತಂತ್ರ್ಯ ಇಲ್ಲವೆಂದು ಕೇಳಿದಾಗ ನನಗೆ ನಾಚಿಕೆಯುಂಟಾ ಯಿತು’’ ಎಂದು ಉದ್ಗರಿಸುತ್ತಾರೆ. ಶಿವಗಿರಿ ಮಠದ ಮಹತ್ವ, ಅಲ್ಲಿನ ಸ್ವಚ್ಛತೆ ಮತ್ತಿತರ ಸುವ್ಯವಸ್ಥೆಗೆ ಮಾರು ಹೋಗುತ್ತಾರೆ. ಆಚಾರ್ಯ ವಿನೋಭಾ ಬಾವೆ, ಸಿ. ರಾಜ ಗೋಪಾಲಾಚಾರ್ಯ, ಬಾಬು ರಾಜೇಂದ್ರ ಪ್ರಸಾದ್ ಮುಂತಾದವರು ಶಿವಗಿರಿ ಮಠವನ್ನು ಸಂದರ್ಶಿಸಿ ಗುರುಗಳ ವರ್ಚಸ್ಸಿನಿಂದ ಪ್ರಭಾವಿತರಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ದಾಖಲಿಸಲಾಗಿದೆ.

ಕವಿವರ್ಯ ರವೀಂದ್ರನಾಥ ಠಾಗೋರರ ಶಿವಗಿರಿ ಭೇಟಿ

ಠಾಗೋರರು ಗುರುಗಳನ್ನು ಕಂಡು ಅವರ ತೇಜಸ್ಸಿಗೆ ಮಾರು ಹೋಗಿ ಹೀಗೆ ಹೇಳುತ್ತಾರೆ:

‘‘ನಾನು ಜಗತ್ತಿನ ಹಲವಾರು ಕಡೆ ಹೋಗಿ ಬಂದಿರುವೆ. ಹಲವು ಮಹಾನ್ ವ್ಯಕ್ತಿಗಳನ್ನು ಭೇಟಿಯಾಗುವ ಭಾಗ್ಯ ಲಭಿಸಿದೆ. ಆದರೆ ನಾರಾಯಣ ಗುರುಗಳಿಗಿಂತ ಅಷ್ಟೇ ಯಾಕೆ, ಅವರಷ್ಟಾದರೂ ಮಹಾನ್ ಗುಣಗಳುಳ್ಳ ಒಬ್ಬ ಮಹಾಪುರುಷನನ್ನು ಕಾಣಲು ಇದುವರೆಗೆ ಸಾಧ್ಯವಾಗಿಲ್ಲ’’

ಸಂಸ್ಕೃತ, ಮಲಯಾಳ ಮತ್ತು ತಮಿಳಿನಲ್ಲಿ ಪಾಂಡಿತ್ಯ ಹೊಂದಿರುವ ಗುರುಗಳು ಅನೇಕಾನೇಕ ಸ್ತೋತ್ರ, ನುಡಿ ಸಂದೇಶ, ದಾರ್ಶನಿಕ ಕಾವ್ಯ ಕೃತಿಗಳನ್ನು ಬರೆದಿರುವರು.

ಸ್ವಾತಂತ್ರ್ಯೋತ್ತರ ಕೇರಳದ ರಾಜಕೀಯ ಕ್ಷೇತ್ರದಲ್ಲಿ ನಾರಾಯಣ ಗುರುಗಳ ಸರ್ವಧರ್ಮ ಸಮಭಾವದಂತಹ ತತ್ವಾಲೋಚನೆಗಳು ದಟ್ಟ ಪ್ರಭಾವ ಬೀರುತ್ತ ಬಂದಿರುವುದನ್ನು ಗಮನಿಸಬಹುದು. ಇಂದೂ ಗುರುಗಳ ಅನುಯಾಯಿಗಳು ಕೇರಳದಲ್ಲಿ ಪ್ರಬಲ ರಾಜಕೀಯ ನಿರ್ಣಾಯಕ ಶಕ್ತಿಯಾಗಿರುತ್ತಾರೆ. ಇಂದು ಕೇರಳದವರನ್ನು ‘‘ಲೆಫ್ಟಿಸ್ಟ್’’ ಎಂದು ಮೂಗು ಮುರಿಯುವವರು ನಾರಾಯಣ ಗುರುಗಳು ಅಂದು ನಡೆದ ಕ್ಲಿಷ್ಟಕರ ಹಾದಿ, ತಳೆದ ದಿಟ್ಟ ನಿಲುವುಗಳು ಮತ್ತು ಕೈಗೊಂಡ ಕ್ರಾಂತಿಕಾರಿ ನಿರ್ಧಾರಗಳಿಂದ ಹಾಕಿಕೊಟ್ಟ ಭದ್ರ ಬುನಾದಿಯನ್ನು ಅರಗಿಸಿ ಕೊಳ್ಳಲು ಅಸಮರ್ಥರೋ ಅಥವಾ ಜಾಣ ಮವೋ ಊಹೆೆಗೆ ಬಿಟ್ಟದ್ದು. ಅದೇ ಹಿಂದುಳಿದ ಈಳವ ಮತ್ತು ನಾಡರ್ ಸಮುದಾಯದಿಂದ ಬಂದ ಇಬ್ಬರು ಇಸ್ರೋ ವಿಜ್ಞಾನಿಗಳು ಚಂದ್ರಯಾನ 3ರ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂಬುದು ಸಣ್ಣ ವಿಷಯವಲ್ಲ!

‘‘ಮನುಷ್ಯ ಯಾವ ಜಾತಿ, ಧರ್ಮದವರಾದರೇನು? ಯಾವ ವರ್ಣದವನಾದರೇನು? ಎಲ್ಲಿಯವನಾದರೇನು? ಮುಖ್ಯವಾಗಿ ಮನುಷ್ಯ ಒಳ್ಳೆಯವನಾಗಿರಬೇಕು’’ ಎನ್ನುತ್ತ ಸದಾ ದೀನರಿಗಾಗಿ ಮಿಡಿಯುತ್ತಿದ್ದ ಸಂತ ಮಹಾತ್ಮನ ನುಡಿ ಚಿಂತನೆಗಳು ಸಾರ್ವಕಾಲಿಕವಾದವುಗಳು.

ಈ ಕಾರುಣ್ಯಮೂರ್ತಿ ಅನಾರೋಗ್ಯ ನಿಮಿತ್ತವಾಗಿ 20.09.1928 ರಂದು ದೇಹಾಂತರಾಗುವರು. ಅವರ ಇಚ್ಛೆಯಂತೆ ಶಿವಗಿರಿಯಲ್ಲಿ ಸಮಾಧಿ ಮಾಡಲಾಯಿತು.

ಧರ್ಮರಾಜಕಾರಣ ರಾಜಾರೋಷವಾಗಿ ಮುನ್ನೆಲೆಗೆ ಬಂದು ಸಮಾಜವನ್ನು ಧರ್ಮಾಧಾರಿತವಾಗಿ ನೇರಾನೇರ ಒಡೆದು ಆಳುವಂತಹ ಪ್ರಸಕ್ತ ಕಾಲಘಟ್ಟದಲ್ಲಿ ನಾರಾಯಣ ಗುರುಗಳ ತತ್ವಚಿಂತನೆಯ ಪ್ರಸ್ತುತತೆ ಅರ್ಥಮಾಡಿಕೊಳ್ಳಬೇಕು. ಗುರುಗಳ ಅನುಯಾಯಿಗಳೆನಿಸಿಕೊಂಡವರು ಮುಖ್ಯವಾಗಿ ಕರಾವಳಿಯ ಬಿಲ್ಲವ ಜನಾಂಗ ಗುರುಗಳನ್ನು ದೈವಿಕ ಭಕ್ತಿಯಲಿ ಪೂಜಿಸಿ ಭಜಿಸಿ ಮೈಮರೆವುದರ ಹೊರತಾಗಿ ಈ ಮಹಾ ಮಾನವತಾವಾದಿ ಸಂತಚೇತನ ನಡೆದ ಧಾರ್ಮಿಕ, ವೈಚಾರಿಕ ಹೆಜ್ಜೆ ಹಾದಿಯ ಕುರಿತು ತುಸುವಾದರೂ ಅರಿಯುವಂತಾದರೆ... !

(ಹಿನ್ನೆಲೆ: 1992ರಲ್ಲಿ ಶಿವಗಿರಿ ಕ್ಷೇತ್ರ ಸಂದರ್ಶನ ಸಮಯದ ಅನುಭವದ ಜೊತೆಗೆ ವಿವಿಧ ಲೇಖನ ಕೃತಿಗಳ ಓದು)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಗೋಪಾಲ ತ್ರಾಸಿ

contributor

Similar News